ಬೈಲಹೊಂಗಲ: ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವುದು ಅಭಿಮಾನದ ಸಂಕೇತ ಎಂದು ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ ಹೇಳಿದರು.
ಪಟ್ಟಣದ ಗಣಾಚಾರಿ ಕಾಲೇಜಿನಲ್ಲಿ ನಡೆದ ಪರಿಷತ್ತಿನ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ೧೯೧೫ ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಸಂಖ್ಯೆಯ ಸದಸ್ಯತ್ವ ಪಡೆಯುವುದರ ಮೂಲಕ ಕನ್ನಡದ ಸೇವೆಗೆ ಹೆಮ್ಮೆಯಿಂದ ಕೈ ಜೋಡಿಸುವಂತೆ ಮನವಿ ಮಾಡಿದರು. ಸದಸ್ಯರಾಗಬಯಸುವವರು ಆಧಾರ ಕಾರ್ಡ, ಪೋಟೋ, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ವಿವರಗಳೊಂದಿಗೆ ರೂ.400 ಶುಲ್ಕ ಪಾವತಿಸಿ ಆನ್ ಲೈನ್ ಕಸಾಪ ಆ್ಯಪ್ ಮೂಲಕ ಸದಸ್ಯತ್ವ ಪಡೆಯಬಹುದು. ಈಗಾಗಲೇ ಸದಸ್ಯರಿದ್ದವರು ರೂ.150 ಪಾವತಿಸಿ ಸ್ಮಾರ್ಟ ಕಾರ್ಡ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪರಿಷತ್ತಿನ ನೂತನ ಸದಸ್ಯತ್ವ ಪಡೆದವರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಬಿ.ಎನ್.ಕಸಾಳೆ, ಕಸಾಪ ಮಾರ್ಗದರ್ಶನ ಮಂಡಳಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ, ಬಿಇಒ ಹಾಗೂ ಬಿ.ಆರ್.ಸಿ ಕಚೇರಿ ಸಿಬ್ಬಂದಿ, ಶಿಕ್ಷಕರು ಉಪಸ್ಥಿತರಿದ್ದರು. ರಾಜು ಹಕ್ಕಿ ಸ್ವಾಗತಿಸಿದರು. ಎಸ್.ಎಸ್. ಚಳಕೊಪ್ಪ ವಂದಿಸಿದರು.