spot_img
spot_img

ಬಸವ ಪಥ ಪ್ರಚಾರದ ಮಹಾ ಪಥಿಕ ಮೋಹನ ಬಸವನಗೌಡ ಪಾಟೀಲ

Must Read

spot_img
- Advertisement -

ವಚನ ವಾಙ್ಮಯವು ಈ ಯುಗದ, ಜಗದ ಅತ್ಯಂತ ಜನಪ್ರಿಯ ಸಾಹಿತ್ಯ. ಅದು ತನ್ನ ಅರ್ಥಗರ್ಭಿತವಾದ ದಿವ್ಯ ಸಂದೇಶಗಳಿಂದ ಸುಂದರ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದಿದೆ. 12 ನೆಯ ಶತಮಾನದ ಬಸವಾದಿ ಪ್ರಮಥರು ತಾವು ಕಂಡುಂಡ ಅನುಭವಗಳನ್ನು ಸರಳ ಭಾಷೆಯಲ್ಲಿ ಅಭಿವ್ಯಕ್ತಗೊಳಿಸಿ ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ.

ಈ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿ ಆರೋಗ್ಯಪೂರ್ಣ ಸಮಾಜದ ರಚನೆಗೆ ನಾಂದಿ ಹಾಡಿದ್ದು ಮರೆಯಲಾರದ ಇತಿಹಾಸ. ಈ ದಿಸೆಯಲ್ಲಿ ಶರಣರ ವಚನಗಳನ್ನು ಸಂಶೋಧಿಸಲು ಸೈಕಲ್ ಮೇಲೆ ಗ್ರಾಮ ಗ್ರಾಮಗಳಿಗೆ ಸಂಚರಿಸಿ ನಶಿಸಿ ಹೋಗುತ್ತಿರುವ ವಚನ ಸಾಹಿತ್ಯವನ್ನು ಸಂರಕ್ಷಿಸಿ ವಚನ ಸಂಪತ್ತನ್ನು ಬಹು ದೊಡ್ಡ ಆಸ್ತಿಯನ್ನಾಗಿ ನೀಡಿ ಹೋದ ವಚನ ಸಂಶೋಧನಾ ಪಿತಾಮಹ ಡಾ. ಫ. ಗು. ಹಳಕಟ್ಟಿಯವರ  ಕಾರ್ಯ ಅಮೋಘವಾದುದು.

ವಿಶ್ವ ಪ್ರಸಿದ್ಧ ವಚನ ಸಾಹಿತ್ಯವನ್ನು ವರ್ತಮಾನದ ಯುವ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಡಾ. ಫ.ಗು. ಹಳಕಟ್ಟಿಯವರು ಲಿಂಗೈಕ್ಯರಾದ ಕೆಲ ದಿನಗಳಲ್ಲಿಯೇ ಘನತೆವೆತ್ತ ಮಾಜಿ ರಾಷ್ಟ್ರಪತಿಗಳಾದ ಡಾ. ಬಿ. ಡಿ. ಜತ್ತಿಯವರು ಬಸವ ಸಮಿತಿಯನ್ನು 1964 ರಲ್ಲಿ ಹುಟ್ಟು ಹಾಕಿ, ಸಮಸ್ತ ಶರಣರ ಸಂದೇಶಗಳನ್ನು ವಿಶ್ವದ ತುಂಬೆಲ್ಲ ಪ್ರಸಾರ ಮಾಡುವ ಗುರಿಯನ್ನು ಇಟ್ಟುಕೊಂಡು ಮಹಾ ಮಾರ್ಗವೊಂದನ್ನು ನಿರ್ಮಿಸಿದರು. ಇಂಥ ಮಹಾನ್ ಕಾರ್ಯಕ್ಕೆ ನಿಸ್ವಾರ್ಥ ಮನಸಿನಿಂದ ಮುಂದಾದ ಮತ್ತೊಂದು ಮಹಾನ್ ವ್ಯಕ್ತಿತ್ವ ಎಂದರೆ ಅವರು ಮೋಹನ ಬಸವನಗೌಡ ಪಾಟೀಲರು. 

- Advertisement -

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದಲ್ಲಿ ದಿನಾಂಕ 21-07-1966 ರಲ್ಲಿ ಜನಸಿದ ಚೇತನಾ ಶಕ್ತಿ ವಚನ ಪ್ರೇಮಿ ಮೋಹನ ಬ. ಪಾಟೀಲರ ಸೇವೆ ಅವಿಸ್ಮರಣೀಯ. ಶ್ರೀಯುತರು ಸರಳ ಗುಣ ಸಂಪನ್ನರು. ಸದಾ ವಿಶ್ವ ಶಾಂತಿಯನ್ನು ಬಯಸುವ ಧೋರಣೆಯುಳ್ಳ ಮನೋಭಾವದವರು. ಆ ವಿಶ್ವ ಶಾಂತಿ ಶರಣರ ಸಂದೇಶಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂಬ ಭವ್ಯ ಕನಸನ್ನು ಕಟ್ಟಿಕೊಂಡು ಸಮಾಜಮುಖಿಯಾಗಿ ತಮ್ಮನ್ನು ಸಮರ್ಪಿಸಿಕೊಂಡವರು. 

ಯೋಗಾಯೋಗ ಎಂಬಂತೆ ತಮ್ಮ ಕಂಡ ಕನಸನ್ನು ನನಸಾಗಿಸಿಕೊಳ್ಳಲು ಅವರಿಗೆ ಸುವರ್ಣ ಸಮಯ ಒಂದು ದಿನ ಪ್ರಾಪ್ತವಾಯಿತು. 

ಮೂರು ದಶಕಗಳ ಹಿಂದೆ ಬಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಬಿ. ಡಿ. ಜತ್ತಿಯವರ ಪರಿಚಯ ಶರಣ ತತ್ವಗಳನ್ನು ಪ್ರಸಾರ ಮಾಡಲು ಮಹಾನ್ ವೇದಿಕೆಯೊಂದನ್ನು ರೂಪಿಸಿಕೊಟ್ಟಿತು. ಮೋಹನ ಪಾಟೀಲರ ವಚನ ಪ್ರೇಮವನ್ನು ಮನಗಂಡ ಡಾ. ಬಿ. ಡಿ. ಜತ್ತಿಯವರು ಹರ್ಷವನ್ನು ವ್ಯಕ್ತಪಡಿಸಿ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿದರು.

- Advertisement -

ಅಂದಿನಿಂದ ಮೋಹನ ಪಾಟೀಲರವರ ವಚನ ಪ್ರಸಾರದ ಕಾರ್ಯ ಆರಂಭವಾಯಿತು. ಡಾ. ಬಿ. ಡಿ. ಜತ್ತಿಯವರ ಸಂಪರ್ಕದಲ್ಲಿ ಅನೇಕ ಕಾರ್ಯಗಳನ್ನು ಮಾಡಿ ವಚನ ಪ್ರಸಾರ ಕಾರ್ಯದಲ್ಲಿ ತಮ್ಮನ್ನು ಗಟ್ಟಿಗೊಳಿಸಿಕೊಂಡು ಸಂಪೂರ್ಣವಾಗಿ ವಚನ ಸಾಹಿತ್ಯದ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು.

ಡಾ. ಬಿ. ಡಿ. ಜತ್ತಿಯವರ ಮರಣದ ನಂತರ ಬಸವ ಸಮಿತಿಯ ಸಾರಥ್ಯವನ್ನು ಅವರ ಸುಪುತ್ರರಾದ ಅರವಿಂದ ಜತ್ತಿಯವರು ವಹಿಸಿಕೊಂಡರು. ಅನುಪಮ ನಾಯಕತ್ವ ಮತ್ತು ಕ್ರಿಯಾಶೀಲ ಗುಣದ ಅರವಿಂದ ಜತ್ತಿಯವರು ತಮ್ಮ ತಂದೆಯವರು ಹುಟ್ಟು ಹಾಕಿದ ಬಸವ ಸಮಿತಿಗೆ ಹೊಸದೊಂದು ರೂಪ ನೀಡಿದ್ದು ಶ್ಲಾಘನೀಯ. ದೇಶ ವಿದೇಶಗಳಲ್ಲಿ ಶರಣರ ಮೌಲ್ಯಗಳನ್ನು ಬಿತ್ತರಿಸಿ ವಚನ ಹೊಂಗಿರಣದ ಸ್ಪರ್ಶ ನೀಡಲು ನಡೆಸಿದ ಹೋರಾಟ ಅದ್ವಿತೀಯ.

ವಚನ ಸಾಹಿತ್ಯ ಇಂದು ದೇಶದ ವಿವಿಧ 33 ಭಾಷೆಗಳಲ್ಲಿ ಅನುವಾದಗೊಳ್ಳುವಂತೆ ಮಾಡಿದ ಸಾಧನೆ ಅರವಿಂದ ಜತ್ತಿಯವರ ಪ್ರಾಮಾಣಿಕ ಸೇವೆಗೆ ಸಾಕ್ಷಿಯಾಗಿದೆ. ಇಂತಹ ಸಾಧಕರ ಜೊತೆಗೆ ಮತ್ತೊಬ್ಬ ಸಾಧಕರಾಗಿ ಗುರಿತಿಸಿಕೊಂಡವರು ಮೊಹನ ಪಾಟೀಲರವರು. ಅರವಿಂದ ಜತ್ತಿಯವರ ಮಾರ್ಗದರ್ಶನದಲ್ಲಿ ಮೂರು ದಶಕಗಳಿಂದಲೂ ಪಾಟೀಲರವರು ಬಸವ ಸಮಿತಿಯ ಒಡನಾಟದಲ್ಲಿದ್ದು ಶರಣರ ಸಮಾಜಮುಖಿ ಚಿಂತನೆಗಳನ್ನು ಜನ ಸಾಮಾನ್ಯರ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕಾಯಾ, ವಾಚಾ, ಮನಸಾ ಮಾಡುತ್ತಲೇ ಇದ್ದಾರೆ. ಮೋಹನ ಪಾಟೀಲವರು ಸತತವಾಗಿ ಆರು ಭಾರಿ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಯ್ಕೆಗೊಂಡಿರುವುದು ಅವರ ಅನುಪಮ ಸೇವೆಗೆ ಸಂದ ಗೌರವವಾಗಿದೆ.

ಮೋಹನ ಪಾಟೀಲರ ಬಹು ದೊಡ್ಡ ಕನಸು ಎಂದರೆ ಪ್ರತಿ ಹಳ್ಳಿ ಹಳ್ಳಿಗೂ ಶರಣ ಸಂಪತ್ತನ್ನು ತಲುಪಿಸುವುದು. ಅದರ ಮುಖೇನ ವಚನಕಾರರ ಮಾನವೀಯ ಮೌಲ್ಯಗಳನ್ನು ಯುವ ಜನಾಂಗದಲ್ಲಿ ಬಿತ್ತಿ ಯುವ ಶಕ್ತಿಯನ್ನು ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಲಗೊಳಿಸುವುದು ಆಗಿದೆ. ಒಂದು ಸುಂದರ ಸಮಾಜದ ರಚನೆ ಎಂದರೆ ಅದು ಸುಂದರ ಮನಸಿನ ರಚನೆಯೇ ಆಗಿದೆ ಎಂದು ಅಭಿಪ್ರಾಯ ಪಡುವ ಪಾಟೀಲರು ಸಮಗ್ರ ವಚನ ಸಂಪುಟಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಗ್ರಾಮ ಗ್ರಾಮಗಳಿಗೆ, ಮನೆ ಮನೆಗಳಿಗೆ  ಭೇಟಿ ನೀಡಿದ ಕ್ರಮ ಡಾ. ಫ. ಗು. ಹಳಕಟ್ಟಿಯವರ ಜೀವನ ಮತ್ತು ಸಾಧನೆಯನ್ನು ಮತ್ತೆ ಮತ್ತೆ ನಮ್ಮ ನೆನಪಿಗೆ ತರುತ್ತದೆ.

ಶ್ರೀಯುತರು ಶರಣರ ಸಂದೇಶದಂತೆ ನುಡಿದಂತೆ ನಡೆ ಇದೆ ಜನ್ಮ ಕಡೆ ಎಂಬ ಮಾತಿಗೆ ಸಾಕ್ಷಿಯಾಗಿ ಬದುಕಿದವರು. ವರ್ಗಬೇಧ ಮತ್ತು ವರ್ಣಬೇಧ ಹಾಗೂ ಲಿಂಗಬೇಧವಿಲ್ಲದೆ ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವ ನಮ್ಮ ಮನೆಯ ಮಗನೆಂದೆನಿಸಯ್ಯಾ ಕೂಡಲ ಸಂಗಮ ದೇವ ಎಂಬ ಅಣ್ಣ ಬಸವಣ್ಣನವರ ವಾಣಿಯನ್ನು ತಮ್ಮ ಉಸಿರಾಗಿಸಿಕೊಂಡು ಜ್ಯಾತ್ಯತೀತ, ಧರ್ಮಾತೀತ ಹಾಗೂ ಪಕ್ಷಾತೀತವಾಗಿ ಸರ್ವರನ್ನೂ ಸಂಪ್ರೀತಿಯಿಂದ ಕಾಣುವ ಘನ ವ್ಯಕ್ತಿತ್ವವುಳ್ಳವರು.

ಶ್ರೀಯುತರು ಜನತೆಯಲ್ಲಿ ಸಮಾನತೆ ಮತ್ತು ಸಾಮರಸ್ಯ ಭಾವ ಮೂಡಿಸುವದಕ್ಕಾಗಿ ಸದಾ ಹೋರಾಡುತ್ತಲೇ ಇದ್ದಾರೆ. 21 ನೆಯ ಶತಮಾನದಲ್ಲಿ ಎಷ್ಟೊಂದು ಸುಶಿಕ್ಷಿತರಾದರೂ ಇನ್ನೂ ಮೂಢ ನಂಬಿಕೆಯ ಕರಾಳ ಛಾಯೆಯಲ್ಲಿ ಬದುಕುವ ಪರಿಯನ್ನು ಕಂಡು ಬೇಸರ ವ್ಯಕ್ತ ಪಡಿಸುತ್ತಾರೆ.

ಸಮಾಜದಲ್ಲಿ ನಿತ್ಯ ಕಂಡು ಬರುವ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಲಿಂಗ ಸಂಘರ್ಷ, ಪಕ್ಷ ಸಂಘರ್ಷ, ಭಾಷೆ ಮತ್ತು ಗಡಿಯಂತಹ ಅನೇಕ ಸಂಘರ್ಷಗಳಿಗೆ ಹಾಗೂ ಕೊಲೆ, ಸುಲಿಗೆ, ಅತ್ಯಾಚಾರ, ಭಯೋತ್ಪಾದನೆ, ದಬ್ಬಾಳಿಕೆ, ದೌರ್ಜನ್ಯ ಮುಂತಾದ ಶೋಷಣೆಗಳಿಗೆ ಮೂಢ ನಂಬಿಕೆಯೇ ಮೂಲ ಕಾರಣವಾಗಿದೆ ಎಂದು ಕಳವಳ ಪಡುತ್ತಾರೆ.

ಈ ಎಲ್ಲ ಸಮಸ್ಯೆಗಳಿಗೆ ರಾಮಬಾಣ ಎಂದರೆ ಅದು ಶರಣರು ಪ್ರತಿಪಾದಿಸಿದ ಜೀವನ ಸಿದ್ಧಾಂತಗಳು. ಅವುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಾದ ಅನಿವಾರ್ಯತೆ ತುಂಬಾನೇ ಇದೆ ಎಂದು ಒತ್ತಿ ಹೇಳುತ್ತಾರೆ. ಕಾರಣ ವಚನ ಸಾಹಿತ್ಯದ ಆಳ ಮತ್ತು ಅಗಲನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ ಎನ್ನುತ್ತಾರೆ. ಅಂತೆಯೇ ಅವರು ಬಸವ ಪಥವನ್ನು ಇಂದು ಮನೆ ಮನೆಗೆ ತಲುಪಿಸುವ ಸತ್ಕಾರ್ಯವನ್ನು ಮಾಡುತ್ತಿದ್ದಾರೆ.

ಪಾಟೀಲರು ಮೂರು ದಶಕಗಳಿಂದಲೂ ನಾಡಿನ ವಿವಿಧ ಜಿಲ್ಲೆಗಳ ತುಂಬ ಸಂಚರಿಸಿ ಇದುವರೆಗೆ ಎರಡು ಸಾವಿರದಾ ಐದುನೂರಕ್ಕಿಂತ ಹೆಚ್ಚು ಬಸವ ಪಥ ವಾಚಕರನ್ನು ತಯಾರಿಸಿದ್ದಾರೆ. ಈ ದೃಷ್ಟಿಯಿಂದ ಶ್ರೀಯುತರನ್ನು ಬಸವ ಪಥದ ಮಹಾ ಪಥಿಕ ಎಂದೇ ನಾವು ಹೆಮ್ಮೆಯಿಂದ ಸಂಬೋಧಿಸಬೇಕಾಗುತ್ತದೆ.

ಮೋಹನ ಪಾಟೀಲರು ಕಳೆದ ಅನೇಕ ವರ್ಷಗಳಿಂದ ಜನತೆಯಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಲು ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಿಸಬೇಕೆಂಬ ಮಹದಾಸೆಯಿಂದ ಶಾಲಾ ಕಾಲೇಜು ಮಟ್ಟದಲ್ಲಿ ನಿರಂತರವಾಗಿ “ವಚನಗಳಲ್ಲಿ ವ್ಯಕ್ತಿತ್ವ ವಿಕಸನ ”ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಅನೇಕ ಉಪನ್ಯಾಸಗಳನ್ನು ನೀಡುತ್ತಾ ಶರಣ ಸಂಸ್ಕತಿಯನ್ನು ಪ್ರಸಾರ ಮಾಡಿ ಸದೃಢ ಸಮಾಜದ ರಚನೆಯಲ್ಲಿ ಶರಣರ ಮಹತ್ವವನ್ನು ಸಾರುತ್ತಾ ಸಾಗಿದ ಪ್ರಯತ್ನ ವರ್ಣನಾತೀತವಾಗಿದೆ. ಬಸವ ಸಮಿತಿಯು ಆಯೋಜಿಸಿದ “ಬಸವ ವಾಹಿನಿ” ಎಂಬ ಕಾರ್ಯಕ್ರಮದಲ್ಲಿ ಶ್ರೀಯುತರು ತಮ್ಮನ್ನು ಸಮರ್ಥವಾಗಿ ತೊಡಗಿಸಿಕೊಂಡ ಬಗೆ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಸವ ತತ್ವಗಳನ್ನು ಪ್ರಸಾರ ಮಾಡುವುದಕ್ಕಾಗಿ ಈ ಯೋಜನೆಯೊಂದನ್ನು ಹಮ್ಮಿಕೊಂಡು ಇದರ ಮೂಲಕ ವಚನಕಾರರ ವಚನ ಸಿರಿಯನ್ನು ಪ್ರಚುರಪಡಿಸಿ ಜನತೆಗೆ  ವಚನಗಳಲ್ಲಿ ಅಡಗಿರುವ ಸಾಮಾಜಿಕ ಸಂದೇಶಗಳನ್ನು ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಅಷೇ ಅಲ್ಲದೆ, “ ಕಾರವಾರದ ಆಕಾಶವಾಣಿ ಕೇಂದ್ರದಲ್ಲಿ ” ಶರಣ ಸಂದೇಶ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವರ್ತಮಾನದ ಮಾನವನ ಬದುಕಿಗೆ  ವಚನ ಸಾಹಿತ್ಯದ ಪ್ರಸ್ತುತೆಯನ್ನು ತಿಳಿಸಿಕೊಟ್ಟಿದ್ದಾರೆ.

ಶ್ರೀಯುತರು ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕನ್ನಡ ನಾಡು, ನುಡಿ ಸಂಸ್ಕೃತಿ, ಪರಂಪರೆ ಮತ್ತು ಕೋಟೆ ಕೊತ್ತಲಗಳ ಸಂರಕ್ಷಣೆಯ ಜೊತೆ ಜೊತೆಗೆ ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಟ್ಟ ವಚನ ಸಾಹಿತ್ಯದ ಪ್ರಚಾರಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ತಮ್ಮ ಪ್ರತಿ ಹೆಜ್ಜೆಯಲ್ಲೂ ವಚನ ಚಿಂತನೆಯನ್ನು ಮೈಗೂಡಿಸಿಕೊಂಡ ಇವರು ಅಪಾರ ಶರಣ ಬಳಗವನ್ನು ಹೊಂದಿದ್ದಾರೆ. ಯಾರೆ ಪರಿಚಯವಾದರೂ ಕೂಡ ಅವರು ಪ್ರೀತಿ ಮತ್ತು ಸ್ನೇಹ ದ್ಯೋತಕವಾಗಿ ಶರಣರ ಪುಸ್ತಕಗಳನ್ನು ನೀಡಿ ಶುಭ ಕೋರುತ್ತಾರೆ. ಮದುವೆ ಸಮಾರಂಭ ಮತ್ತು ಇತರೆ ಯಾವುದೇ ಸಮಾರಂಭಗಳಲ್ಲಿ ಪಾಲ್ಗೊಂಡಾಗ ಕಾಣಿಕೆ ರೂಪದಲ್ಲಿ ವಚನ ಪುಸ್ತಕಗಳನ್ನು ನೀಡುವ ಕ್ರಮ ಅವರ ವಚನ ಸಾಹಿತ್ಯದ ಪ್ರಸಾರಕ್ಕೆ ಸಾಕ್ಷಿಯಾಗಿದೆ.

ಅವರ ಮನೆಯಲ್ಲಿ ಬಸವ ಪಥ ಆರಂಭವಾದಾಗಿನಿಂದ ಇಂದಿನವರೆಗೆ ಪ್ರಕಟಗೊಂಡ ಬಸವ ಪಥ ಮಾಸ ಪತ್ರಿಕೆಗಳು ಕಂಡು ಬರುತ್ತವೆ. ಆ ಎಲ್ಲ ಬಸವ ಪಥಗಳನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿಟ್ಟುಕೊಂಡ ಬಗೆ ಅವರ ಬಗ್ಗೆ ಅಪಾರ ಅಭಿಮಾನವನ್ನು ಮೂಡಿಸುತ್ತದೆ. ಇಂತಹ ಶರಣ ಸಾಹಿತ್ಯದ ಪ್ರೀತಿ ಮತ್ತು ಪ್ರಸಾರ ಕಾರ್ಯವನ್ನು ಮನಗಂಡು ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿಯವರು 2018 ರಲ್ಲಿ  ಮೋಹನ ಬ. ಪಾಟೀಲವರಿಗೆ ಬೆಂಗಳೂರಿನ ಗಾಂಧಿ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಶಿವರುದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ “ ಬಸವ ಸೇವಾ ಪ್ರಶಸ್ತಿ” ಯನ್ನು ಪ್ರದಾನ ಮಾಡಿ ಗೌರವಿಸಿದ್ದಾರೆ. 

ಮೋಹನ ಪಾಟೀಲ ಅವರು ವಚನ ಸಾಹಿತ್ಯದ ಪ್ರಸಾರದ ಹಿನ್ನಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಕವಿ ಗೋಷ್ಠಿಗಳನ್ನು ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಸಾವಿರಾರು ಜನರಲ್ಲಿ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ಕೇಂದ್ರ ಪರಿಷತ್ತಿನ ವತಿಯಿಂದ ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಯುತರಿಗೆ “ಕನ್ನಡ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪಾಟೀಲ ಅವರದು ಬಹುಮುಖ ಸೇವೆ. ಶರಣ ಮಾರ್ಗದಲ್ಲಿ ಜೀವಿಸುತ್ತಿದ್ದ ಅವರು ಕೃಷಿಕರ, ದೀನ ದಲಿತರ ಮತ್ತು ಕಾರ್ಮಿಕರ ಪರವಾದ ಕೆಲಸಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಇವರ ಸಮಾಜ ಸೇವೆಯನ್ನು ಗುರಿತಿಸಿ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ 1992 ರಲ್ಲಿ ಗೋಕಾಕದಲ್ಲಿ ಜರುಗಿದ ಜಿಲ್ಲಾ ಯುವಜನ ಮೇಳದಲ್ಲಿ “ಯುವ ಪ್ರಶಸ್ತಿ” ನೀಡಿ ಗೌರವಿಸಿದೆ.  ಇವರ ಶರಣ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಮನಗಂಡು ಅನೇಕ ಸಂಘ ಸಂಸ್ಥೆಗಳು ಹತ್ತು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ ಬಗೆ ಇವರ ನಿಸ್ವಾರ್ಥ ಸೇವೆಗೆ ಸಂದ ಫಲವಾಗಿದೆ.

ಒಟ್ಟಾರೆಯಾಗಿ ಮೋಹನ ಬಸವನಗೌಡ ಪಾಟೀಲರು ಬಸವಣ್ಣನವರ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಉಕ್ತಿಯಂತೆ ವಿಶಾಲ ಹೃದಯಿಗಳಾಗಿ ಜೀವಿಸುತ್ತಾ, ಎಲೆ ಮರೆಯ ಕಾಯಿ ಅಂತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಾ ಬದುಕುತ್ತಿರುವ ಪರಿ ಮತ್ತು ಸರ್ವರೊಂದಿಗೆ ಸಮಾನ ಮನಸ್ಕರಾಗಿ ಬೆರೆತು ಶರಣ ಸಾಹಿತ್ಯದ ಕಂಪನ್ನು ನಾಡಿನ ತುಂಬೆಲ್ಲ ಪಸರಿಸುತ್ತಿರುವ ರೀತಿ ಹಾಗೂ ಬಸವ ಪಥದ ಪ್ರಸಾರದ ಕಾರ್ಯ ವೈಖರಿ ಪ್ರತಿ ಶರಣ ಬಂಧುಗಳಿಗೆಲ್ಲ ಮಾದರಿಯಾಗಿದೆ. 

ಈ ನಿಟ್ಟಿನಲ್ಲಿ ಇವರನ್ನು ಬಸವ ಪಥ ಪ್ರಚಾರದ ಮಹಾ ಪಥ ಎಂದು ಕರೆದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಡಾ. ಫಕೀರನಾಯ್ಕ ದುಂಡಪ್ಪ ಗಡ್ಡಿಗೌಡರ

ಕನ್ನಡ ವಿಭಾಗದ ಮುಖ್ಯಸ್ಥರು,

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಮತ್ತು

ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬೈಲಹೊಂಗಲ

ಬೆಳಗಾವಿ ಜಿಲ್ಲೆ, 591102

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group