spot_img
spot_img

ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು – ಪ್ರೊ. ವೆಂಕಟೇಶ ಹುಣಶಿಕಟ್ಟಿ ಅಧ್ಯಕ್ಷೀಯ ಭಾಷಣ

Must Read

spot_img
- Advertisement -

(ಅಧ್ಯಕ್ಷರ ಭಾಷಣ -೨೦೧೭, ಜುಲೈ ೧ -ಸುನ್ನಾಳದಲ್ಲಿ ನಡೆದ ರಾಮದುರ್ಗ ತಾಲೂಕಿನ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ.ವೆಂಕಟೇಶ ಹುಣಶೀಕಟ್ಟಿ -ಹಿರಿಯ ಸಾಹಿತಿಗಳು,ಹಲಗತ್ತಿ -೯೮೮೦೧೨೧೨೬೧ ಇವರ ಭಾಷಣದ ಸಾರ)

“ದರ್ಪಣ”ದ ಬಿಡುಗಡೆ ಕುರಿತು ಒಂದೆರಡು ಮಾತು ಹೇಳಲೇಬೇಕು. ಸಮ್ಮೇಳನದ ಉದ್ಘಾಟನೆಯ ಹಿಂದಿನ ದಿನವೂ ಸ್ಮರಣ ಸಂಚಿಕೆ ಕೈಸೇರಿರಲಿಲ್ಲ.ಪ್ರೆಸ್ ನವರಿಗೆ ಇನ್ನೂ ಒಂದಿಷ್ಟು ಹಣ ಕೊಡಬೇಕಾಗಿತ್ತು.ಉದ್ಘಾಟನೆಯ ದಿನವೇ ಬೆಳಿಗ್ಗೆ ಐದು ಗಂಟೆಗೆ ನಮ್ಮೂರು ಹಲಗತ್ತಿಯಿಂದ ಕಾರೊಂದನ್ನು ಬಾಡಿಗೆ ಮಾಡಿಕೊಂಡು ನಾನು ಮತ್ತು ನಮ್ಮೂರಿನವರೇ ಆದ ಚಂಡಕಿಯವರು (ಸಹ ಸಂಪಾದಕರು) ಬೆಳಗಾವಿಗೆ ಹೋದೆವು.ಅಲ್ಲಿ ಹೋಗಿ ವಿಚಾರಿಸಿದರೆ ಚೆಕ್ ನಡೆಯುವುದಿಲ್ಲ (ನನ್ನ ಹತ್ತಿರ ಚೆಕ್ ಇತ್ತು )ಹಾಗಾಗಿ ಪುಸ್ತಕ ಕೊಡುವುದಿಲ್ಲ ಎಂದುಬಿಟ್ಟರು.ಅಂದೇ ಮಧ್ಯಾಹ್ನ ೧೨ ಗಂಟೆಗೆ ಸ್ಮರಣ ಸಂಚಿಕೆ ಬಿಡುಗಡೆ ಎಂದು ಘೋಷಿಸಲಾಗಿತ್ತು. ಏನು ಮಾಡುವುದು? ಹದಿನೈದು ಪ್ರತಿಯಾದರೂ ಬೇಕು.”ಎಲ್ಲವನ್ನೂ ಈಗಾಗಲೇ ಕೊಡುವುದು ಬೇಡ,ಹದಿನೈದು ಪ್ರತಿಗಳನ್ನಾದರೂ ಕೊಡಿ.ನಿಮ್ಮ ಬಾಕಿ ಹಣವನ್ನು ನಗದು ರೂಪದಲ್ಲೇ ಕೊಟ್ಟು ಉಳಿದ ಪ್ರತಿಗಗಳನ್ನು ಒಯ್ಯುತ್ತೇವೆ “ಎಂದು ವಿನಂತಿಸಿಕೊಂಡಾಗ ೧೫ ಪ್ರತಿ ಕೊಟ್ಟರು.ಗಡಿಬಿಡಿಯಿಂದ ಕಾರು ಹತ್ತಿ ಬೆಳಗಾವಿ ಬಿಟ್ಟೆವು.

ನಮ್ಮ ಅದೃಷ್ಟ ಚೆನ್ನಾಗಿರಲಿಲ್ಲ.ಇನ್ನೇನು ಯರಗಟ್ಟಿ ೧೦-೧೨ಕಿ.ಮೀ.ದೂರ ಇರುವಾಗಲೇ ಕಾರು ಕೆಟ್ಟು ನಿಂತಿತು. ರಿಪೇರಿಗಾಗಿ ಮೇಸ್ತ್ರಿಯೇ ಬರಬೇಕೆಂದ ಡ್ರೈವರ್.ಏನು ಮಾಡುವುದು?ಅದಾಗಲೇ ೧೦ ಗಂಟೆಯಾಗಿತ್ತು.೧೨ ರೊಳಗೆ ಪುಸ್ತಕ ತಲುಪಬೇಕು.ಪುಸ್ತಕಗಳೊಂದಿಗೆ ಚಂಡಕಿಯವರನ್ನು ಬಸ್ಸಿನಲ್ಲಿ ರಾಮದುರ್ಗಕ್ಕೆ ಕಳುಹಿಸಿದೆ. ಕಾರು ರಿಪೇರಿ ಮಾಡಿಕೊಂಡು ನಾನು ರಾಮದುರ್ಗಕ್ಕೆ ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು.ಅಷ್ಟರೊಳಗಾಗಿ ಸರಿಯಾದ ಸಮಯಕ್ಕೇ ಸಂಚಿಕೆ ಬಿಡುಗಡೆಯಾಯ್ತು ಎಂಬ ಸುದ್ದಿ ಕೇಳಿ ಸಮಾಧಾನವಾಯ್ತು.

- Advertisement -

ನಾನು ಇಷ್ಟೆಲ್ಲ ಹಳೆ ಪುರಾಣ ಯಾಕೆ ಹೇಳಲೇಬೇಕಾಯಿತೆಂದರೆ ಒಂದು ಸಮ್ಮೇಳನದ ಯಶಸ್ಸಿನ ಹಿಂದೆ ಸಂಘಟಕರ ಎಷ್ಟೆಲ್ಲ ಪರಿಶ್ರಮ,ತೊಳಲಾಟ ಇರುತ್ತದೆ ಎಂಬುದನ್ನು ಎತ್ತಿ ತೋರಿಸಲು.ನನಗಾದ ಅನುಭವವನ್ನು ಇನ್ನೂ ವರೆಗೂ ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಇಂದು ಆ ಸಂದರ್ಭ ಒದಗಿ ಬಂತು. ಸಂಘಟಕರಿಗೆ ಸಲಾಮು.

೨೦೦೪ ನೇ ವರ್ಷ ನಿಜಕ್ಕೂ ರಾಮದುರ್ಗ ತಾಲ್ಲೂಕಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳಿಗೆ ನಾಂದಿ ಹಾಡಿದ ವರ್ಷವೆಂದೇ ಹೇಳಬಹುದು. ಆಗ ದಿ.ಹರದಗಟ್ಟಿಯವರು ಬೆಳಗಾವಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು
ಆರ್.ಎಂ.ಪಾಟೀಲರು ತಾಲೂಕಾ ಅಧ್ಯಕ್ಷರಾಗಿದ್ದರು. ರಾಮದುರ್ಗದ ಕೆಲವೊಂದು ರಸ್ತೆಗಳಿಗೆ ಸಾಲಿ ರಾಮಚಂದ್ರ ರಾಯರು, ಡಾ.ಡಿ.ಎಸ್.ಕರ್ಕಿ,ಬಿ.ಸಿ.ದೇಸಾಯಿ ಮುಂತಾಗಿ ಹೆಸರಿಡಲಾಯ್ತು. ಭಾವ ತರಂಗ ಎಂಬ ಕವನ ಸಂಕಲನ ಹಾಗೂ ಕವಿ ಕಾವ್ಯ ಪರಂಪರೆ,ಎಂಬ ಪುಸ್ತಕ,”ದರ್ಪಣ”ಎಂಬ ಸ್ಮರಣ ಸಂಚಿಕೆ ಪ್ರಕಟವಾದದ್ದು ತಾಲೂಕಾ ಘಟಕದ ವತಿಯಿಂದಲೇ.

ಪ್ರಪ್ರಥವಾಗಿ ರಾಮದುರ್ಗದಲ್ಲಿ ತಾಲೂಕಾ ಸಮ್ಮೇಳನ ಜರುಗಿಸಬೇಕೆಂದು ನಿರ್ಧರಿಸಲಾಯ್ತು.ಸುನ್ನಾಳದವರೇ ಆದ ದಿ.ಎನ್.ವ್ಹಿ.ಪಾಟೀಲರು ಆಗ ಶಾಸಕರಾಗಿದ್ದರು.ಅವರನ್ನೇ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯ್ತು. ಅವರನ್ನಿಲ್ಲಿ ಸ್ಮರಿಸೋಣ.ಮುಂದೆ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಮಹಾದೇವಪ್ಪ ಯಾದವಾಡ ಅವರು ಶಾಸಕರಾದರು.ಹಾಗಾಗಿ ಅವರನ್ನೇ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿಸಲಾಯ್ತು. ಈಗಿನ ಹಾಗೆ ಆಗ ಪರಿಷತ್ತಿನಿಂದ ಆರ್ಥಿಕ ಸಹಾಯ ಸಿಗುತ್ತಿರಲಿಲ್ಲ. ದಾನಿಗಳಿಂದ, ಜಾಹೀರಾತುಗಳಿಂದ ಹಣ ಸಂಗ್ರಹಿಸಿ ಸಮ್ಮೇಳನ ನಡೆಸಿದ್ದಲ್ಲದೇ “ದರ್ಪಣ”ಎಂಬ ಸ್ಮರಣ ಸಂಚಿಕೆಯನ್ನೂ ಪೂರ್ಣ ಪ್ರಮಾಣದದಲ್ಲಿ ಹೊರತರಲಾಯ್ತು.ಆಗಲೇ ಅದಕ್ಕೆ ಎಪ್ಪತ್ತು ಸಾವಿರ ಖರ್ಚಾಗಿತ್ತು.(ನಾನೇ ಸಂಪಾದಕರಾಗಿದ್ದೆ )

- Advertisement -

ಕನ್ನಡಾಭಿಮಾನಿಗಳೆ,
ಇಂದು ಗ್ರಾಮೀಣ ಪ್ರದೇಶವಾದ ೨ನೇ ಸಾಹಿತ್ಯ ಸಮ್ಮೇಳನ. ರಾಮದುರ್ಗ ತಾಲೂಕಾ ಮಟ್ಟದ ೪ನೇ ಸಮ್ಮೇಳನ. ಸುರೇಬಾನದಲ್ಲಿ೨೦೧೫ರಲ್ಲಿ ಜರುಗಿತ್ತು.ರಾಮದುರ್ಗ ತಾಲೂಕಿನಲ್ಲಿ ಈಗಾಗಲೇ ೬ ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಅವುಗಳಲ್ಲಿ ಒಂದು ಗ್ರಾಮೀಣ ಮಟ್ಟದಲ್ಲಿ, ಇನ್ನೊಂದು ಜಿಲ್ಲಾ ಸಾಹಿತ್ಯ ಸಮ್ಮೇಳನ (೨೦೧೬), ಮತ್ತೊಂದು ಹೋಬಳಿ ಮಟ್ಟದ ಸಮ್ಮೇಳನ (೨೦೧೬-ಸಾಲಳಳ್ಳಿ). ಉಳಿದ ಮೂರು ತಾಲೂಕಾ ಮಟ್ಟದ ಸಮ್ಮೇಳನಗಳು -೨೦೦೪,೨೦೧೩,೨೦೧೪ ರಲ್ಲಿ ರಾಮದುರ್ಗದಲ್ಲೇ ನಡೆದಿವೆ.ಗ್ರಾಮೀಣ ಜನರಿಗೆ ಸಾಹಿತ್ಯದರಿವು ಮೂಡಿಸಲು,ಆಸಕ್ತಿ ಮೂಡಿಸಲು ಸುನ್ನಾಳದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ತುತ್ಯರ್ಹವಾಗಿದೆ. ೨೦೦೪ ರಲ್ಲಿ ನಾವು ರಾಮದುರ್ಗ ತಾಲೂಕಾ ಮಟ್ಟದ ಪ್ರಪ್ರಥಮವಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿಗಾಗಿ ಹತ್ತು ತಿಂಗಳು ತೆಗೆದುಕೊಂಡಿದ್ದೆವು.ಆದರೆ  ಹತ್ತೇ ದಿನದಲ್ಲಿ ತಯಾರಿ ನಡೆಸಿ ಸಮ್ಮೇಳನ ಜರುಗಿಸುತ್ತಿರುವುದು ಪರಿಷತ್ತಿನ ಪದಾಧಿಕಾರಿಗಳ ಹಾಗೂ ಸುನ್ನಾಳ ಊರಿನ ನಾಗರಿಕರ ಆಸಕ್ತಿ, ಪರಿಶ್ರಮಕ್ಕೆ ಸಾಕ್ಷಿ.ಅವರೆಲ್ಲರೂ ಅಭಿನಂದನಾರ್ಹರು.

ವಿದ್ಯೆ ಬಂತು,ವಿನಯ ಹೋಯ್ತು
ಬುಧ್ಧಿ ಬಂತು,ಶ್ರಧ್ಧೆ ಹೋಯ್ತು
ಶ್ರಧ್ಧೆ ಬಂತು,ವಿವೇಚನೆ ಹೋಯ್ತು
ಸಮೃದ್ಧಿ ಬಂತು, ಸಂಸ್ಕೃತಿ ಹೋಯ್ತು
ಜಾತಿ ಬಂತು,ಪ್ರೀತಿ ಹೋಯ್ತು
ಸ್ವಾತಂತ್ರ್ಯ ಬಂತು,ಸೌಜನ್ಯ ಹೋಯ್ತು

ಈಗ ತಾಯಿ,ತಂದೆ,ಅವ್ವ,ಅಪ್ಪ ಎನ್ನುವ ಸಂಸ್ಕೃತಿ ಹೋಗಿ ಮಮ್ಮಿ, ಡ್ಯಾಡಿ ಎನ್ನುವ ಸಂಸ್ಕೃತಿ ಬಂದಿದೆ.ಒಬ್ಬ ಹುಡುಗನಿಗೆ ತಾಯಿಗೆ ಏನೆಂದು ಕರೆಯುತ್ತೀ? ಎಂದು ಕೇಳಿದರೆ, ಮಾಮ್ ಎಂದು ಉತ್ತರಿಸಿದ.ಚಿಕ್ಕಮ್ಮನನ್ನು ಮಿನಿಮಮ್ ಎಂದೂ,ದೊಡ್ಡಮ್ಮನನ್ನು ಮ್ಯಾಕ್ಝಿಮಮ್ ಎಂದು ಕರೆಯುವುದಾಗಿ ಹೇಳಿದ.ಇದೇ ಸಂಸ್ಕೃತಿ ಮುಂದುವರಿದರೆ ನಮ್ಮ ಕನ್ನಡ ಭಾಷೆಯ ಗತಿಯೇನು?ಯುವ ಪೀಳಿಗೆಯವರನ್ನು ರಕ್ಷಿಸುವವರಾರು?ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವವರಾರು?

ಇಂದೇನಾಗಿದೆ?ವಿದ್ಯೆ ಇದೆ, ಬುದ್ಧಿಯಿಲ್ಲ.ವ್ಯವಹಾರಜ್ಞಾನವೂ ಕಡಿಮೆ.ನಾನು ಅಲ್ಲಲ್ಲೇ ಭಾಷಣ ಮಾಡುವಾಗಲೆಲ್ಲ ನಾನು ಬರೆದ ಚುಟುಕೊಂದನ್ನು ಉದಾಹರಿಸುತ್ತಿರುತ್ತೇನೆ.

ಬುದ್ಧಿಯಿಲ್ಲದ ವಿದ್ಯೆಯದು
ಸಕ್ಕರೆಯಿಲ್ಲದ ಪಾಯಸದಂತೆ
ವಿದ್ಯೆಗೆ ಬುಧ್ಧಿಯೂ ಬೆರೆತರೆ
ಹಾಲು-ಜೇನಿನ ಸಿಹಿ ಅದಕಿಹುದಂತೆ

ಪುಸ್ತಕ ಓದಿ ಅಡುಗೆ ಮಾಡುವ ಹೆಣ್ಣುಮಕ್ಕಳು ನೆನಪಿಡಬೇಕಾದುದೇನೆಂದರೆ,ಒಲೆ ಹಚ್ಚಿರಿ ಎಂದು ಯಾವ ಪುಸ್ತಕದಲ್ಲಿಯೂ ಬರೆದಿರುವುದಿಲ್ಲ.ವ್ಯವಹಾರಜ್ಞಾನ ಇದ್ದವರಿಗೆ ಮಾತ್ರ ಗೊತ್ತಾಗುತ್ತದೆ,ಬೆಂಕಿಯಿಲ್ಲದೆ ಅಡಿಗೆ ತಯಾರಾಗುವುದಿಲ್ಲ ಎಂಬುದು.

ನಮ್ಮ ಯುವಕರಲ್ಲಿ ಉತ್ಸಾಹ,ಆಸಕ್ತಿ ಕಡಿಮೆಯಾಗುತ್ತಿದೆ. ವಯಸ್ಸು ನೋಡು ಇಪ್ಪತ್ತೇಳು,ಆಕಾರ ನೋಡು ಎಪ್ಪತ್ತೇಳು ಎನ್ನುವಂತಾಗಿದೆ.ಹಾಗಾಗಬಾರದು,ವಯಸ್ಸು ನೋಡು ಎಪ್ಪತ್ತೇಳು,ಉತ್ಸಾಹ ನೋಡು ಇಪ್ಪತ್ತೇಳು ಎನ್ನುವಂತಾಗಬೇಕು.ರವೀಂದ್ರನಾಥ ಟ್ಯಾಗೋರರು ಯುವಕರನ್ನು ಕುರಿತು ಹೇಳಿದ್ದೇನು?”ಯು ಹ್ಯಾವ್ ಫೆರ್ಟೈಲ್ ಲ್ಯಾಂಡ,ಗುಡ್ ವಾಟರ್ ಸೋರ್ಸ್,ಎಫಿಸಿಯೆಂಟ್ ಮಾಲಿ,ಬಟ್ ಯು ಕ್ಯಾನಾಟ್ ಬಿಲ್ಡ್ ಎ ಗುಡ್ ಗಾರ್ಡನ್ ಇಫ್ ದ ಸೀಡ್ಸ್ ಲೂಜ್ ದೇರ್ ಫೆರ್ಟಿಲಿಟಿ.”ಯುವಕರಲ್ಲಿ ಆಸಕ್ತಿ ಕುಂದಿದರೆ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಅಪೇಕ್ಷಿಸಲಾಗುವುದಿಲ್ಲ.ಮೊಳಕೆಯೊಡೆಯಲು ಬೀಜದಲ್ಲಿ ಸತ್ವ ಇರಬೇಕು.ಇದನ್ನೇ ಬೇಂದ್ರೆಯವರು ಬೇರೆ ರೀತಿಯಲ್ಲಿ ಹೇಳಿದ್ದಾರೆ,ಕದ್ದು ಉತ್ತತ್ತಿ ತಿಂದರೂ ಮೈಗೆ ಹತ್ತುತ್ತೆ (ಪಚನ ಕ್ರಿಯೆ ಮುಖ್ಯ).ಚಾಪೆಯ ಮೇಲೆ ಮಲಗಿದರೂ ಕನಸು ಬೀಳುತ್ತೆ (ಕನಸು ಕಾಣುವ ಯೋಗ ಮುಖ್ಯ).

ಬದುಕು ಜಟಕಾ ಬಂಡಿ,ವಿಧಿಯದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು
ಮದುವೆಗೋ,ಹೋಗೆಂದ ಕಡೆಗೋಡು
ಪದ ಕುಸಿಯೆ ನೆಲವಿಹುದು -ಮಂಕುತಿಮ್ಮ (ಡಿವಿಜಿ )
ನನ್ನ ಬದುಕಿನ ಬಂಡಿ ೭೬ ಮುಗಿಸಿ ಜೂನ್ ಒಂದರಿಂದ ೭೭ರತ್ತ ಓಡುತ್ತಿದೆ.೭೭ ರ ಇಳಿ ವಯಸ್ಸು ಎಂದು ಹೇಳುವುದಿಲ್ಲ,ಯಾಕೆಂದರೆ, ನನಗೀಗ ಸೆವಂಟೀನ್,ನಾಟ್ ಸೆವಂಟಿ ಸೇವನ್.ನನ್ನ ಈ ಉತ್ಸಾಹಕ್ಕೆ,ಉಮೇದಿಗೆ ಸಾಹಿತ್ಯದ ಓದು ಕಾರಣ.ಬರವಣಿಗೆ ಕಾರಣ.ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇದ್ದುದರಿಂದಲೇ ವಿಜ್ಞಾನ ಪದವೀಧರನಾಗಿ ೩೨ ವರ್ಷ ವಿಜ್ಞಾನ ಬೋಧಿಸಿದ ನಾನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೨೮ ಕೃತಿ ರಚಿಸಿ, ಪ್ರಕಟಿಸಿದೆ.೧೧ ಕಾದಂಬರಿ,೨ ಕಥಾ ಸಂಕಲನ,೪ ಕವನ ಸಂಕಲನ,೪ ಶಿಶುಗೀತೆಗಳ ಸಂಕಲನ,ವಿಜ್ಞಾನದ ಒಗಟುಗಳು ( ೫ ನೇ ಮುದ್ರಣ ),ವಿಜ್ಞಾನದ ೧೦೧ ಒಗಟುಗಳು ( ೧೧ ನೇ ಮುದ್ರಣ ),ಮಕ್ಕಳ ನಾಟಕ,ವೈಚಾರಿಕ ಲೇಖನಗಳ ಸಂಗ್ರಹ,೨ ಹಾಸ್ಯ ಲೇಖನಗಳ ಸಂಗ್ರಹ,ಎಳೆಯರಿಗಾಗಿ ಪ್ರಬಂಧಗಳು,-ಕನ್ನಡಮ್ಮನ ಉಡಿಯಲ್ಲಿವೆ.ಸಾಹಿತ್ಯ ಎಂದರೆ ಸ-ಹಿತ ಬಯಸುವುದು,ಸ್ವ -ಹಿತವಲ್ಲ.

ಎಂ.ಎಸ್ಸಿ.ರಸಾಯನ ಶಾಸ್ತ್ರದ ಪದವೀಧರನಾದ ನಾನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಎಸ್.ಡಿ.ಎಂ.ಕಾಲೇಜ್ ನಲ್ಲಿ ೩೨ ವರ್ಷ ವಿಜ್ಞಾನದ ವಿದ್ಯಾರ್ಥಿಗಳೊಂದಿಗಿದ್ದರೂ ಕನ್ನಡ ಸಾಹಿತ್ಯದ ಕುರಿತೂ ಚಿಂತನೆ ನಡೆಯುತ್ತಿತ್ತು.ಕಳೆದ ೪೫ ವರ್ಷಗಳಿಂದ ನಾನು ಕನ್ನಡ ಸಾಹಿತ್ಯದ ಕೃಷಿ ಮಾಡುತ್ತಲಿದ್ದೇನೆ.

ಆಡುವ ಮಾತು,ಬರೆಯುವ ಬರವಣಿಗೆ,ಬದುಕುವ ರೀತಿ ಒಂದೇ ಇದ್ದರೆ ಅದು ಹೆಚ್ಚು ಪರಿಣಾಮಕಾರಿ.ಕಾಲ ಬದಲಾದಂತೆ ಮಾತು,ಕೃತಿಗೆ ಸಂಬಂಧ ಇಲ್ಲದಂತಾಗಿದೆ.ಹಾಗಾಗಿಯೇ ಸಾಹಿತ್ಯ ತನ್ನ ಮೂಲ ಉದ್ದೇಶದಿಂದ ಹಿಂದೆ ಸರಿದಂತಾಗಿದೆ.ಈ ಒಂದು ಕ್ಷೇತ್ರ ಮಾತ್ರವಲ್ಲ,ಸಂಗೀತ,ಕಲೆ,ಧಾರ್ಮಿಕ ಸಂಘ ಸಂಸ್ಥೆಗಳು, ಧುರೀಣರು,ಶ್ರೀ ಶ್ರೀ ಗಳು,ಸನ್ಯಾಸಿ,ಸಂಸಾರಿ ಎನ್ನದೆ ಎಲ್ಲರೂ ಪರೋಪದೇಶ ಪಂಡಿತರಾಗಿದ್ದಾರೆ.ನಾವು ನುಡಿದಂತೆ, ಬರೆದಂತೆ ಬಾಳಲಿಕ್ಕಾಗಿ ಹುಟ್ಟಿಲ್ಲ,ಕೇವಲ ಹೇಳಲಿಕ್ಕೆ ಮಾತ್ರ ಹುಟ್ಟಿದ್ದೇವೆ ಎಂದು ಭಾವಿಸಿದ ಕಾರಣ ದೇಶ ಮಾತ್ರವಲ್ಲ,ಹಳ್ಳಿಗಳೂ ಈಗ ಕವಲು ದಾರಿಯಲ್ಲಿವೆ. ಇಂಥದ್ದನ್ನು ಊಹಿಸಿಯೇ ದಿ.ಸಿದ್ದಯ್ಯ ಪುರಾಣಿಕರು ಬಹಳಷ್ಟು ವರ್ಷಗಳ ಹಿಂದೆಯೇ ಈ ಪದ್ಯ ಬರೆದಿರಬೇಕು.

ಹುಟ್ಟು ದಾನ ಕಣೋ,ಸಾವು ಗುಟ್ಟು ಕಣೋ,ನಾನೇ ಎಂದವ ನಾಳೆ ಮಣ್ಣು ಕಣೋ,ಎಂದಿದ್ದಾರೆ ಜಾನಪದರು.ದಾನವಾಗಿ ಬಂದ ಬದುಕಿನಲ್ಲಿ ಬೇಕಾದಷ್ಟನ್ನು ಇಟ್ಟುಕೊಂಡು ಸಮಾಜಕ್ಕೆ ದಾನವಾಗಿಯೇ ಬದುಕುವುದು.ನಮ್ಮ ನಮ್ಮ ಕ್ಷೇತ್ರಗಳಲ್ಲಿ ತಿಂದ ಅನ್ನಕ್ಕೆ ಪ್ರತಿಯಾಗಿ ಸಮಾಜದ ಋಣ ತೀರಿಸುವುದು ಕರ್ತವ್ಯ.ಹೀಗೆ ಭಾವಿಸಿದರೆ ಅಹಂಕಾರ ಕಾಡಲಾರದು. ಏನಾದರೂ ಆಗು,ಮೊದಲು ಮಾನವನಾಗು ಎಂದಿದ್ದಾರೆ ಹಿರಿಯರು. ಗಿಳಿಗೆ ಗಿಳಿಯಾಗು ಎಂದೂ,ಪ್ರಾಣಿಗಳಿಗೆ ಪ್ರಾಣಿಯಾಗಿರು ಎಂದೂ ಯಾರೂ ಹೇಳುವುದಿಲ್ಲ. ಆದರೆ,ಮನುಷ್ಯನಿಗೇಕೆ ಮೊದಲು ಮಾನವನಾಗು ಎಂದು ಹೇಳುತ್ತಾರೆ?ವಿಚಿತ್ರವಲ್ಲವೇ?ಮನುಷ್ಯತ್ವ ಮುಖ್ಯವಲ್ಲವೇ?

ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು. ಅವು ಮೂಲಭೂತ ಸೌಕರ್ಯಗಳೊಂದಿಗೆ ಸದೃಢಗೊಳ್ಳಬೇಕು.”ಕನ್ನಡ ಮಾಧ್ಯಮದಲ್ಲಿ ಕಲಿತವರಿಗ ಭವಿಷ್ಯವಿಲ್ಲ”ಎಂಬ ಕೆಟ್ಟ ಧೋರಣೆಯೇ ಬಲಗೊಂಡು ವಿದ್ಯಾರ್ಥಿಗಳು ಕನ್ನಡ ಶಾಲೆಗಳತ್ತ ಮುಖ ತಿರುಗಿಸುವುದು ಕಡಿಮೆಯಾಗಿದೆ.ಹಾಗಾಗಿ ಈಗಾಗಲೇ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿಹೋಗಿವೆ.ಸರಕಾರ. ಹಾಗೂ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಿದರೆ,ಮುಂದೆ ನಾವು ಕನ್ನಡ ಭಾಷೆ ಎಂಬುದೊಂದು ಇತ್ತು ಎಂಬುದನ್ನು ಇತಿಹಾಸದಲ್ಲಿ ಓದಬೇಕಾಗಿ ಬಂದೀತು! ಯಾವುದೇ ಭಾಷೆ ಬಳಕೆಯಲ್ಲಿಇಲ್ಲದಿದ್ದರೆ ಅದು ಅವಸಾನದ ಅಂಚಿಗೆ ಬಂದು ನಿಲ್ಲುತ್ತದೆ.ಎಷ್ಟೆಲ್ಲಾಸಮೃಧ್ಧಗೊಂಡಿದ್ದ ಸಂಸ್ಕ್ರುತ ಭಾಷೆಯ ಗತಿ ಏನಾಗಿದೆ?ನಮ್ಮ ಭಾಷೆಗೂ ಆ ಗತಿ ಬರಬೇಕೇ?

ಕನ್ನಡಕ್ಕೆ ಮೊದಲ ಆದ್ಯತೆ ಇರಲಿ,.ಬೇರೆ ಭಾಷೆಗಳನ್ನು ಕಲಿಯುವುದು ತಪ್ಪೇನಲ್ಲ.ಬೇರೆ ಜನಾಂಗದ ಸಂಸ್ಕೃತಿ,ಸಾಹಿತ್ಯ ಅರ್ಥವಾಗಬೇಕಾದರೆ ಆಯಾ ಭಾಷೆಗಳ ಅರಿವು ಇರುವುದು ಅವಶ್ಯ.ಆಸಕ್ತಿ ಬೇಕಷ್ಟೇ.

ನಾನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಅಭ್ಯಸಿಸಿದ್ದು ಕನ್ನಡ ಮಾಧ್ಯಮದಲ್ಲೇ.ಕಾಲೇಜ್ ಶಿಕ್ಷಣ, ಸ್ನಾತಕೋತ್ತರ ಶಿಕ್ಷಣ (ಎಂ.ಎಸ್ಸಿ.,ರಸಾಯನ ಶಾಸ್ತ್ರ )ಎಲ್ಲ ಆಂಗ್ಲ ಭಾಷೆಯಲ್ಲಿ.ಬೋಧಿಸಿದ್ದೂ ಆಂಗ್ಲ ಭಾಷೆಯಲ್ಲಿ.ಆದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದೆ.ಬಾಗಲಕೋಟೆಯ ಬಸವೇಶ್ವರ ಕಾಲೇಜ್ ನಲ್ಲಿ ಬಿ.ಎಸ್ಸಿ.ವಿದ್ಯಾರ್ಥಿಯಾಗಿದ್ದಾಗಲೇ (೧೯೬೨ ) ಕಾಲೇಜ್ ವಾರ್ಷಿಕ ಸಂಚಿಕೆಯಲ್ಲಿ “ಹುಚ್ಚನ ಹಾಡು”ಎಂಬ ನನ್ನದೊಂದು ಕಥೆ ಪ್ರಕಟವಾಗಿತ್ತು.ಅದೇ ನನ್ನ ಸಾಹಿತ್ಯದ ಪ್ರಪ್ರಥಮ ಕೃತಿ.ಮುಂದೆ ನಾನು ಮತ್ತೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು ೧೯೭೨ ರಾ ನಂತರವೇ.ಅಲ್ಲಿಯವರೆಗೂ ನನ್ನೊಳಗಿದ್ದ ಕನ್ನಡ ಭಾಷೆಯ ಆಸಕ್ತಿ ಸುಪ್ತವಾಗಿದ್ದಿದ್ದು ಮತ್ತೆ ಪ್ರಕಟವಾಯ್ತು.ಆ ಆಸಕ್ತಿ,ಆ ಅಭಿಮಾನವೇ ಇಂದು ನನ್ನನ್ನು ತಮ್ಮೆಲ್ಲರೆದುರಿಗೆ ತಂದು ನಿಲ್ಲಿಸಿದೆ.ನಾನು ಶಾಲಾ, ಕಾಲೇಜುಗಳಿಗೆ ಭಾಷಣ ಮಾಡಲು ಹೋದಾಲೆಲ್ಲ ಹೇಳುವುದಿಲ್ಲ ಏ, ಸ್ವಂತಿಕೆಯನ್ನು ಬೆಳೆಸಿಕೊಳ್ಳಿರೆಂದು. ಯಾಕೆಂದರೆ ಶಾಲಾ,ಕಾಲೇಜಿನ ವಾರ್ಷಿಕ ಸಂಚಿಕೆಗಳಲ್ಲಿ ಬರಿ ಸಂಗ್ರಹಿಸಿದ ಬರಹಗಳನ್ನೇ.ನಾನು ಪ್ರೌಢಶಾಲೆಯಲ್ಲಿದ್ದಾಗಲೇ ನಿಬಂಧ, ಪ್ರಬಂಧಗಳನ್ನು ಸ್ವಂತವಾಗಿಯೇ ಬರೆಯುತ್ತಿದ್ದೆ. ಹಾಗಾಗಿಯೇ ಮುಂದೆ “ಕಿರಿಯರ ಪ್ರಬಂಧಗಳು”ಎಂಬ ಪುಸ್ತಕ ಪ್ರಕಟಿಸಲು ಸಾಧ್ಯವಾಯ್ತು.

ಯಾವ ವಿದ್ಯೆಯಿಂದ ನಾವು ಗುಣವಂತರಾಗಬಲ್ಲೆವೋ, ಬುಧ್ಧಿಶಕ್ತಿ ವೃಧ್ಧಿಸಬಲ್ಲುದೋ,ಧೀ ಶಕ್ತಿ ವಿಸ್ತಾರಗೊಳ್ಳಬಲ್ಲುದೋ ಹಾಗೂ ಸ್ವವಲಂಬಿಗಳಾಗಿ ಬದುಕಬಲ್ಲೆವೋ ಅಂಥ ವಿದ್ಯೆ ನಮಗೆ ಬೇಕು ಎಂದು ಸ್ವಾಮಿ ವಿವೇಕಾನಂದರು ಎಂದೋ ಹೇಳಿದ್ದಾರೆ.ಅಷ್ಟಲ್ಲದೆ, “ಯುವಕರಲ್ಲಿ ಆಸಕ್ತಿ ಬೇಕು,ಉಕ್ಕಿನಂತಹ ಸ್ನಾಯುಗಳ ಯುವ ಪೀಳಿಗೆಯಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ”ಎಂದೂ ಹೇಳಿದ್ದರು. ಆದರೆ,ಇಂದು ಏನಾಗಿದೆ?ಎಲ್ಲವೂ ತದ್ವಿರುಧ್ಧವಾಗಿದೆ.೨೫ ರ ಯುವಕರಲ್ಲಿ ೭೫ ರ ಛಾಯೆ! ವಿಷಾದಕರವಲ್ಲವೇ? “ಟ್ರೈ ಆಂಡ್ ಫೇಲ್,ಬಟ್ ಡೋಂಟ್ ಫೇಲ್ ಟು ಟ್ರೈ”.ಬರಿ ಅದೃಷ್ಟವಂತರು ಆಗದಿರಲಿ,ಬುಧ್ಧಿವಂತರಾಗಿರಿ.ಯಾಕೆಂದರೆ,ಅದೃಷ್ಟವಂತ ಎಂದರೆ,ಅವಕಾಶಗಳನ್ನು ಪಡೆಯುವವನು, ಬುಧ್ಧಿವಂತನೆಂದರೆ,ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ನಾನು.ಆಯ್ಕೆ ನಿಮ್ಮದು.

ಇಂದು ಭಾಷಾ ಬಾಂಧವ್ಯ ಅವಶ್ಯವಾಗಿದೆ.ಗಡಿ ಸಮಸ್ಯೆ ಹಾಗೇ ಇದೆ.ಸಮಸ್ಯೆಪರಿಹಾರಕ್ಕೆ ರಾಜಕೀಯ ಇಚ್ಛಾ ಶಕ್ತಿ ಬೇಕು.ಅದನ್ನೇ ಆಶಿಸೋಣ.

ಬೇಡದಿರಿ ಬೆಳಗಾವಿ
+++++++++++++

ಕನ್ನಡಮ್ಮನ ಬೈತಲೆಗೆ
ಸಿಂಧೂರವಾಗಿರುವ
ಬೆಳಗಾವಿ ನಮ್ಮದು
ನಮ್ಮದೀ ಬೆಳಗಾವಿ

ಕೆಚ್ಚೆದೆಯ ಕನ್ನಡಿಗರ
ರೊಚ್ಚಿಗೆ ಬಲಿಬಿದ್ದು
ಅವಹೇಳನಕೆ ಗುರಿಯಾಗದಿರಿ
ಬೇಡದಿರಿ ಬೆಳಗಾವಿ

ಕನ್ನಡಿಗರ ಸಹನೆಯನು
ವೈರಿಗಳೂ ಮೆಚ್ಚುವರು
ಷಂಡತನವಲ್ಲ ತಾಳ್ಮೆಯು

ಭಾಷಾ ದ್ವೇಷದ ಬೀಜವ ಬಿತ್ತಿ
ಜಾತಿ ದ್ವೇಷದ ಬಳ್ಳಿಯನು
ಹಬ್ಬಿಸದಿರಿ ನೀವೆಲ್ಲ

ಸೋದರರಾಗಿ ಬಾಳಿದರೆ ಚೆನ್ನ
ಮಣ್ಣಿಗಾಗಿ ಹೊಡೆದಾಡಿ
ಕೆಣಕದಿರಿ ಕನ್ನಡ ಕುವರರ

ಭಾಷಾಭಿಮಾನ ಇರಬೇಕು, ದುರಭಿಮಾನ ಸಲ್ಲದು
ಕನ್ನಡ,ಮರಾಠಿ ಭಾಯಿ, ಭಾಯಿ
ಬೇಡದಿರಿ ಬೆಳಗಾವಿ
ನಮ್ಮದೀ ಬೆಳಗಾವಿ
++++++++++++++

ಶರಣು ಕನ್ನಡಾಂಬೆಗೆ
******************
ಕನ್ನಡವೆಂಬೆ
ಚೆನ್ನುಡಿ ಎಂಬೆ
ಕನ್ನಡಾಂಬೆಗೆ
ಶರಣೆಂಬೆ

ಕತ್ತುರಿ ಪರಿಮಳ
ಕನ್ನಡಕೆಂಬೆ
ಮುತ್ತು -ರತ್ನಗಳ
ಚೆಲುವೆಂಬೆ

ಸವಿ ಸವಿ ಪಾಯಸ
ರುಚಿ ಇದಕೆಂಬೆ
ಸವಿಯಲು ಬೇಕು
ದೈವವು ಎಂಬೆ

ಬೆಳ್ಳಿಯ ಹೊಳಪು
ಕನ್ನಡಕೆಂಬೆ
ಹೊನ್ನಿನ ಬೆಲೆಯು
ಇದಕೆಂಬೆ

ಪತಿತ ಪಾವನ
ಗುಣ ಇದಕೆಂಬೆ
ಕಲಿತರೆ ಕೇಡು
ಎನಿತಿಲ್ಲವೆಂಬೆ

ಕನ್ನಡ ನನ್ನ
ಉಸಿರೆಂಬೆ
ಸಾಯುವಾಗಲೂ
ಕನ್ನಡವೆಂಬೆ
ಕನ್ನಡಾಂಬೆಗೆ
ಶರಣೆಂಬೆ
ಶರಣೆಂಬೆ

ಭಾಷೆ ಬೆಳೆದರೆ ಮಾತ್ರ ಅದು ಸ್ವತಂತ್ರವಾಗಿ ಸಂಹವನ ನಡೆಸಲು ಸಾಧ್ಯ. ಬರಿ ಅಂಕಗಳತ್ತಲೇ ತಮ್ಮನ್ನು ತೊಡಗಿಸಿಕೊಂಡ ಪಾಲಕರು,ವಿದ್ಯಾರ್ಥಿಗಳು ತಾಯಿ ಬೇರನ್ನು ಮರೆಯುತ್ತಿದ್ದಾರೆ.ಜಾನಪದ ಸಂಸ್ಕೃತಿ ಮರೆಯಾಗುತ್ತಿದೆ.ನಾನು ಗ್ರಾಮೀಣ ಪ್ರದೇಶದಲ್ಲೇ ಹುಟ್ಟಿ ಬೆಳೆದವನು (ಹುಟ್ಟೂರು,ರಾಮದುರ್ಗ ತಾಲೂಕಿನ ಹೊಸಕೋಟಿ -೧೯೪೧) ಈಗ ಇರುತ್ತಿರುವುದೂ ಗ್ರಾಮೀಣ ಪ್ರದೇಶವಾದ ಹಲಗತ್ತಿಯಲ್ಲಿ.(ಶ್ರೀಮತಿಯ ತವರೂರು).ಹಿಂದಿನದೆಲ್ಲವನ್ನೂ ನೆನೆಸಿಕೊಂಡಾಗ ಸಂಕಟವಾಗುತ್ತದೆ.

ಶುಧ್ಧ ಗಾಳಿ,ನೀರು,ಆಹಾರ ಎಲ್ಲರಿಗೂ ದೊರಕಿದರೆ ಉತ್ತಮ.ಆರೋಗ್ಯ,ಚಿಕಿತ್ಸೆ ಎಲ್ಲರಿಗೂ ದೊರಕಿದರೆ ದೇಶ ಬಲಿಷ್ಠವಾಗುತ್ತದೆ. ಪರಿಶುಧ್ಧ ರಾಜಕಾರಿಣಿಗಳು ಬೇಕು. ರಾಜಕಾರಣವನ್ನು ಶುಧ್ಧಗೊಳಿಸುವ ಕೆಲಸವನ್ನು ಸಾಹಿತ್ಯ,ಪತ್ರಿಕೋದ್ಯಮ ಮಾಡಬೇಕು.ಅಂದಾಗ ನಿಜವಾದ ರಾಮರಾಜ್ಯ ಸ್ಥಾಪನೆ ಸಾಧ್ಯವಾಗುತ್ತದೆ. ಎಡ,ಬಲ,ಸಹಿಷ್ಣುತೆ, ಅಸಹಿಷ್ಣುತೆ,ಗುಂಪುಗಾರಿಕೆ ಇವೆಲ್ಲ ಇದ್ದರೂ ಸಾಮಾನ್ಯ ಉದ್ದೇಶಕ್ಕಾಗಿ ಎಲ್ಲರೂ ಒಂದಾಗಬೇಕಿದೆ.ಟಿ.ವಿ.,ಮೊಬೈಲ್ ಗಳಿಂದ ಜಗತ್ತು ಹತ್ತಿರವಾಗಿದೆ.ಆದರೆ,ಮನಸ್ಸುಗಳು ದೂರಾಗಿವೆ. ದೂರಾಗುವ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ಸಾಹಿತ್ಯದ್ದಾಗಬೇಕು. ಡಿವಿಜಿಯವರು ಹೇಳಿದಂತೆ ನಡೆದರೆ ಕ್ಷೇಮ.

ಗೌರವಿಸು ಜೀವನವ,ಗೌರವಿಸು ಚೇತನವ
ಆರದೋ ಜಗವೆಂದು ಭೇದವೆನಿಸದಿರು
ಹೋರುವುದೇ ಜೀವನ ಸಮೃಧ್ಧಿಗೋಸ್ಕರ ನಿನಗೆ
ದಾರಿ ಆತ್ಮೋನ್ನತಿಗೆ -ಮಂಕುತಿಮ್ಮ

ಋತು ಚಕ್ರ ತಿರುಗುವುದು,ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು
ಕ್ಷಿತಿ ಗರ್ಭ ಧರಿಸುವಳು,ಮತ್ತುದಿಸುವುದು ಜೀವ
ಸತತ ಕೃಷಿಯೋ ಪ್ರಕೃತಿ -ಮಂಕುತಿಮ್ಮ.

ಡಾ.ಡಿ.ಎಸ್.ಕರ್ಕಿ,ಸಾಲಿ ರಾಮಚಂದ್ರ ರಾಯರು,ಬಿ.ಸಿ
ದೇಸಾಯಿ ಅವರಂಥ ಶ್ರೇಷ್ಠ ಕವಿ,ಸಾಹಿತಿಗಳನ್ನು ಕೊಡುಗೆಯಾಗಿ ನೀಡಿದೆ ರಾಮದುರ್ಗ ತಾಲೂಕು, ಮುದಿಗೌಡರ, ಆರ್.ಎಸ್.ಪಾಟೀಲ,ಡಾ.ಅಣ್ಢಾನವರ,  ಸೋಮಶೇಖರ ಸೊಗಸಾದ, ಶಂಕರ ಹಲಗತ್ತಿ, ಮಹಾಂತ,ಶ್ರೀ ಸಂಗಮೇಶ ಗುರವ,ಶ್ರೀ ದೇಸಾಯಿ, ಪದ್ಮರಾಜ ದಂಡಾವತಿ, ಸುರಕೋಡ, ಸಿದ್ದಣ್ಣ ಲಂಗೋಟಿ, ಶ್ರೀಮತಿ ಕಲ್ಯಾಣಮ್ಮ ಲಂಗೋಟಿ,  ನಾಗ ಕಲಾಲ, ಅಜವಾನ, ಶಿರೀಷ ಜೋಷಿ, ಸಿರ್ಕೆ,ಅಶೋಕ ಚೊಳಚಗುಡ್ಡ,ಮುಂತಾದ ಸಾಹಿತಿಗಳನ್ನೂ ಕೊಡುಗೆಯಾಗಿ ನೀಡಿದೆ. ಅಷ್ಟಲ್ಲದೆ, ಪ್ರೊ.ಗುದಗನವರ, ಪ್ರೊ.ಸಕ್ರಿ,  ಆರ್.ಎಂ.ಪಾಟೀಲ, ಅಶೋಕ ಚಂದರಗಿ, ಗಂಗಣ್ಣವರ, ಜಟಗಣ್ಣವರ ಮುಂತಾದ ಸಂಘಟಕರನ್ನೂ ದಯಪಾಲಿಸಿದೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ವಿಕಲಚೇತನರಿಗೆ ಗೌರವ ಪ್ರಶಸ್ತಿ ವಿತರಣೆ

ಮೈಸೂರು: ಏ.೧೦ ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾವ್ಯಶ್ರೀ ಚಾರಿಟೆಬಲ್ ಟ್ರಸ್ಟ ಸಹಯೋಗದಲ್ಲಿ ಜರುಗಿದ ಕರ್ನಾಟಕ ಸಾಂಸ್ಕೃತಿಕ ವೈಭವ  ಕಾರ್ಯಕ್ರಮದಲ್ಲಿ ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group