ಬೆಂಗಳೂರು : ದೇವಭೂಮಿಯಾದ ಭಾರತದ ಸಂಸ್ಕೃತಿ, ಪರಂಪರೆ, ಚರಿತ್ರೆ ಮಹೋನ್ನತವಾದುದು. ಈ ನೆಲದ ಘನತೆ ಗೌರವವನ್ನು ಕಾಪಾಡುವುದು ಸಮಸ್ತ ದೇಶವಾಸಿಗಳ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಪೂರಕವಾಗಿ ಭಾರತೀಯರಲ್ಲಿ ದೇಶಭಕ್ತಿಯ ತನ್ಮಯತೆ ತುಂಬಿರಬೇಕೆಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.
ಅವರು ಉತ್ತರಪ್ರದೇಶದ ವಾರಾಣಾಸಿ ನಗರದ ತಮ್ಮ ಶ್ರೀಪೀಠದಲ್ಲಿ ಶರನ್ನವರಾತ್ರಿ ಆಚರಣೆಯ ಅಂಗವಾಗಿ ಮಂಗಳವಾರ ೯ನೆಯ ದಿನದ ಶುಭಾಶೀರ್ವಾದ ಸಂದೇಶ ನೀಡಿದರು.
ಹಿಮಾಚಲದ ತುದಿಯಿಂದ ಕನ್ಯಾಕುಮಾರಿಯವರೆಗಿನ ವಿಶಾಲ ಭಾರತದ ಮಣ್ಣಿನ ಕಣಗಳಲ್ಲಿ ದೇವಾಂಶವಿದ್ದು, ಅದೆಲ್ಲವೂ ಆದಿಶಕ್ತಿಯ ಒಂದು ವಿಶಿಷ್ಟ ಶಕ್ತಿ ಸಂಚಯವೇ ಆಗಿದೆ. ಅದಕ್ಕೆಂದೇ ಭಾರತವನ್ನು ‘ಭಾರತಮಾತೆ’ ಅಥವಾ ‘ಭಾರತಾಂಬೆ’ ಎಂದೇ ಸಂಬೋಧಿಸಲಾಗಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ದೇಶಭಕ್ತಿಯ ತನ್ಮಯತೆಯೊಂದಿಗೆ ರಾಷ್ಟçದ ಗೌರವ ಘನತೆಗಳನ್ನು ಕಾಪಾಡಲು ಸಂಕಲ್ಪಿಸಬೇಕು ಎಂದರು.
ಅಧ್ಯಾತ್ಮದ ತವರುಮನೆ : ಭಾರತದ ಅನೇಕ ಆಚಾರ್ಯರು, ಸಂತ ಮಹಾಂತರು, ಶಿವಯೋಗಿಗಳು, ಅವಧೂತರು, ತಪಸ್ವಿಗಳು ತಮ್ಮ ತಪೋವಾಣಿಯ ಸಂದೇಶಗಳ ಮೂಲಕ ಬಿತ್ತರಿಸಿರುವ ಸಾಕ್ಷಾತ್ಕಾರ ಸಂಪಾದನೆಯ ಆಧ್ಯಾತ್ಮದ ವಿಶಿಷ್ಟ ವಿಚಾರಗಳ ನೆಲೆಯಲ್ಲಿ ಭಾರತವು ಆಧ್ಯಾತ್ಮದ ತವರುಮನೆಯಾಗಿ ಇಂದು ಅಖಂಡ ವಿಶ್ವದ ಗಮನವನ್ನು ಸೆಳೆದಿದೆ ಎಂದೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಶರನ್ನವರಾತ್ರಿ ಅಂಗವಾಗಿ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದಲ್ಲಿ ಶ್ರೀಮಹಾಸರಸ್ವತಿ ಪೂಜೆ ಜರುಗಿತು. ಗುರುಕುಲದ ಪ್ರಾಧ್ಯಾಪಕ ಶಿವಮೂರ್ತಿ ಹಿರೇಮಠ ಮತ್ತು ವಿದ್ಯಾರ್ಥಿಗಳು ಇದ್ದರು.
ವರದಿ : ಗುರುಮೂರ್ತಿ ಯರಗಂಬಳಿಮಠ ಶ್ರೀಶಾಂತೇಶ್ವರನಗರ, ಅಮ್ಮಿನಬಾವಿ (ತಾ.ಧಾರವಾಡ) ಮೊ. ೯೯೪೫೮೦೧೪೨೨