ಹೊಳೆಹಳ್ಳ ಕೆರೆಬಾವಿ ಯಾವುದಾಗಿರಲೇನು ?
ಸಿಹಿನೀರ ಕುರಿತೇಕೆ ವಾದಿಸುವುದು ?
ದಾಹ ಪರಿಹಾರ ನೀ ಮಾಡಿಕೊಂಡರೆ ಸಾಕು
ಮತ ಚರ್ಚೆಯೇತಕ್ಕೆ? – ಎಮ್ಮೆತಮ್ಮ
ಶಬ್ಧಾರ್ಥ
ದಾಹ = ನೀರಡಿಕೆ
ತಾತ್ಪರ್ಯ
ನೀರಡಿಸಿದಾಗ ಸಿಹಿನೀರು ಇದ್ದರೆ ಸಾಕು ತೃಪ್ತಿಯಾಗುವವರೆಗೆ
ಕುಡಿದು ಸಂತೋಷಪಡಬೇಕು. ಅದರ ಬದಲಾಗಿ ಈ ನೀರು
ಹೊಳೆ ನೀರೆಂದಾಗಲಿ, ಹಳ್ಳದ ನೀರೆಂದಾಗಲಿ, ಕೆರೆಯ
ನೀರೆಂದಾಗಲಿ ಅಥವಾ ಬಾವಿಯ ನೀರೆಂದಾಗಲಿ ವಿಚಾರ
ಮಾಡಬಾರದು.ಆ ನೀರು ಗಿಂಡಿಯಲ್ಲಿರಲಿ, ಹಂಡೆಯಲ್ಲಿರಲಿ,
ತಂಬಿಗೆಯಲ್ಲಿರಲಿ ಗುಂಡಿಗೆಯಲ್ಲಿರಲಿ ಅಥವಾ ಕಪ್ಪಿನಲ್ಲಿರಲಿ ಅದರ ಆಕಾರ ತಾಳುವುದೆ ಹೊರತು ಸಿಹಿನೀರು ಮಾತ್ರ ಒಂದೆ.
ನೀರಿನ ಮೂಲವನ್ನಾಗಲಿ ಮತ್ತು ಪಾತ್ರೆಯ ಆಕಾರವನ್ನಾಗಲಿ
ನೋಡಬಾರದು. ನಿನಗೆ ಬೇಕಾಗಿರುವುದು ದಾಹ ಪರಿಹಾರ.
ಹಾಗೆ ಹಿಂದು ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ,ಕ್ರೈಸ್ತ
ಧರ್ಮ, ಇಸ್ಲಾಂ ಧರ್ಮ ಮುಂತಾದ ಧರ್ಮಗಳ ಬಗ್ಗೆ ಚರ್ಚೆ
ಮಾಡುವುದು ತರವಲ್ಲ. ನಿನಗೆ ಮುಖ್ಯವಾಗಿ ಬೇಕಿರುವುದು
ಸುಖ ಶಾಂತಿ ನೆಮ್ಮದಿ ಸಮಾಧಾನ. ಅವು ಎಲ್ಲಿಯಾದರು
ಸಿಗಲಿ ಅದನ್ನು ಪಡೆದಕೊಳ್ಳುವುದು ಮಾತ್ರ ನಿನಗೆ ಮುಖ್ಯ.
ಉಳಿದ ಚರ್ಚೆಗಳು ಅನವಶ್ಯಕ. ಅಂಥ ಚರ್ಚೆಗಳು ಗೌಣ.
ಆದಕಾರಣ ಇರುವುದೊಂದೆ ಧರ್ಮ.ಅದು ಮಾನವ ಧರ್ಮ.
ವಿವಿಧ ಆಚರಣೆಗಳಿಂದ ಮತಪಂಥಗಳಾಗಿ ಹುಟ್ಟಿಕೊಂಡವು.
ಅವುಗಳನ್ನು ಚರ್ಚೆ ಮಾಡದೆ ಇರುವುದು ಶಾಂತಿಗೆ ಸೋಪಾನ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990