ಯಾರ ತೋಟದಿ ಬೆಳೆದ ಕಬ್ಬಾದರೇನೆಂತೆ ?
ಸುಲಿದು ತಿಂದದರ ರಸಹೀರಿ ನೋಡು
ಯಾವ ಧರ್ಮದ ಗ್ರಂಥವಾಗಿದ್ದರೇನಂತೆ ?
ಗ್ರಹಿಸದರ ಸಾರವನು – ಎಮ್ಮೆತಮ್ಮ
ಶಬ್ಧಾರ್ಥ
ಗ್ರಹಿಸು = ಸ್ವೀಕರಿಸು, ತಿಳಿ, ಅರಿ
ತಾತ್ಪರ್ಯ
ತೋಟದ ಮಾಲಿಕ ಯಾರಿದ್ದರೇನು ? ಆ ತೋಟದಲ್ಲಿ
ಬೆಳೆದ ಕಬ್ಬು ಯಾವುದಾದರು ಸರಿ. ಮೊದಲು ಸಿಪ್ಪೆ
ಸುಲಿದು ತಿಂದು ರಸವನ್ನು ಮಾತ್ರ ಸವಿದು ನುಂಗು.ಮತ್ತೆ
ಆ ಸಿಪ್ಪೆಯನ್ನು ಉಗುಳಿಬಿಡು. ಕಬ್ಬಿನ ರಸ ಹೀರಿ ಕುಡಿದರೆ
ಅದು ರಕ್ತ ಶುದ್ಧಿ ಮಾಡಿ ಕಾಮಾಲೆ ರೋಗವನ್ನು ಕಳೆಯುತ್ತದೆ.
ಹಾಗೆ ಯಾವ ಧರ್ಮದ ಗ್ರಂಥವಾಗಿದ್ದರೇನು ಮತ್ತು ಯಾರು
ಬರೆದಿದ್ದರೇನು ? ನಿನಗೆ ಬೇಕಾಗಿರುವುದು ಅದರ ತಿರುಳು
ಮಾತ್ರ. ಗ್ರಂಥ ತೆಗೆದು ಓದಿ ತಿರುಳು ಮಾತ್ರ ಸ್ವೀಕರಿಸಬೇಕು.
ಮತ್ತು ಅಸಂಗತ ವಿಚಾರಗಳಿದ್ದರೆ ಬಿಟ್ಟುಬಿಡು. ಅದರ
ತಿರುಳು ತಿಳಿದರೆ ನಿನ್ನಲ್ಲಿರುವ ಭವರೋಗ ತೊಲಗುತ್ತದೆ.
ಆ ಗ್ರಂಥ ಭಗವದ್ಗೀತೆ ಭಾಗವತ ಇರಬಹುದು.ಬೈಬಲ್
ಕುರಾನ್ ಇರಬಹುದು.ವೇದ ಉಪನಿಷತ್ತು ಇರಬಹುದು. ಗುರುಗ್ರಂಥ ಸಾಹಿಬ್, ಗುರುಗೀತೆ ಇರಬಹುದು,
ಬಸವಪುರಾಣ, ದೇವಿಪುರಾಣ ಇರಬಹುದು, ಹರಿದಾಸರ ಹಾಡುಗಳು ಶಿವಶರಣರ ವಚನಗಳು ಇರಬಹುದು. ಕೆಲವನ್ನು ರುಚಿ ನೋಡಬೇಕು, ಮತ್ತೆ ಕೆಲವನ್ನು ಅಗಿಯಬೇಕು, ಇನ್ನು ಕೆಲವನ್ನು ನುಂಗಬೇಕು.ಕಡೆಗೆ ಕೆಲವನ್ನು ಅರಗಿಸಿಕೊಳ್ಳಬೇಕು. ಹೀಗೆ ಇವುಗಳನ್ನು ಓದಿಕೊಂಡು ನಿನ್ನ ನಿಜವಾದ ಮಸ್ತಕದ ಪುಸ್ತಕವನ್ನು ಬಿಚ್ಚಿ ಓದಿದರೆ ಆಗ ನಿನಗೆ ಕೇವಲ ಜ್ಞಾನ ಪ್ರಾಪ್ತವಾಗುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990