ಬೈಲಹೊಂಗಲ: 108 ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂದು ಬೈಲಹೊಂಗಲದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಫಕೀರನಾಯ್ಕ ಗಡ್ಡಿಗೌಡರ ಹೇಳಿದರು. ಪಟ್ಟಣದ ದೇವಲಾಪೂರ ರಸ್ತೆಯಲ್ಲಿರುವ ಕೆ.ಎಲ್.ಇ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಬೈಲಹೊಂಗಲ ತಾಲ್ಲೂಕಾ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 109 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಕನ್ನಡದ ಅಸ್ಮಿತೆ-ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತ ಅವರು ಮಾತನಾಡಿದರು. ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಂಬಂಧಿಸಿದಂತೆ ಪರಿಷತ್ತು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲ ಕನ್ನಡಿಗರು ಪರಿಷತ್ತಿನೊಂದಿಗೆ ಕೈಜೋಡಿಸಬೇಕು ಹಾಗೂ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಂಡು ಬರುತ್ತಿರುವ ಪರಿಷತ್ತನ್ನು ವಿಶ್ವಮಾನ್ಯ ಮಾಡುವಲ್ಲಿ ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ಮುಂದೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡ ಕೇವಲ ಭಾಷೆಯಲ್ಲ ಅದು ಬದುಕು ಎಂದು ಅವರು ಹೇಳಿದರು.
ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಸ್ತಾವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ, ಉದ್ದೇಶ, ಸದಾಶಯಗಳನ್ನು ಯುವ ಜನತೆ ಅರ್ಥಮಾಡಿಕೊಂಡು ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಳ್ಳುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪರಿಷತ್ತಿನ ಸದಸ್ಯರಾಗುವುದರ ಮೂಲಕ ತಮ್ಮ ಅಭಿಮಾನ ತೋರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಲಹೊಂಗಲದ ಕೆ.ಎಲ್.ಇ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಶ್ರೀಧರ ನಿರಡಿ ಮಾತನಾಡಿ ಮಾತೃಭಾಷೆಯಾದ ಕನ್ನಡದ ಬಗ್ಗೆ ನಾವೆಲ್ಲರೂ ಅಪಾರ ಪ್ರೀತಿ, ಕಾಳಜಿ ಹೊಂದಿರಬೇಕು ಎಂದರು. ಕನ್ನಡಿಗರ ಸಾಧನೆಗಳು ನೆಲದ ಕಂಪನ್ನು ಎಲ್ಲೆಡೆ ಪಸರಿಸಲಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಎಲ್.ಇ. ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಸ್.ಎಸ್. ಅಬ್ಬಾಯಿ, ಕಸಾಪ ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ್, ಪದಾಧಿಕಾರಿಗಳಾದ ಶ್ರೀಕಾಂತ ಉಳ್ಳೇಗಡ್ಡಿ, ಸಂತೋಷ ಹಡಪದ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕುಮಾರಿ ಸವಿತಾ ಖನಗೌಡ್ರ ಸ್ವಾಗತಿಸಿದರು. ಕುಮಾರಿ ವಿಜಯಲಕ್ಷ್ಮಿ ಗದಗ ಪ್ರಾರ್ಥಿಸಿದರು. ಪ್ರೊ.ಎಚ್.ಐ.ಸಂಕಣ್ಣವರ ನಿರೂಪಿಸಿದರು. ರಾಮಕೃಷ್ಣ ಹೋಟಕರ ವಂದಿಸಿದರು. ರಾಜು ಹಕ್ಕಿ ನಿರ್ವಹಿಸಿದರು.