ಕರ್ನಾಟಕ ರಾಜ್ಯೋತ್ಸವ

0
906

1956 ನೇ ಇಸ್ವಿ ನವ್ಹೆಂಬರ 1 ರಂದು ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಬಹುತೇಕ ಕನ್ನಡ ಪ್ರದೇಶಗಳು ಒಂದುಗೂಡಿ ವಿಶಾಲ ಮೈಸೂರು ಆಗಿ ರೂಪಗೊಂಡು ಕರ್ನಾಟಕ ಏಕೀಕರಣ ಕನಸು ನನಸಾದ ದಿನ. ವಿಶಾಲ ಮೈಸೂರು ಎಂದೇ ಆರಂಭಗೊಂಡ ಈ ಪ್ರದೇಶ ಕರ್ನಾಟಕ ಎಂಬ ಮೂಲ ನಾಮವನ್ನು ಪಡೆಯಲು ಒಂದು ದಶಕಕ್ಕೂ ಹೆಚ್ಚು ಕಾಲ ತೆಗೆದುಕೊಂಡ ರಾಜಕೀಯ ಇತಿಹಾಸವೇ ಬೇರೆ.

ಕನ್ನಡ ಕುಲಕೋಟಿಯ ಬಹುದಿನಗಳ ಆಸೆ 01-11-1973 ರಂದು ಕನ್ನಡಿಗರು ಈ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಬೇಕು, ಎಂದು ಬಯಸಿ ಚಳವಳಿ ನಡೆಯಿತು.

ಜನರ ಈ ಬಯಕೆಯನ್ನು ಅರಿತು ನಮ್ಮ ಸರ್ಕಾರವು ಮನ್ನಣೆ ಕೊಟ್ಟು ಕರ್ನಾಟಕವೆಂದು ಪುನರ್ ನಾಮಕರಣ ಮಾಡಿತು. ಜನತೆ ಬಹು ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ದಿನವನ್ನು ಆಚರಿಸುತ್ತ ಬರುತ್ತಿದೆ.

ಕರ್ನಾಟಕಕ್ಕೆ ಸುಮಾರು 2000 ವರ್ಷಗಳ ಸುದೀರ್ಘವಾದ ಇತಿಹಾಸವಿದೆ. ಕ್ರಿ.ಶ. ಪೂರ್ವ 3 ನೇ ಶತಮಾನದಲ್ಲಿ ಕರ್ನಾಟಕದ ಕೆಲವು ಭಾಗಗಳು ಮೌರ್ಯ ಸಾಮ್ರಾಜ್ಯ ಅಶೋಕನ ಆಳ್ವಿಕೆಗೆ ಒಳಪಟ್ಟಿದ್ದವು. ಆ ಬಳಿಕ ಶಾತವಾಹನರು ಕಂಚಿಯ ಪಲ್ಲವರು ಇಲ್ಲಿನ ಕೆಲವು ಭಾಗಗಳ ಮೇಲೆ ಆಳ್ವಿಕೆ ನಡೆಸಿದ್ದರು.

ಕರ್ನಾಟಕವನ್ನು ಮೊದಲು ಆಳಿದ ಕನ್ನಡಿಗ ದೊರೆಗಳು ಕದಂಬರು ನಂತರ ತಲಕಾಡಿನ ಗಂಗರು, (ಕ್ರಿ.ಶ. 325 ರಿಂದ 1000) ಬಾದಾಮಿ ಚಾಳುಕ್ಯರು (ಕ್ರಿ.ಶ.500-750) ರಾಷ್ಟ್ರಕೂಟರು (ಕ್ರಿ.ಶ. 750-980) ಕಲ್ಯಾಣದ ಚಾಲುಕ್ಯರು (ಕ್ರಿ.ಶ. 970-1200) ಹೊಯ್ಸಳರು, ಕ್ರಿ.ಶ. 12-13 ಶತಮಾನ ವಿಜಯನಗರದ ಅರಸರು ಕ್ರಿ.ಶ. (1336-1565) ಬಹಮನಿ ಸುಲ್ತಾನರು, ಕೆಳದಿ ಅರಸರು ಹೈದರಾಲಿ ಟಿಪ್ಪುಸುಲ್ತಾನ ಹಾಗೂ ಮೈಸೂರು ಅರಸರು (1399-1947) ಶ್ರೀಗಂಧದನಾಡು ಕವಿಗಳಬೀಡು, ಸಂಸ್ಕೃತಿಯ ಗೂಡು ಅದುವೇ ನಮ್ಮ ಕನ್ನಡನಾಡು ಸುಂದರವಾದ ಈ ನಾಡನ್ನು ಆದಿ ಗ್ರಂಥವಾದ ಕವಿರಾಜಮಾರ್ಗದಲ್ಲಿ “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡ ದೊಳ್” ಕನ್ನಡನಾಡಿನ ವಿಸ್ತೀರ್ಣವನ್ನು ವರ್ಣಿಸುತ್ತದೆ. ಆದರೆ ಇಂದು ನಮ್ಮ ಕರ್ನಾಟಕದ ವಿಸ್ತೀರ್ಣವು ಸುಮಾರು 1,91,791, ಚ.ಕಿ.ಮೀ. ಗಳನ್ನು ಹೊಂದಿದೆ ಹಾಗೂ ಸ್ವತಂತ್ರ್ಯ ಭಾರತದ 30 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿ ಇದು ಭಾರತದ ದಕ್ಷಿಣ ದಿಕ್ಕಿನಲ್ಲಿದೆ ಕರ್ನಾಟಕದ ವ್ಯಾಪ್ತಿಯ ಉತ್ತರ ದಕ್ಷಿಣವಾಗಿ 770 ಕಿ.ಮೀಗಳು ಪೂರ್ವ-ಪಶ್ಚಿಮವಾಗಿ 440 ಕಿ.ಮೀ. ಗಳವರೆಗೆ ವಿಸ್ತರಿಸಿದೆ.

ಕರ್ನಾಟಕ ಸುತ್ತ ನೋಡಿದಾಗ ವಾಯುವ್ಯ ಮತ್ತು ಉತ್ತರ ದಿಕ್ಕಿನಲ್ಲಿ ಮಹಾರಾಷ್ಟ್ರ ಈಶಾನ್ಯ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶ ಆಗ್ನೇಯದಲ್ಲಿ ತಮಿಳುನಾಡು ನೈಋತ್ಯದಲ್ಲಿ ಕೇರಳ ರಾಜ್ಯಗಳಿವೆ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಅರಬ್ಬಿ ಸಮುದ್ರವಿದೆ.

ಕರ್ನಾಟಕವು ಒಟ್ಟು 206 ತಾಲೂಕುಗಳನ್ನು 745 ಹೋಬಳಿಗಳನ್ನು ಹಾಗೂ ಸುಮಾರು 57009 ಗ್ರಾಮ ಪಂಚಾಯತ್‍ಗಳನ್ನು ಒಳಗೊಂಡಿದೆ.

ಕರ್ನಾಟಕ ಜನಸಂಖ್ಯೆ ಜನಗಣತಿ 2011 ರ ಪ್ರಕಾರ ಗಂಡಸರು 3096657, ಹೆಂಗಸರು 30128640 ಒಟ್ಟು 30966657 ಇರುತ್ತದೆ.

ಕರ್ನಾಟಕ ಎಂಬ ಶಬ್ದದಲ್ಲಿ ಅದ್ಭುತವಾದ ಮಾಂತ್ರಿಕ ಶಕ್ತಿ ಅಡಗಿದೆ. “ಕರಿಯ ಮಣ್ಣಿನ” ನಾಡು ಎಂಬ ಅರ್ಥ ನೀಡುವ ಪದಗಳು ಸೇರಿ ಕರ್ನಾಟಕ ಎಂದಾಗಿದೆ. ಕರುನಾಡು ಎತ್ತರದ ಭೂಮಿ ಇರುವ ನಾಡು ಎಂಬುದೇ ಕರ್ನಾಟಕ ಆಗಿದೆ. ಇದಕ್ಕೆ “ಕಮ್ಮಿತ್ತು ನಾಡು” ಶ್ರೀಗಂಧದ ಕಂಪನ್ನುಳ್ಳ ನಾಡು ಎಂಬ ಅರ್ಥವಿದೆ. ಈ ನಾಡನ್ನು ಚಿನ್ನದನಾಡು ಕವಿಗಳು ಬೀಡು ಹಾಗೂ ಗಂಧದ ಗೂಡು ಸಂಸ್ಕೃತಿಯ ಗೂಡು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ಇಮ್ಮಡಿ ಪುಲಿಕೇಶಿ, ಹೊಯ್ಸಳ, ಬಿಟ್ಟಿದೇವ, ರಾಜೇಂದ್ರ ಜೋಳ, ಹಕ್ಕಬುಕ್ಕರು, ಕೃಷ್ಣದೇವರಾಯ, ರಾಣೀ ಅಬ್ಬಕ್ಕ, ಕಿತ್ತೂರ ರಾಣಿ ಚೆನ್ನಮ್ಮ, ಬೆಳವಡಿಮಲ್ಲಮ್ಮರಂಥವರ ಶೂರ ಸಂಸ್ಕೃತಿಯ ವೀರ ಘನತೆಯ ನಾಡಿದು. ಹೈದರಾಲಿಯ ಸೈನ್ಯ ಚಿತ್ರದುರ್ಗ ಕೋಟೆ ಕಿಂಡಿಯೊದರಿಂದ ನುಸುಳಿ ನರಲು ಪ್ರಯತ್ನಿಸುವಾಗ ಒಬ್ಬಂಟಿಯಾದ ಓಬವ್ವ ಬರಿ ಒನಕೆಯಿಂದಲೆ ಒಬ್ಬೊಬ್ಬನ್ನು ಜಜ್ಜಿ ಹಾಕಿ ಕಾವಲಿನವರನ್ನೆಚ್ಚರಿಸಿ ಕೋಟೆಯನ್ನು ರಕ್ಷಿಸಿದ ನಾಡು.

ಕೆಳದಿ ಚೆನ್ನಮ್ಮ ತನ್ನ ಗಂಡ ಸೋಮಶೇಖರ ನಾಯಕ ನಿಧನಾನಂತರ ರಾಜ್ಯವಾಳಿದಾಗ ಶಿವಾಜಿಯ ಮಗ ರಾಜಾರಾಮ ಮೊಲಗಸೇನನು ಕಣ್ಣು ತಪ್ಪಿಸಿ ಉತ್ತರ ಭಾರತದಲ್ಲೆಲ್ಲೂ ಆಶ್ರಯ ದೊರೆಯದೆ ದಕ್ಷಿಣಕ್ಕೆ ಬಂದಾಗ ಚೆನ್ನಮ್ಮ ಅವರಿಗೆ ಆಸರೆ ನೀಡುತ್ತಾರೆ. ಇದರಿಂದ ಔರಂಗಜೇಬನ ವೈರವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಅಪಾರವಾದ ಮೊಗಲಸೇನೆ ಕೆಳದಿಯ ಮೇಲೆ ಯುದ್ಧ ಸಾರಿದಾಗ ಈ ಘೋರ ಸಂಗ್ರಾಮದಲ್ಲಿ ಶೌರ್ಯದಿಂದ ಹೋರಾಡಿದ ರಾಣಿ ಕೆಳದಿ ಚೆನ್ನಮ್ಮನಿಗೆ ಜಯವಾಗುತ್ತದೆ. ಕನ್ನಡದ ಅಭಿಮಾನ ದಿಗಂತದಲ್ಲಿ ರಾರಾಜಿಸುತ್ತದೆ.

ಜನ್ನ, ಪಂಪ, ರನ್ನ, ಹರಿಹರ, ರಾಘವಾಂಕ, ಕುವೆಂಪು, ಗೋವಿಂದ ಪೈ, ಜೆ.ಪಿ. ರಾಜರತ್ನಂ, ಇನ್ನೂ ಹಲವಾರು ಪ್ರಸಿದ್ಧ ಕವಿಗಳು ತಮ್ಮ ಕವಿತಾ ಶಕ್ತಿಯಿಂದ ಕನ್ನಡ ಸಾಹಿತ್ಯ ಸೇವೆ ಮಾಡಿದ್ದಾರೆ. ಬಸವೇಶ್ವರ, ಚನ್ನಬಸವ, ಅಲ್ಲಮಪ್ರಭು, ಮೊದಲಾದ ಶಿವಶರಣರೂ ಅಕ್ಕಮಹಾದೇವಿಯಂತಹ ಶಿವಶರಣೆಯರು ಬಾಳಿ ಬೆಳಗಿಸಿದ್ದಾರೆ. ಪುರಂದರದಾಸ, ಕನಕದಾಸರಂತ ಪರಮ ಭಕ್ತರೂ ಆಗಿ ಹೋಗಿದ್ದಾರೆ.

ನಮ್ಮ ನಾಡಿನ ಶಿಲ್ಪ ವೈಭವವಂತೂ ವಿಶ್ವವಿಖ್ಯಾತ ಬೇಲೂರು ಹಳೆಯಬೀಡು ದೇವಾಲಯಗಳ ಕಲ್ಲು ಗೋಡೆಗಳು ರಾಮಾಯಣ ಮಹಾಭಾರತಗಳ ಕಥೆಗಳನ್ನು ಹೇಳುತ್ತವೆ. ಪಟ್ಟದ ಕಲ್ಲುಗಳಲ್ಲಿನ ಉಸುಕಿನ ಶಿಲ್ಪಗಳ ವಿಲಾಸ ನಿಭ್ರಮೆಗಳು ಲೋಕೋತ್ತರವಾದವು. ಕೂಡಲಸಂಗಮ, ಶ್ರವಣಬೆಳಗೋಳದ ಏಕಶಿಲೆಯಲ್ಲಿ ಕೆತ್ತಿದ ಬಾಹುಬಲಿ ಮೂರ್ತಿ ಶಿಲ್ಪ ಕಲೆಗೆ ಹೆಸರಾಗಿದೆ ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಗೋಳ ಗುಮ್ಮಟ ವಿಜಾಪೂರದಲ್ಲಿದೆ. ಕರ್ನಾಟಕಕ್ಕೆ ಮುಕಟಪ್ರಾಯವಾಗಿ ಬೆಳಗಾವಿ ಹಲಗಾದಲ್ಲಿ “ಸುವರ್ಣಸೌಧ” ಪ್ರಾರಂಭಗೊಂಡಿದೆ.

ಸಂಗೀತದಲ್ಲಿ ವೀಣೆ ಶೇಷಣ್ಣ, ಗಂಗೂಬಾಯಿ ಹಾನಗಲ್ಲ, ಕುಮಾರ ಗಂಧರ್ವ, ಹುಕ್ಕೇರಿ ಬಾಳಪ್ಪ ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನಸೂರ, ಗಾನಸರಸ್ವತಿಯ ಹೆಮ್ಮೆಯ ಪುತ್ರದಲ್ಲಿ ಕೇವಲ ಕೆಲವರು ಮಾತ್ರ. ಪಶುಪಾಲನೆ, ಪಕ್ಷಿಧಾಮಗಳು. ಖನಿಜಸಂಪತ್ತು, ಪ್ರೇಕ್ಷಣೀಯ ಸ್ಥಳಗಳು, ಪ್ರಮುಖ ಉತ್ಪನ್ನಗಳು, ಜನಪದ ನೃತ್ಯಗಳು, ಕರ ಕುಶಲ ಕಲೆಗಳಿಗೆ ಹೆಸರುವಾಸಿದೆ.

ಎಂಟು ಜನ ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ತಿಯನ್ನು, ಭಾರತ ರತ್ನ ಪ್ರಶಸ್ತಿಯನ್ನು ಆಧುನಿಕ ಯುಗದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ತಾಂತ್ರಿಕ ಕೊಡುಗೆ ಗಮನಾರ್ಹ. ಕನ್ನಡದ ಜನ ಭೌದ್ದಿಕ ಕ್ಷೇತ್ರದಲ್ಲಿ ಪ್ರತಿಭೆ ಹಾಗೂ ಸ್ವಂತಿಕೆಗಳನ್ನು ಮೆರೆದಿದ್ದಾರೆ.

ಕನ್ನಡನಾಡನ್ನು ಕಟ್ಟಲು ಸಾಹಿತಿಗಳು ರಾಜತಜ್ಞರು ಹಾಗೂ ಆಲೂರು ವೆಂಕಟರಾವ, ಎಸ್. ನಿಜಲಿಂಗಪ್ಪ, ಮುದವೀಡು ಕೃಷ್ಣರಾವ, ಆರ್. ಆರ್. ದಿವಾಕರ, ಸಿದ್ದಪ್ಪಾ ಕಂಬಳಿ, ಕೆ.ಆರ್.ಕಾರಂತ, ಹಾಸನ ಎಂ.ಕೆ.ರುದ್ರಪ್ಪಾ, ಮುಂತಾದವರು ಪ್ರಯತ್ನಿಸಿದರು. ಅವರೆಲ್ಲರ ಪರಿಶ್ರಮದ ಫಲವಾಗಿಯೂ ಭಾರತವೂ ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ ವಿಂಗಡನೆ ಮಾಡಿದ ಕಾರಣವಾಗಿ ರಾಜ್ಯ ವಿಂಗಡನೆಯಾದವು.

ಕರ್ನಾಟಕದವರರ ಬದುಕಿನ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ಹಿರಿಮೆ ಮತ್ತು ಕನ್ನಡಾಸ್ತಿ ನಮ್ಮ ಉಜ್ವಲ ಪರಂಪರೆಗೆ ತಕ್ಕಂತೆ ಬದುಕ ಬೇಕೆನ್ನುವ ಪ್ರಜ್ಞೆ ಮಾಡುವ ದಿನ.

ಇಂದು ನಾವು ಹೆಮ್ಮೆಯ ಕನ್ನಡಿಗರು ಎಂದು ಸ್ವಾಭಿಮಾನಕ್ಕೆ ಕುಂದು ಬಾರದಂತೆ ಎಚ್ಚರ ಮತ್ತು ಹೆಮ್ಮೆಯಿಂದ ಬದುಕುವ ಸಂಕಲ್ಪ ಮಾಡುವ ದಿನ ಇಂದು ಹಾಗೆಯೇ ನಮ್ಮ ನಾಡಿನ ತಾಯಿ ಭುವನೇಶ್ವರಿಯನ್ನು ಗೌರವಿಸುತ್ತೇವೆ.

ಎಲ್ಲೆಲ್ಲಿಯೂ ಸತ್ಯ ಶಾಂತಿ ಪ್ರೀತಿ ಹರಡಲಿ ಎಂದು ಕರ್ನಾಟಕ ಮಾತೆಯಲ್ಲಿ ಪ್ರಾರ್ಥಿಸೋಣ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.


ಎಂ.ವೈ. ಮೆಣಸಿನಕಾಯಿ
ಮನೆ ನಂ. 7360, ಸೆಕ್ಟರ 10,
ಆಂಜನೆಯ ನಗರ, ಬೆಳಗಾವಿ-17
ಮೊ: 9449209570