ಇಂದು ಬೆಳಿಗ್ಗೆ ಲಾಕ್ ಡೌನ್ ಸಮಯದಲ್ಲಿ ಗಂಡಸರ ಪರಿಪಾಟಲುಗಳ ಕುರಿತಾದ “ಗಂಡಸರ ಗೋಳು” ಕವಿತೆ ಬರೆದು ಪೋಸ್ಟ್ ಮಾಡಿದ್ದೆ. ಅದನ್ನು ಓದಿ ಕುಪಿತರಾದ ಅಸಂಖ್ಯಾತ ಹೆಂಗಳೆಯರು ಮೆಸೇಜು ಮಾಡಿ, ಕರೆ ಮಾಡಿ ಮತ್ತು ಕೆಲವು ಗ್ರೂಪುಗಳಲ್ಲಿ ಬಹಿರಂಗವಾಗಿಯೂ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಾ.. “ಸಾರ್.. ಗಂಡಸರದೇನು ಮಹಾಕಷ್ಟ.? ಈ ಲಾಕ್ ಡೌನ್ ಎಂಬುದು ಮನೆಯ ಹೆಣ್ಣುಗಳ ಪಾಲಿಗೆ ಅತಿದೊಡ್ಡ ಶಾಪವಾಗಿದೆ.
ಬೆಳಿಗ್ಗೆ ಮುಂಜಾನೆ ಆರಕ್ಕೆ ಆರಂಭವಾಗುವ ಕೆಲಸ-ಕಾರ್ಯ ರಾತ್ರಿ 12 ಆದರೂ ಮುಗಿಯೋಲ್ಲ. ತಿಂದು ತಿಂದು ಮನೆಯ ಗಂಡಸರ ಹೊಟ್ಟೆಗಳು ಗುಡಾಣವಾಗ್ತಿವೆ.
ದುಡಿದೂ ದುಡಿದೂ ನಮ್ಮ ರೆಟ್ಟೆಗಳು ಹೈರಾಣಾಗಿ ಹೋಗಿವೆ” ಎಂದು ಕೋಪ ಹೊರಹಾಕಿ, ನಮ್ಮ ಪಾಡಿನ ಬಗ್ಗೆಯೂ ಬರೆಯಿರಿ ಎಂದು ಬಹಿರಂಗವಾಗಿಯೇ ಕೇಳಿದ್ದಾರೆ. ಆ ಎಲ್ಲ ಹೆಣ್ಣುಗಳ ಒಕ್ಕೊರಲಿನ ಮನವಿಯೇ ಈ ಕವಿತೆ. ಒಪ್ಪಿಸಿಕೊಳ್ಳಿ..”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಮನವಿ..!
ಯೆಪ್ಪೋ ಪೋಲಿಸಪ್ಪಾ ಎಲ್ಲಿದಿಯಪ್ಪೋ.?
ನಮ್ಮನೆ ಕಡೆ ವಸಿ ಬಂದು ಹೋಗಪ್ಪೋ
ವಾರದಿಂದ ನಮ್ಮನೆ ಗಂಡು ಮುಂಡೇವು
ಒಂದೇ ಕಡೇ ಬಿದ್ದಲ್ಲೇ ಬಿದ್ಕೊಂಡಿದಾವೆ
ಅತ್ತ ಕಡೆ ಲೋಟ ಇತ್ತ ಕಡೆ ಇಡಂಗಿಲ್ಲ
ಮಧ್ಯಾಹ್ನ ಆದ್ರೂ ಸ್ನಾನ ಮಾಡಂಗಿಲ್ಲ
ಮೊಬೈಲ್ ಕೈಯಿಂದ ಕೆಳಗೆ ಬಿಡಂಗಿಲ್ಲ
ನಯಾಪೈಸೆ ಮನೆಕೆಲ್ಸಾ ಮಾಡ್ಕೊಡಂಗಿಲ್ಲ
ಬೇಕ್ಬೇಕಾದ್ದು ಮಾಡಿಸ್ಕೊಂಡು ತಿಂತಾವೆ
ತಿಂದಮೇಲೆ “ಥ್ಯಾಂಕ್ಸ್ ಫಾರ್ ಸರ್ವೀಸ್”
ಅಂತೇಳಿ ಐದು ನಿಮಿಶ ಚಪ್ಪಾಳೆ ತಟ್ತಾವೆ
ಮತ್ತೆ ಮಿಸುಕಾಡದ ಹಾಗೆ ಬಿದ್ದುಕೊಳ್ತಾವೆ
ಗಂಟೆಗಂಟೆಗೂ ಅವರು ಕೇಳಿ ಕೇಳಿದ್ದೆಲ್ಲ
ಬೇಯಿಸಿ ಬೇಯಿಸಿ ನಮ್ಮ ಮೈಯ್ಯಾಗಿನ
ನೀರೆಲ್ಲಾ ಬೆವರಾಗಿ ಹರಿದು ಹೋಗ್ಯಾವೆ
ನೆತ್ತರು ಆವಿಯಾಗಿ ಕುದಿದು ಹೋಗ್ಯಾವೆ
ಅವರ ಎಂಜಲು ತಟ್ಟೆಲೋಟ ಬಳಿದು
ಅಡಿಗೆಪಾತ್ರೆ ಪಗಡ ತಿಕ್ಕಿ ತಿಕ್ಕಿ ತೊಳೆದು
ಅಂಗೈ ಗೆರೆಗಳೆಲ್ಲ ಸವೆದು ಕೈಯ್ಯಾಗಿನ
ಚಮ್ಮಡಿನೇ ಕಿತ್ತು ಸುಲಿದು ಹೋಗ್ಯಾವೆ
ಬೀದಿನಾಗೆ ಅಲೆಯೋರ ಬೆನ್ನಮ್ಯಾಗೆ
ಲಾಠಿ ಬೀಸಿ ಬೀಸಿ ಸರಿ ಮಾಡಿದಂಗೆ
ನಮ್ಮನೆ ಸೋಂಬೇರಿಗಳ ಮೈಮ್ಯಾಗೂ
ಲಾಠಿ ಮಡಗಿ ಸರಿ ಮಾಡೋ ತಂದೆ.!
ಇಲ್ಲದಿದ್ರೆ ಲಾಕ್‍ಡೌನ್ ಮುಗಿಯೋದ್ರಾಗೆ
ಹೆಂಗಸರ ಬಾಡಿ ಬ್ರೇಕ್‍ಡೌನ್ ಆಗೋಗ್ತದೆ
ಈ ಗಂಡು ಬಡೇತಾವು ನೆಟ್ಟಗಾಗೋದ್ರಾಗೆ
ನಮ್ಮ ಉಸಿರು ಶಟ್‍ಡೌನ್ ಆಗೋಯ್ತದೆ.!
ಎ.ಎನ್.ರಮೇಶ್. ಗುಬ್ಬಿ.