ಧಾರವಾಡ: ಇತರೇ ಎಲ್ಲಾ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಭಿನ್ನವಾದದ್ದು. ಸಮಕಾಲೀನ ಸಮಾಜ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿಯನ್ನು ಅರಿತುಕೊಂಡು ವೃತ್ತಿಯ ಘನತೆಗೆ ತಕ್ಕುದಾದ ಆದರ್ಶ ವ್ಯಕ್ತಿತ್ವದ ಜೊತೆಗೆ ಶಿಕ್ಷಕರು ಉತ್ಕೃಷ್ಟ ಬೋಧನೆಯನ್ನು ರೂಢಿಸಿಕೊಳ್ಳಬೇಕೆಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಸಲಹೆ ನೀಡಿದರು.
ಅವರು ಇಲ್ಲಿಯ ಕಲ್ಯಾಣನಗರದಲ್ಲಿರುವ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದೀಪದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಶ್ರೇಷ್ಠ ಶಿಕ್ಷಕರ ಸೇವೆಯಿಂದ ರಾಷ್ಟ್ರಕ್ಕೆ ಉನ್ನತ ವ್ಯಕ್ತಿತ್ವದ ಪ್ರಜೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಶಿಕ್ಷಕ-ಶಿಕ್ಷಕಿಯರು ಪುಸ್ತಕ ಪ್ರೀತಿಯನ್ನು ಬೆಳೆಸಿಕೊಂಡು ನಿತ್ಯವೂ ಹೊಸತು ಓದಿಗೆ ತೆರೆದುಕೊಂಡಾಗಲೇ ಬೋಧನೆಗೆ ಅಗತ್ಯವಾದ ಜ್ಞಾನಾರ್ಜನೆ ಸಾಧ್ಯವಾಗಿ ಶಿಕ್ಷಕ ವೃತ್ತಿಗೆ ಶಕ್ತಿ ಒದಗುತ್ತದೆ. ನಿರಂತರ ಓದು, ಬರವಣಿಗೆ, ಸಾಂಸ್ಕೃತಿಕ ಆಶಯ ಮುಂತಾದ ಪ್ರವೃತ್ತಿಗಳನ್ನು ಬೆಳೆಸಿಕೊಂಡಾಗ ಶಿಕ್ಷಕರ ಬೋಧನೆ ಅತಿಹೆಚ್ಚು ಕ್ರಿಯಾಪ್ರೇರಕವಾಗಲು ಸಾಧ್ಯವಾಗುತ್ತದೆ. ಶಿಕ್ಷಕರು ಸಿದ್ಧತೆಯೊಂದಿಗೆ ತರಗತಿಗೆ ಹೋದಾಗ ಮಾತ್ರ ವಿದ್ಯಾರ್ಥಿಗಳ ಪ್ರಶ್ನೆ-ಪ್ರಮೇಯಗಳಿಗೆ ಸಮರ್ಥವಾಗಿ ಉತ್ತರಿಸಿ ಅವರ ಕಲಿಕಾ ಕಂದಕಗಳನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಭಾವೈಕ್ಯದ ಬದುಕು:
ಶಿಕ್ಷಕ-ಶಿಕ್ಷಕಿಯರು ಕೇವಲ ಪಠ್ಯಾಧಾರಿತವಾಗಿ ತರಗತಿಗಳಲ್ಲಿ ಬೋಧನೆ ಮಾಡಿದರೆ ಸಾಲದು. ಅರಿವಿನ ಮಹಾಪ್ರಕಾಶವನ್ನು ಹೊಂದಿರುವ ಮಾನವನು ಜೀವನದಲ್ಲಿ ಯಶಸ್ವಿಯಾಗಲು; ಜೊತೆಗೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸಹಬಾಳ್ವೆ, ಸಾಮರಸ್ಯ ಮತ್ತು ಕೂಡಿ ಬಾಳುವ ಭಾವೈಕ್ಯದ ಬದುಕನ್ನು ತಮ್ಮ ವಿದ್ಯಾರ್ಥಿಗಳಲ್ಲಿ ಬೆಳೆಸಲು ಆದ್ಯತೆಯ ಗಮನ ನೀಡಬೇಕೆಂದು ಹಿರಿಯ ಸಾಹಿತಿ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಕಿವಿಮಾತು ಹೇಳಿದರು.
ದೀಪಾ ಜ್ಯೋತಿ, ದೇವಿಕಾರಾಣಿ, ಮಾಮುನಿಸ್ವಾಮಿ ಅನಿಸಿಕೆ ಹೇಳಿದರು. ಕಾಲೇಜಿನ ಪ್ರಿನ್ಸಿಪಾಲ್ ಡಾ.ಗಿರಿಜಾ ಹಿರೇಮಠ ಸ್ವಾಗತಿಸಿದರು. ರಾಘವೇಂದ್ರ ಗುರುವಿನ ನಿರೂಪಿಸಿದರು. ಪ್ರಕಾಶ ಇಳಕಲ್ಲ ವಂದಿಸಿದರು.

ಭಾಗ್ಯಶ್ರೀ ಸರ್ಜಾಪೂರ ಭರತನಾಟ್ಯ, ರೇಣುಕಾ ತಳವಾರ ಹಾಗೂ ಸುಧಾರಾಣಿ ಯಮನೂರ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಡಾ. ಕೆ.ಆರ್. ಹಿರೇಮಠ, ಡಾ.ಎಸ್.ವೈ.ಚಕ್ರವರ್ತಿ, ಸಿಸ್ಟರ್ ಶಾಂತಿ, ಮುಖ್ಯಾಧ್ಯಾಪಕ ನಾಗಯ್ಯ ಹಿರೇಮಠ, ಸಂಗಮೇಶ ಅವರಾದಿ ಇತರರು ಇದ್ದರು. ಸಮಾರಂಭದ ಕೊನೆಯಲ್ಲಿ ಪ್ರಶಿಕ್ಷಣಾರ್ಥಿಗಳು ಜ್ಯೋತಿಯ ಸಾಕ್ಷಿಯಾಗಿ ಶಿಕ್ಷಕ ವೃತ್ತಿಗೆ ಪೂರಕವಾದ ಪ್ರತಿಜ್ಞಾವಿಧಿ ಸ್ವೀಕರಿಸಿದರು.

