ಬೆಂಗಳೂರು- ರಾಷ್ಟ್ರಪತಿ ಭವನದಲ್ಲಿನ ಹಸ್ತಪ್ರತಿ ಸಂಗ್ರಹಾಲಯವು ಭಾರತದ ಎಲ್ಲ ಭಾಷೆಗಳ ಹಸ್ತಪ್ರತಿಗಳನ್ನು ಸಂಗ್ರಹಿಸುವ ಮತ್ತು ಪ್ರದರ್ಶನವನ್ನು ಆಯೋಜಿಸುವ ಯೋಜನೆ ಹಾಕಿಕೊಂಡಿದೆ.
ಈ ಸಂಬಂಧವಾಗಿ ಕನ್ನಡದ ತಾಳೆಯೋಲೆಯ ಗ್ರಂಥವೊಂದನ್ನು ಕಳುಹಿಸುವಂತೆ ಬಿಎಂಶ್ರೀ ಪ್ರತಿಷ್ಠಾನಕ್ಕೆ ಆಹ್ವಾನ ನೀಡಿದ್ದು ನಮ್ಮ ಹೆಗ್ಗಳಿಕೆಯಾಗಿದೆ. ಈ ಸಂಬಂಧವಾಗಿ ಕನ್ನಡದ ‘ಅಧ್ಯಾತ್ಮ ರಾಮಾಯಣ’ ಎಂಬ ತಾಳೆಯೋಲೆಯ ಗ್ರಂಥವನ್ನು ಆಯ್ಕೆ ಮಾಡಿ ವರ್ಣನಾತ್ಮಕ ಸೂಚಿಯೊಂದಿಗೆ ಭಾರತದ ರಾಷ್ಟ್ರಪತಿಭವನದ ಹಸ್ತಪ್ರತಿ ಸಂಗ್ರಹಾಲಯಕ್ಕೆ ಕಳುಹಿಸಲಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ನಡೆಯುವ ಹಸ್ತಪ್ರತಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಈ ಗ್ರಂಥವು ಅಲ್ಲಿನ ಹಸ್ತಪ್ರತಿ ಸಂಗ್ರಹಾಲಯ ಸೇರಲಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.
ಹರಿದಾಸ ಸಾಹಿತ್ಯಸಂಶೋಧಕರಾದ ಡಾ. ಅನಂತಪದ್ಮನಾಭರಾವ್ ಅವರು ತಮ್ಮ ಕ್ಷೇತ್ರಕಾರ್ಯದಲ್ಲಿ ದೊರೆತ ತಾಳೆಯೋಲೆಯ ಈ ಗ್ರಂಥವನ್ನು ಬಿಎಂಶ್ರೀ ಪ್ರತಿಷ್ಠಾನಕ್ಕೆ ಎರಡು ವರ್ಷದ ಹಿಂದೆ ಗ್ರಂಥದಾನವಾಗಿ ನೀಡಿದ್ದು ಅದು ರಾಷ್ಟ್ರಪತಿ ಭವನದ ಹಸ್ತಪ್ರತಿ ಸಂಗ್ರಹಾಲಯ ಸೇರುತ್ತಿದೆ ಎಂಬುದು ಸಂತಸದ ವಿಷಯ.