ಯುದ್ಧದಲಿ ಗೆದ್ದರೂ ತನ್ನಣ್ಣ ಭರತನಿಗೆ
ಬಾಹುಬಲಿ ರಾಜ್ಯವನೆ ತ್ಯಾಗಮಾಡಿ
ಕಾಡಿನಲಿ ತಪನಿಂತು ನಿರ್ವಾಣ ಗಳಿಸಿದನು
ಭೋಗತ್ಯಾಗವೆ ಯೋಗ – ಎಮ್ಮೆತಮ್ಮ
ಶಬ್ಧಾರ್ಥ
ನಿರ್ವಾಣ = ಮುಕ್ತಿ
ತಾತ್ಪರ್ಯ
ಜೈನ ಧರ್ಮದ ಮೊದಲ ತೀರ್ಥಂಕರ ವೃಷಭನಾಥನ ಮಕ್ಕಳು
ಭರತ ಬಾಹುಬಲಿ ಅಣ್ಣತಮ್ಮಂದಿರು. ತಂದೆ ಹಂಚಿಕೊಟ್ಟ
ತಮ್ಮ ತಮ್ಮ ರಾಜ್ಯವಾಳುತಿದ್ದರು. ಭರತನು ಧರ್ಮಚಕ್ರ
ಹಿಡಿದು ಎಲ್ಲ ರಾಜ್ಯಗಳನ್ನು ಗೆಲ್ಲಲು ಹೋರಡುತ್ತಾನೆ. ಆತನ
ಇತರ ತಮ್ಮಂದಿರು ತಮ್ಮ ರಾಜ್ಯ ಅಣ್ಣನಿಗೆ ಒಪ್ಪಿಸಿ
ತಂದೆಯಿಂದ ದೀಕ್ಷೆಪಡೆದು ತಪಸ್ಸಾಚರಿಸಲು ಹೊರಡುತ್ತಾರೆ.
ಆದರೆ ಬಾಹುಬಲಿ ಮಾತ್ರ ಒಪ್ಪಿಸದೆ ಯುದ್ಧ ಮಾಡಲು ಸನ್ನದ್ದನಾಗುತ್ತಾನೆ. ಆಗ ಸೈನ್ಯದೊಂದಿಗೆ ಯುದ್ಧ ನಡೆದರೆ
ಅನೇಕರು ಸಾಯುತ್ತಾರೆಂದು ಅವರಿಬ್ಬರಲ್ಲಿ ದೃಷ್ಟಿಯುದ್ಧ
ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯುತ್ತದೆ. ಪರಾಕ್ರಮಿ
ಬಾಹುಬಲಿ ಮೂರುಯುದ್ಧದಲ್ಲಿ ಜಯಿಸಿ ಅಣ್ಣ ಭರತನನ್ನು
ಮೇಲೆತ್ತಿ ತಿರುಗಿಸುತ್ತಾನೆ. ಎಲ್ಲ ಗೆದ್ದ ಬಾಹುಬಲಿಗೆ ವೈರಾಗ್ಯ
ಬಂದು ತಾನು ಗೆದ್ದ ರಾಜ್ಯವೆಲ್ಲವನ್ನು ಅಣ್ಣನಿಗೆ ಒಪ್ಪಿಸಿ
ಅರಣ್ಯದಲ್ಲಿ ನಿಂತು ತಪಸ್ಸು ಮಾಡುತ್ತಾನೆ.ಅನೇಕ ವರ್ಷ
ನಿಂತಲ್ಲೆ ನಿಂತಿರಲು ಕಾಲುಗಳಿಗೆ ಗಿಡಬಳ್ಳಿ ಬೆಳೆದು ಸುತ್ತಿದರು
ಇದು ನನ್ನ ಭೂಮಿಯೆಂಬ ಅಹಂನಿಂದ ತಪ ಫಲಿಸುವುದಿಲ್ಲ.
ಆಗ ಅಣ್ಣನಿಂದ ದಾನ ಪಡೆದು ತಪ್ಪಸ್ಸಾಚರಿಸಿ ನಿರ್ವಾಣ
ಅಂದರೆ ಕೇವಲಜ್ಞಾನ ಪಡೆಯುತ್ತಾನೆ. ಭೋಗತ್ಯಾಗ ಮತ್ತು
ಅಹಂ ನಿರಸನದಿಂದ ಮಾತ್ರ ಯೋಗ ಸಾಧ್ಯವೆಂದು ಈ
ಬಾಹುಬಲಿಯ ಸಾಧನೆಯಿಂದ ತಿಳಿದುಬರುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990