ಬೀದರ – ಹಣಬಲ, ತೋಳ್ಬಲ, ಅಧಿಕಾರದ ಬಲದಿಂದ ಚುನಾವಣೆ ಗೆದ್ದಿರುವ ಕಾಂಗ್ರೆಸ್ ಪಕ್ಷದ ಯೋಗೇಶ್ವರಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ. ಚನ್ನಪಟ್ಟಣ ಜನ ಎರಡು ಬಾರಿ ಕುಮಾರಸ್ವಾಮಿ ಯವರನ್ನು ಗೆಲ್ಲಿಸಿದ್ದಾರೆ. ಈಗ ಆ ಯುವಕ ಸೋತ ಕೂಡಲೇ ಏನೇನೋ ಮಾತಾಡ್ತಾರೆ ಅವರಿಗೆ ಯಾವ ಯೋಗ್ಯತೆ ಇದೆ ಜೆಡಿಎಸ್ ಬಗ್ಗೆ ಮಾತನಾಡಲಿಕ್ಕೆ ಎಂದು ಜೆಡಿಎಸ್ ಮುಖಂಡ ಬಂಡೆಪ್ಪ ಖಾಶೆಂಪುರ ಕಾಂಗ್ರೆಸ್ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಈ ಇಳಿವಯಸ್ಸಿನಲ್ಲಿಯೂ ಆಕ್ಟಿವ್ ರಾಜಕಾರಣಿ. ನಿಮ್ಮ ಮಾಜಿ ಮಾಜಿ ಪ್ರಧಾನಿಗಳಂತೆ ಮನೆಯಲ್ಲಿ ಕುಳಿತಿಲ್ಲ. ಇವತ್ತೂ ಕೂಡ ಸದನದಲ್ಲಿ ಟೇಬಲ್ ಕುಟ್ಟಿ ಮಾತಾಡುತ್ತಾರೆ. ಜೆಡಿಎಸ್ ಪಕ್ಷ ಚಿಕ್ಕದಾದರೂ ಇಡೀ ದೇಶಾದ್ಯಂತ ಹೆಸರು ಗಳಿಸಿದೆ. ಕುಮಾರಣ್ಣ ಎಲ್ಲಿಯೇ ನಿಂತರೂ ಗೆದ್ದು ಬರುತ್ತಾರೆ ನಿಮಗೆ ಆ ಯೋಗ್ಯತೆ ಇಲ್ಲ ಎಂದು ಯೋಗೇಶ್ವರ ಅವರನ್ನುದ್ದೇಶಿಸಿ ಕಿಡಿ ಕಾರಿದರು.
ಕೇವಲ ಒಂದು ತಿಂಗಳಲ್ಲಿ ಜೆಡಿಎಸ್ ನ ೧೮ ಶಾಸಕರನ್ನು ಕಾಂಗ್ರೆಸ್ ಗೆ ಕರಕೊಂಡು ಬರುವುದಾಗಿ ಹೇಳಿರುವ ಯೋಗೇಶ್ವರ ಅವರನ್ನು ಉಲ್ಲೇಖಿಸಿದ ಖಾಶೆಂಪೂರ, ನಾನೇ ನಿಮಗೆ ಒಂದು ತಿಂಗಳು ಟೈಮ್ ಕೊಡುತ್ತೇನೆ ಒಬ್ಬೇ ಒಬ್ಬ ಶಾಸಕರನ್ನು ಕರಕೊಂಡು ಹೋಗಿ ನೋಡೋಣ ಎಂದು ಸವಾಲ್ ಹಾಕಿದರು.
ನೋಡಿ, ಎಲ್ಲರಿಗೂ ಒಂದು ಟೈಮ್ ಇರುತ್ತದೆ. ಈಗ ಜನ ನಿಮ್ಮನ್ನು ಗೆಲ್ಲಿಸಿದ್ದಾರೆ ಅನವಶ್ಯಕ ಮಾತುಗಳನ್ನಾಡದೆ ಜನರಿಗಾಗಿ ಒಳ್ಳೆಯ ಕೆಲಸ ಮಾಡಿ ತೋರಿಸ್ರಿ ಎಂದು ಕಿವಿಮಾತು ಹೇಳಿದರು.
ವರದಿ : ನಂದಕುಮಾರ ಕರಂಜೆ, ಬೀದರ