ಸಿಂದಗಿ: ಕಾನೂನು ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಇದನ್ನು ತಿಳಿದುಕೊಂಡಲ್ಲಿ ಸಮಾಜದಲ್ಲಿ ನಾವು ನೆಮ್ಮದಿಯ ಬದುಕು ಬದುಕಬಹುದು. ಮಗು ಹುಟ್ಟಿದ ನಂತರ ಕುಟುಂಬದವರು ನಿರ್ಲಕ್ಷ್ಯ ಮಾಡದೇ ಜನನ ನೊಂದಣಿ ಮಾಡಬೇಕು. ಎಂದು ನ್ಯಾಯವಾದಿಗಳಾದ ಶ್ರೀಮತಿ ಎಸ್.ಎಮ್. ಕಾಚಾಪುರ ಹೇಳಿದರು.
ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನನ ಪ್ರಮಾಣ ಪತ್ರ ಇಲ್ಲದೇ ಇದ್ದಲ್ಲಿ ಮಗುವಿನ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಹಾಗೆಯೇ ಒಬ್ಬ ವ್ಯಕ್ತಿ ಮರಣ ಹೊಂದಿದ ಮೇಲೆ ಮರಣ ನೋಂದಣಿ ಮಾಡಿಸಬೇಕು. ಒಬ್ಬ ಮಹಿಳೆಗೆ ತನ್ನ ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಸಮಸ್ಯೆಯಾದಲ್ಲಿ 119 ಸಂಖ್ಯೆಗೆ ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಕರೆ ಮಾಡಿ ಸಹಾಯವನ್ನು ಪಡೆದುಕೊಳ್ಳಬಹುದು ಹಾಗೂ ದೂರನ್ನೂ ಸಹ ದಾಖಲಿಸಬಹುದು. ಆದಷ್ಟು ಮಟ್ಟಿಗೆ ಸಮಸ್ಯೆಗಳನ್ನು ಕೊರ್ಟ್ ತನಕ ತೆಗೆದುಕೊಂಡು ಹೋಗದೇ ತಮ್ಮ ಹಳ್ಳಿಗಳಲ್ಲಿ ಮಾತುಕತೆ ಮುಖಾಂತರ ಬಗೆಹರಿಸಲು ಪ್ರಯತ್ನ ಮಾಡಿ ಎಂದರು.
ಸಂಗಮ ಸಂಸ್ಥೆಯ ನಿರ್ದೇಶಕ ಫಾ. ಸಂತೋಷ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಇದೆ. ಸ್ವ-ಸಹಾಯ ಸಂಘಗಳು ಮಹಿಳೆಯರಿಗೆ ಒಗ್ಗಟ್ಟಾಗಿ ತಮ್ಮ ಸಮಸ್ಯೆಗಳಿಗೆ ಹೋರಾಡಲು ಒಂದು ವೇದಿಕೆ, ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು, ಮಾಹಿತಿ ಪಡೆದುಕೊಳ್ಳಬಹುದು ಮತ್ತು ಹಂಚಿಕೊಳ್ಳಬಹುದು. ನಮ್ಮ ಹಳ್ಳಿಗಳಲ್ಲಿ ಬಹಳಷ್ಟು ಬಾಲ್ಯ ವಿವಾಹಗಳು ನಡೆಯುತ್ತಿವೆ ಇವುಗಳನ್ನು ಸ್ವ-ಸಹಾಯ ಸಂಘದವರು ಸೇರಿ ತಡೆಗಟ್ಟಬಹುದು ಹಾಗೂ ಅರ್ಥಿಕವಾಗಿ ಬಡ ಕುಟುಂಬಗಳು ಮುಂದೆ ಬರಲು ಸ್ವ-ಸಹಾಯ ಸಂಘಗಳು ಮಾದರಿಯಾಗಿವೆ ಎಂದು ತಿಳಿಸಿದರು.
ಸಂಗಮ ಸಂಸ್ಥೆಯ ಸಹ ನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಮಹಿಳೆಯರು ಭಾಗವಹಿಸಿದರು. ಬಸವರಾಜ್ ಬಿಸನಾಳ ನಿರೂಪಿಸಿದರು, ಶ್ರೀಮತಿ ಪ್ರತಿಭಾ ಚಳ್ಳಗಿ ಸಂವಿಧಾನ ಪ್ರಸ್ತಾವನೆ ಓದಿದರು, ತೇಜಶ್ವಿನಿ ಹಳ್ಳದಕೇರಿ ಸ್ವಾಗತಿಸಿದರು ಮತ್ತು ಬಸಮ್ಮ ಅಲ್ಲಾಪುರ ವಂದಿಸಿದರು.