ಬಾಗಲಕೋಟೆ: ಊರಿನ ಹಿತಕ್ಕಾಗಿ ಸ್ವಹಿತ, ಕುಟುಂಬದ ಹಿತ ಬಿಡಬೇಕು. ದೇಶದ ಹಿತಕ್ಕಾಗಿ ಊರಿನ ಹಿತ ತ್ಯಜಿಸಬೇಕು. ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುತ್ತ ನಿಸ್ವಾರ್ಥ ಜೀವನ ಸಾಗಿಸಬೇಕು ಎಂದು ಬನಶಂಕರಿ ತೋಟದ ಶಾಲೆಯ ಮುಖ್ಯ ಶಿಕ್ಷಕ, ಸಾಹಿತಿ ಶಂಕರ ಲಮಾಣಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಜಿಲ್ಲೆಯ ಜಮಖಂಡಿ ಓಲೆಮಠದ ಆಶ್ರಯದಲ್ಲಿ ಜರುಗಿದ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಗಾರಗೆ ತೋಟದ ವಿಠ್ಠಲ ಮಂದಿರದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಬಸವಣ್ಣನವರ ವಚನ ಆಧರಿತ ‘ಸಕಲ ಜೀವಾತ್ಮರಿಗೂ ಲೇಸನೆ ಬಯಸುವ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದುಡಿದು ಸಂಪಾದಿಸಿದರಲ್ಲಿ ನಾಲ್ಕು ಭಾಗ ಮಾಡಿ ಕನಿಷ್ಠ ಒಂದು ಭಾಗವನ್ನಾದರೂ ಸತ್ಕಾರ್ಯಕ್ಕೆ ದಾಸೋಹ ಮಾಡಬೇಕು. ಅನ್ನ-ಆಹಾರ ನೀಡಿದ ಸಮಾಜದ ಋಣವನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳಬೇಕು. ಪಡೆದುಕೊಳ್ಳಲು ಕಳೆದುಕೊಳ್ಳಬೇಕು ಎಂದರು.
ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ನಾವು ಬಾಡಿಗೆದಾರರಾಗಿ ಭೂಮಿಗೆ ಬಂದಿದ್ದೇವೆ. ನಾವು ಯಾತ್ರಿಕರು. ನಾವು ವಾಸಿಸುವ ಮನೆ ಭಗವಂತನಿಗೆ ಸೇರಿದ್ದು ಎಂಬ ಭಾವನೆಯಿಂದ ಬದುಕು ಸಾಗಿಸಬೇಕು ಎಂದು ಆಶೀರ್ವಚನ ನೀಡಿದರು.
ಸಕಲ ಜೀವಿಗಳಿಗೆ ದಯೆ ತೋರಿದರೆ ನಾವು ಭಗವಂತನಿಗೆ ಬಾಡಿಗೆ ಹಣ ಸಂದಾಯ ಮಾಡಿದಂತೆ. ಭಗವಂತ ಒಲಿಯಬೇಕಾದರೆ ನಿತ್ಯ ಭಗವಂತನ ನಾಮಸ್ಮರಣೆ ಮಾಡಬೇಕು. ಲಿಂಗಪೂಜೆ ಮಾಡಬೇಕು. ಲಿಂಗವೊಂದೇ ನಮ್ಮ ಶಾಶ್ವತ ಆಸ್ತಿ ಎಂದರು.
ಬಸಪ್ಪ ಸವಣೂರ, ಸಗರೆಪ್ಪ ನ್ಯಾಮಗೌಡ ಇದ್ದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಸಂಜು ಯಮಗಾರ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಚೌಧರಿ ನಿರೂಪಿಸಿದರು.