ಬೈಲಹೊಂಗಲ: ಕೆಳದಿ ಚನ್ನಮ್ಮನ ವಂಶಸ್ಥರಾದ ಡಾ. ಎಫ್.ಡಿ.ಗಡ್ಡಿಗೌಡರ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಬೇವಿನಕೊಪ್ಪ ಗ್ರಾಮದ ಸಾಮಾಜಿಕ ಕಾರ್ಯಕರ್ತರು, ಆಧ್ಯಾತ್ಮ ಜೀವಿಗಳಾದ ಬಸವಂತಯ್ಯ ಈರಯ್ಯ ಚವತ್ರಿಮಠ ಹೇಳಿದರು.
ಸಾಂಸ್ಕೃತಿಕ ಹಿನ್ನೆಲೆ, ಐತಿಹಾಸಿಕ ಪರಂಪರೆಯನ್ನು ಹೊಂದಿದ ಮನೆತನದಲ್ಲಿ ಜನಿಸಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷತೆಯನ್ನು ಮೈಗೂಡಿಸಿಕೊಂಡಿರುವ ಗಡ್ಡಿಗೌಡರ ಅವರು ಇನ್ನಷ್ಟು ಸಾಧನೆ ಮಾಡಿ ನಾಡಿನ ಕೀರ್ತಿ ಎಲ್ಲಡೆ ಮೊಳಗಿಸಲಿ ಎಂದು ಅವರು ಶುಭ ಹಾರೈಸಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ, 180 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿ 33 ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆದ ಗಡ್ಡಿಗೌಡರ ಅವರ ಜ್ಞಾನ, ಪಾಂಡಿತ್ಯ ಅಗಾಧವಾದದ್ದು ಎಂದು ಹೇಳಿದರು. ಸದಾ ಕ್ರಿಯಾಶೀಲರಾದ ಇವರು ಬೈಲಹೊಂಗಲ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವುದು ಅಭಿಮಾನದ ಸಂಗತಿ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಗಡ್ಡಿಗೌಡರ ಅವರು ದಾಸರ ದಾರಿಯಲ್ಲಿ, ಬೆಳಗಾವಿಯ ಬಳ್ಳಿ, ವಾಸ್ತವದ ಹತ್ತಿರ, ವಚನ ಭಾಸ್ಕರ, ಪ್ರೇಮ ಪರ್ವ, ಮನಸ್ಸಿನ ಮುಖಗಳು ಮುಂತಾದ 10 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಇವರ ಅನೇಕ ವಿಮರ್ಶಾತ್ಮಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಉತ್ತಮ ವಾಗ್ಮಿಗಳಾದ ಇವರು ಅನೇಕ ಗೋಷ್ಠಿಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿದ್ದು ಹೆಮ್ಮೆಯ ವಿಷಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನೇಸರಗಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಸುಖದೇವಾನಂದ ಚವತ್ರಿಮಠ ಮಾತನಾಡಿ ಸದಾ ಹಸನ್ಮುಖಿಗಳಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಲೇಜಿನ ಅಭಿವೃಧ್ಧಿಗಾಗಿ ಅವರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಪರಿಣಾಮಕಾರಿ ಬೋಧನೆ ಜೊತೆಗೆ ಉತ್ತಮ ಆಡಳಿತದಿಂದ ಎಲ್ಲರಿಗೂ ಅಚ್ಚುಮೆಚ್ಚಿನ ಗುರುಗಳಾಗಿದ್ದಾರೆ ಎಂದು ಅವರು ಹೇಳಿದರು.
ನೇಸರಗಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ನಜೀರ್ ತಹಶೀಲ್ದಾರ ಮಾತನಾಡಿ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಭೂಷಣ ಪ್ರಶಸ್ತಿ, ಯುವ ರತ್ನ ಪ್ರಶಸ್ತಿ ಮುಂತಾದ ಅನೇಕ ಗೌರವ ಸನ್ಮಾನಗಳಿಗೆ ಪಾತ್ರರಾದ ಗಡ್ಡಿಗೌಡರ ಅವರ ಸೇವೆ ಅಭಿನಂದನೀಯವಾದದ್ದು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೇಸರಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಫ್.ಡಿ. ಗಡ್ಡಿಗೌಡರ ಕಿತ್ತೂರಿನ ಪಟ್ಟದ ರಾಣಿ ರುದ್ರಮ್ಮನ ಸಮಾಧಿ ಅರ್ಚಕರಾದ ಬಸವಂತಯ್ಯ ಚವತ್ರಿಮಠ ಅವರಿಂದ ಆಶೀರ್ವಾದ ದೊರೆತಿದ್ದು ಸೌಭಾಗ್ಯವೇ ಸರಿ ಎಂದು ಹರ್ಷ ವ್ಯಕ್ತಪಡಿಸಿದರು.
ಶಿವಾನಂದ ಚವತ್ರಿಮಠ ಸ್ವಾಗತಿಸಿದರು. ಮಲ್ಲಿಕಾರ್ಜುನ ಚವತ್ರಿಮಠ ವಂದಿಸಿದರು. ಬಿ.ಎಸ್.ಎಫ್ ಯೋಧರಾದ ಶಂಕರಯ್ಯ ಚವತ್ರಿಮಠ ನಿರೂಪಿಸಿದರು.