೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ ಮೈಸೂರು ರಾಜ್ಯೋತ್ಸವ ಅಂತ ಕರೆದರೆ ಉಳಿದ ಮೂರು ಭಾಗಗಳವರಿಗೆ ನೋವುಂಟಾಗ ಬಹುದು ಎಂದು “ಕನ್ನಡ ರಾಜ್ಯೋತ್ಸವ” ಅಂತ ಕರೆದಿರಬಹುದು.
೧೯೭೩ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಅಂತ ನಾಮಕರಣ ಆದ ಮೇಲು “ಕನ್ನಡ ರಾಜ್ಯೋತ್ಸವ” ಎಂದು ಆಚರಿಸುತ್ತಿರುವುದು ಏಕೆ? ಕರ್ನಾಟಕದ ಗಡಿಭಾಗಗಳಲ್ಲಿ ಕನ್ನಡಿಗರಷ್ಟೆ ಅಲ್ಲದೆ ಕನ್ನಡೇತರರು ವಾಸಿಸಿರುವುದರಿಂದ ಮತ್ತು ರಾಜ್ಯದ ಪ್ರಜೆಗಳಾಗಿರುವದರಿಂದ ಅವರನ್ನು ಪರರಂತೆ ಕಂಡಂತಾಗುವುದಲ್ಲವೆ? ಅವರು ಮುಖ್ಯ ವಾಹಿನಿಯಿಂದ ದೂರ ಉಳಿಯುವಂತೆ ನಾವೇ ಮಾಡಿದಂತಾಗುವುದಲ್ಲವೆ? ಈ ರಾಜ್ಯ ತಮ್ಮದಲ್ಲ ಎಂಬ ಭಾವನೆ ಅವರಲ್ಲಿ ಮೂಡುವುದಲ್ಲವೆ? ಈ ಭಾವನೆ ಆ ಜನರು ತಮ್ಮ ಪ್ರದೇಶವನ್ನು ತಮ್ಮ ಮಾತೃ ಭಾಷೆಯ ಪ್ರದೇಶಕ್ಕೆ ಸೇರಿಸಿ ಎಂಬ ಬೇಡಿಕೆ ಇಡಬಹುದಲ್ಲವೆ?
ಅಷ್ಟೇ ಅಲ್ಲದೆ ಕನ್ನಡ ಭಾಷೆ ಯಾದರೆ ಕರ್ನಾಟಕ ಎನ್ನುವುದು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶ. ರಾಜ್ಯ ಅಸ್ತಿತ್ವದಲ್ಲಿರಲು ನಿರ್ದಿಷ್ಟ ಪ್ರದೇಶ ಕಾರಣ ಆದ್ದರಿಂದ “ಕರ್ನಾಟಕ ರಾಜ್ಯೋತ್ಸವ” ಎಂದು ಕರೆಯುವುದೆ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ.
ಉತ್ತರ ಕರ್ನಾಟಕದಲ್ಲಿ ಹಿಂದಿನಿಂದಲೂ “ಕರ್ನಾಟಕ ರಾಜ್ಯೋತ್ಸವ” ಅಂತಲೆ ಆಚರಿಸಿ ಕೊಂಡು ಬರಲಾಗುತ್ತಿದೆ. ಬಹುಶಃ ಅದಕ್ಕೆ ಸ್ವಾತಂತ್ರ ಪೂರ್ವದಲ್ಲಿ ಉತ್ತರ ಕರ್ನಾಟಕದಲ್ಲಿ ಆರಂಭವಾದ “ಕರ್ನಾಟಕ ವಿದ್ಯಾವರ್ಧಕ ಸಂಘ – ೧೮೯೦” “ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ – ೧೯೧೬” ಸ್ವತಂತ್ರ ಹೋರಾಟಗಾರರಾದ ಎನ್. ಎಸ್. ಹರ್ಡೆಕರರು ಘಟಪ್ರಭಾದಲ್ಲಿ ಸ್ಥಾಪಿಸಿದ “ಕರ್ನಾಟಕ ಆರೋಗ್ಯ ಧಾಮ – ೧೯೨೯” ಹಾಗೂ ಏಕೀಕರಣ ಪೂರ್ವದಲ್ಲಿ ಧಾರವಾಡದಲ್ಲಿ ಆರಂಭವಾದ “ಕರ್ನಾಟಕ ವಿಶ್ವ ವಿದ್ಯಾಲಯ – ೧೯೫೦” ಇತ್ಯಾದಿ ಕಾರಣಗಳಿರಬಹುದು.
ನಾನು ಕೂಡ ಚಿಕ್ಕಂದಿನಿಂದಲೂ ಕೇಳುತ್ತಾ ಮತ್ತು ಆಚರಿಸುತ್ತಾ ಬಂದಿದ್ದು “ಕರ್ನಾಟಕ ರಾಜ್ಯೋತ್ಸವ” ಆದರೆ ಇಂದು ಮಾಧ್ಯಮಗಳು ಸಾಕಷ್ಟು ಹೆಚ್ಚಿರುವದರಿಂದ ನಮ್ಮನ್ನು “ಕನ್ನಡ ರಾಜ್ಯೋತ್ಸವ” ಎಂದು ಕರೆಯುವಂತೆ ಪ್ರೇರೇಪಿಸುತ್ತಿವೆ.
ಇನ್ನೂ ಮೇಲಾದರು ಸರಕಾರ “ಕರ್ನಾಟಕ ರಾಜ್ಯೋತ್ಸವ” ಎಂದು ಆಚರಿಸಲು ಆದೇಶಿಸ ಬೇಕಾಗಿರುವುದು ಇಂದಿನ ತುರ್ತು ಅಗತ್ಯ.
ಮಲ್ಲಿಕಾರ್ಜುನ ಚೌಕಶಿ, ವಕೀಲರು



