ಲಿಂಗಾಯತ ಸಂಘಟನೆಯ ವಾರದ ಸತ್ಸಂಗ ಮತ್ತು ಶರಣ ಕುಂಬಾರ ಗುಂಡಯ್ಯ ಸ್ಮರಣೆ

0
399

 

ಬೆಳಗಾವಿ: ಶತಮಾನಗಳು ಗತಿಸಿದರೂ ನಾವು ಶರಣರನ್ನು ನೆನೆಯಲು ಕಾರಣ ಅವರಲ್ಲಿದ್ದ ಒಗ್ಗಟ್ಟು, ಸಂಘಟನೆ ಮತ್ತು ಕಾಯಕನಿಷ್ಠೆ. ಈಗ ಬೆರಳೆಣಿಕೆಯಷ್ಟು ಶರಣರನ್ನು ನೆನೆಯದೇ  ನಿಷ್ಠೆ  ತೋರಿ ತೆರೆಮರೆಗೆ ಸರಿದಿರುವ ಅನೇಕ ಶರಣರನ್ನು ನೆನೆಯಬೇಕಿದೆ ಎಂದು ನಿವೃತ್ತ ಪ್ರಾಚಾರ್ಯ ಮತ್ತು ಹಿರಿಯ ಸಾಹಿತಿಗಳಾದ ವಿರೂಪಾಕ್ಷ ದೊಡ್ಡಮನಿ ಹೇಳಿದರು.

ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ದಿ. 11 ರಂದು ಬೆಳಗಾವಿ ನಗರದ  ಹಳಕಟ್ಟಿ ಭವನದಲ್ಲಿ                ಹಮ್ಮಿಕೊಂಡಿದ್ದ ‘ವಾರದ ಸತ್ಸಂಗ ಮತ್ತು ಶರಣ ಕುಂಬಾರ ಗುಂಡಯ್ಯ’ ಜಯಂತಿಯ ಸ್ಮರಣೋತ್ಸವ  ಕಾರ್ಯಕ್ರಮದಲ್ಲಿ ಅವರು ತಮ್ಮ ಉಪನ್ಯಾಸ ನೀಡಿದರು.

ಕುಂಬಾರ ಗುಂಡಯ್ಯ ಬೀದರದ ಭಾಲ್ಕಿಯಲ್ಲಿ ಅಂಧಶ್ರದ್ಧೆ, ಭೇದ ಭಾವ ಹೋಗಲಾಡಿಸಲು ಜೊತೆಗೆ ಸಮಾನತೆ ಮತ್ತು ಸಮಾನ ಅವಕಾಶ ಕಲ್ಪಿಸುವುದಕ್ಕಾಗಿ ಕಾಯಕ  ನಿಷ್ಠೆಯಿಂದ ದುಡಿದ ಮಹಾನ್ ಶರಣರು. ಇಂಥವರನ್ನು ಈಗ ನೆನೆಯಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಸಂಘಟನೆಯ ಅಧ್ಯಕ್ಷ  ಈರಣ್ಣ ದೇಯನ್ನವರ ಮಾತನಾಡಿ, ಧರ್ಮ ಬೆಳೆಯಲು ಸತ್ಸಂಗ ಬೇಕು. ಅದರಿಂದ ಧರ್ಮ ಬೆಳೆಯುತ್ತದೆ ಪ್ರಾರ್ಥನೆ, ಜೊತೆಗೆ ಚಿಂತನೆ, ಸಂಘಟನೆ ಬೇಕು. ಆ ನಿಟ್ಟಿನಲ್ಲಿ ಸಂಘಟಿತರಾಗಿಯೇ ನಮ್ಮ ಧರ್ಮವನ್ನು ಬೆಳೆಸೋಣ ಎಂದರು.

ಅತಿಥಿಗಳಾದ ಶಂಕರ ಗುಡಸ ಮಾತನಾಡಿ, ಈಗಿನ ದಿನಗಳಲ್ಲಿ ತಂದೆ ತಾಯಿಗಳು ಆಚರಣೆ ಮಾಡಿದರೆ ಮಾತ್ರ ಮಕ್ಕಳು ಹಿಂಬಾಲಿಸುತ್ತವೆ. ಮೊದಲು ನಾವು ಸತ್ಸಂಗಗಳಲ್ಲಿ ಭಾಗಿಯಾಗಿ ಮಕ್ಕಳನ್ನು ಬೆಳೆಸೋಣ ಎಂದರು. 

ಇದೇ ಸಂದರ್ಭದಲ್ಲಿ ವೀರೇಶ ಅಪ್ಪಯ್ಯನವರಮಠ ರವರು ಸಂಘಟನೆ ವತಿಯಿಂದ ಬೇಸಿಗೆ ರಜೆಯಲ್ಲಿ ಹಮ್ಮಿಕೊಂಡ ಉಚಿತ ಟ್ಯೂಷನ್ ಪಡೆದ ವಿದ್ಯಾರ್ಥಿಗಳಿಗೆ  ಶಾಲೆಗೆ ಉಪಯುಕ್ತವಾಗುವ ಪುಸ್ತಕ ಕಂಪಾಸ್ ಮತ್ತು ಇತರ ಪರಿಸರಗಳನ್ನು ಉಚಿತವಾಗಿ ಹಂಚಿದರು. 

ಕಾರ್ಯಕ್ರಮದಲ್ಲಿ ವಿ.ಕೆ ಪಾಟೀಲ ಸದಾಶಿವ ದೇವರಮನಿ ದೊಡ್ಡ ಗೌಡ ಪಾಟೀಲ್, ಎಂ. ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ, ಜ್ಯೋತಿ ಬದಾಮಿ, ಸುಶೀಲಾ ಗುರವ, ಶಾಂತಮ್ಮ ತಿಗಡಿ, ಬಸವರಾಜ ಮಠಪತಿ ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು ಮಹಾದೇವಿ ಅರಳಿ  ವಚನ ಪ್ರಾರ್ಥನೆ ಸಲ್ಲಿಸಿದರು. ಸದಾಶಿವ ದೇವರಮನಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.