ಶ್ರೀ ವಿದ್ಯಾವಲ್ಲಭ ಸ್ವಾಮೀಜಿ ಪೀಠಾರೋಹಣ

0
39
ಬೆಂಗಳೂರು – ಕೋಲಾರ ತಾಲೂಕಿನ ತಂಬಿಹಳ್ಳಿಯ ಶ್ರೀಮನ್ ಮಾಧವತೀರ್ಥ ಮಹಾಸಂಸ್ಥಾನದ 44ನೇ ಪೀಠಾಧಿಪತಿಗಳಾಗಿ ಬುಧವಾರ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ ಪೀಠಾರೋಹಣ ಮಾಡಿದರು.
   ಶ್ರೀಮಠದ 43ನೇ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಸಾಗರ ಮಾಧವತೀರ್ಥ ಸ್ವಾಮೀಜಿ ಅವರು ಏ,7ರ ಸೋಮವಾರ ರಾತ್ರಿ ಹರಿಪದ ಸೇರಿದ ಕಾರಣ ಬುಧವಾರ ಅವರ ಉತ್ತರಾಧಿಕಾರಿಗಳಾದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥರ ಪೀಠಾರೋಹಣ ಕಾರ್ಯಕ್ರಮ ನಡೆಯಿತು.
ಕೋಲಾರ, ಮುಳಬಾಗಿಲು, ಬೆಂಗಳೂರು, ಚೆನೈ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ಪೀಠಾರೋಹಣ ಮಾಡಿದ ನೂತನ ಶ್ರೀಗಳಿಗೆ ಮಠದ ಕಾರ್ಯದರ್ಶಿ ಕಂಬಾಲೂರು ಸಮೀರಾಚಾರ್ಯ ಅವರು ಮೂಲವೀರ ರಾಮದೇವರ ಪೆಟ್ಟಿಗೆಯ ಬೀಗದ ಕೈಗಳನ್ನು ಹಸ್ತಾಂತರಿಸುವ ಮೂಲಕ ಶ್ರೀಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದರು.
ಇದಕ್ಕೂ ಮೊದಲು ಶ್ರೀ ವೀರರಾಮದೇವರನ್ನು ಒಳಗೊಂಡಂತೆ ಸಂಸ್ಥಾನ ಪೂಜೆ, ಶ್ರೀ ಮುಖ್ಯಪ್ರಾಣದೇವರಿಗೆ ಪಂಚಾಮೃತ ಅಭಿಷೇಕ, ಗುರುಗಳಿಗೆ ಹಸ್ತೋದಕಗಳನ್ನು ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ ನೆರವೇರಿಸಿದರು.
   ಪೀಠಾರೋಹಣ ಮಾಡಿದ ನಂತರ ಅನುಗ್ರಹ ಸಂದೇಶ ನೀಡಿದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ ಅವರು ಶ್ರೀಮಠವು ಅನೂಚಾನವಾಗಿ ಅನುಸರಿಸಿಕೊಂಡು ಬಂದಿರುವ ಶಾಸ್ತ್ರಸಮ್ಮತ ಸಂಪ್ರದಾಯಗಳನ್ನು ಯಥಾವತ್ತಾಗಿ ಮುಂದುವರೆಸಿ ಶ್ರೀಮಠದ ಹಿರಿಮೆಯನ್ನು ಉಳಿಸಿಕೊಳ್ಳುವುದಾಗಿ ಘೋಷಿಸಿದರು. ತಮ್ಮ ಗುರುಗಳು ಸೇರಿದಂತೆ ಶ್ರೀಮಠದ ಪರಂಪರೆಯ ಎಲ್ಲಾ ಸ್ವಾಮೀಜಿಗಳು ಶ್ರೀಮಠವನ್ನು ಸ್ವಾಭಿಮಾನಿ ಮತ್ತು ಸ್ವಾವಲಂಭಿಯಾಗಿ ಮುನ್ನಡೆಸಿದ್ದು ಅದಕ್ಕೆ ಚ್ಯುತಿ ಬಾರದಂತೆ ಶ್ರೀಮಠದ ಗೌರವ ಪರಂಪರೆಯನ್ನು ಎತ್ತಿ ಹಿಡಿಯುವುದಾಗಿ ನುಡಿದರು.
    ಈ ಸಂದರ್ಭದಲ್ಲಿ ಶ್ರೀಮಠದ ಪುರೋಹಿತರಾದ ಬಂಗಾರಪೇಟೆ ಮುಕುಂದಾಚಾರ್ಯ, ಶ್ರೀಮಠದ ಪ್ರಮುಖ ಶಿಷ್ಯರಾದ ಮಡಿ ವೆಂಕಟೇಶಮೂರ್ತಿ, ಮುಳಬಾಗಿಲು ಎಂ.ಜಿ.ವ್ಯಾಸರಾವ್, ಬೆಂಗಳೂರು ವಿಜಯ ವಿಠ್ಠಲಚಾರ್, ಬಿ.ಆರ್.ಪ್ರಹ್ಲಾದರಾವ್, ಶ್ರೀನಿಧಿ ಆಚಾರ್, ಕರ್ನೂಲು ಬಿ.ಆರ್.ಶ್ರೀನಿವಾಸಚಾರ್ಯ, ಕೋಲಾರದ ಬಿ.ಜಿ. ಸುದರ್ಶನಚಂದ್ರ, ವ್ಯಾಸರಾವ್, ಅಯಾಚಿತ ಅರುಣ್‌ಕುಮಾರ್ ಸೇರಿದಂತೆ ಅಪಾರ ಶಿಷ್ಯ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here