ಬೆಳಗಾವಿ – ದೇಶಿ ಸಾಹಿತ್ಯ ಕನ್ನಡ ವಚನಕಾರರಿಂದ ಪ್ರಾರಂಭವಾಗಿ ದಾಸರು ಮತ್ತು ತತ್ವಪದಕಾರರು ಇದನ್ನು ಮುಂದುವರೆಸಿಕೊಂಡು ಬಂದರು. ತ್ರಿಪದಿಯಂತಹ ಮೂರು ಸಾಲುಗಳುಳ್ಳ ಪದ್ಯ ಮನುಷ್ಯನ ಆಸೆ, ಅತಿಯಾಸೆ ಅದರ ಪರಿಣಾಮ, ಬದುಕಿನ ವಾಸ್ತವತೆ ಮತ್ತು ನಮ್ಮಲ್ಲಿನ ಸಮಾನತಾ ಮನೋಭಾವವನ್ನು ಸದಾ ಬಿತ್ತುತ್ತಾ ಬಂದಿದೆ ಎಂದು ಪ್ರೊ. ವಿಶ್ವನಾಥ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ನಡೆದ ವಿಶೇಷ ಉಪನ್ಯಾಸದಲ್ಲಿ ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ವಿಶ್ವನಾಥ ಅವರು ಕನ್ನಡ ದೇಶಿ ಸಾಹಿತ್ಯದ ಕುರಿತು ಮಾತನಾಡುತ್ತಾ ಈ ರೀತಿ ಅಭಿಪ್ರಾಯಪಟ್ಟರು.
ಪ್ರತಿಯೊಂದು ಪ್ರದೇಶದ ಜನಸಮುದಾಯವು ತಮ್ಮದೆ ಭಾಷೆಯ ಮೂಲಕ ಜೀವನಾನುಭವವನ್ನು ಎಲ್ಲರಿಗೂ ಆಪ್ಯಾಯಮಾನವಾಗುವ ಹಾಗೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪರಂಪರೆಯಾಗಿ ಮುಂದುವರಿಸಿದರು. ಇದಕ್ಕೆ ಸಂಬಂಧಿಸಿದಂತೆ ಉದಾಹರಣೆಯನ್ನು ನೀಡುತ್ತಾ ದೇಶಿ ಸಾಹಿತ್ಯದ ನೆಲದ ಸೊಗಡನ್ನು ಸುಂದರವಾಗಿ ಕಟ್ಟಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಎಸ್. ಎಂ. ಗಂಗಾಧರಯ್ಯ ದೇಶಿಯತೆ, ಪ್ರಾದೇಶಿಕತೆ, ಪ್ರಾಂತೀಯತೆಯ ಕುರಿತು ನಮ್ಮ ತಿಳಿವಳಿಕೆಯನ್ನು ವಿಸ್ತರಿಸಿಕೊಳ್ಳುವ ನೆಲೆಯಲ್ಲಿ ಪ್ರೊ. ವಿಶ್ವನಾಥ ಅವರ ಮಾತುಗಳು ಪೂರಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಪಿ. ನಾಗರಾಜ ಜೊತೆಗೆ ಡಾ. ಗಜಾನನ ನಾಯ್ಕ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.