ತಾರೆಗಳು ನೂರಿರಲು ಬುವಿಗೆ ಬೆಳಕಾದೀತೆ ?
ಕತ್ತಲನು ಕಳೆಯುವನು ಚಂದ್ರನೊಬ್ಬ
ನೂರಾರು ಜನಗಳಿಂದ ಜ್ಞಾನ ತೊಲಗೀತೆ ?
ಬೇಕೊಬ್ಬ ಗುರುದೇವ – ಎಮ್ಮೆತಮ್ಮ
ಶಬ್ಧಾರ್ಥ
ತಾರೆಗಳು = ಚುಕ್ಕಿಗಳು
ತಾತ್ಪರ್ಯ
ಆಕಾಶದಲ್ಲಿ ರಾತ್ರಿ ಎಷ್ಟು ನಕ್ಷತ್ರಗಳಿದ್ದರು ಭೂಮಿಯ ಮೇಲಿನ ಕತ್ತಲು ಕಳೆಯಲಾರವು. ಒಬ್ಬ ಚಂದ್ರನಿದ್ದರೆ ಸಾಕು ರಾತ್ರಿ ಭೂಮಿಯ ಮೇಲೆ ಕತ್ತಲು ಕಳೆದು ಬೆಳದಿಂಗಳು ನೀಡುವನು. ಏಕೆಂದರೆ ನಕ್ಷತ್ರಗಳು ಭೂಮಿಯಿಂದ ಬಹಳ ದೂರದಲ್ಲಿವೆ. ಆದರೆ ಚಂದ್ರನು ಭೂಮಿಯ ಸಮೀಪವಿದ್ದು ಬೆಳದಿಂಗಳು ಸುರಿಸುತ್ತಾನೆ. ಹಾಗೆ ಸಂಬಂಧವಿಲ್ಲದ ಅನೇಕ ಜನರಿದ್ದರು ನಮ್ಮ ಅಜ್ಞಾನವೆಂಬ ಕತ್ತಲೆಯನ್ನು ಕಳೆಯಲಾರರು. ಆದರೆ ಆಧ್ಯಾತ್ಮಿಕ ಗುರು ಶಿಷ್ಯನಿಗೆ ಎಲ್ಲ ಅಧ್ಯಾತ್ಮ ವಿಚಾರವನ್ನು ಬೋಧನೆ ಮಾಡಿ ದೀಕ್ಷೆ ನೀಡುವನು. ದೀಕ್ಷೆ ಪಡೆದ ಶಿಷ್ಯ ಗುರುವಿನ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಗುರಿಯನ್ನು ತಲುಪುವನು. ಗುರುವಿನ ಮಹತ್ವ ಶ್ಲೋಕದಲ್ಲಿ ಹೀಗಿದೆ.
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯ
ಚಕ್ಷುರುನ್ಮೀಲಿತಂ ಯೇನಂ ತಸ್ಮೈ ಶ್ರೀ ಗುರವೇ ನಮಃ
ಅಜ್ಞಾನದ ಕತ್ತಲೆಯನ್ನು ತೊಲಗಿಸಿ ಸುಜ್ಞಾನವೆಂಬ ಅಂಜನದಿಂದ ಕುರುಡುತನವನ್ನು ಹೋಗಲಾಡಿಸುವ ಗುರುವೊಬ್ಬ ಬೇಕೇಬೇಕು. ಗುಕಾರಸತ್ತ್ವನಂಧಕಾರಶ್ಚ ರುಕಾರಸ್ತೇಜ ಉಚ್ಯತೆ .ಅಂದರೆ ಗುರುವಿನಲ್ಲಿಯ ಗು ಅಕ್ಷರ
ಅಂಧಕಾರ(ಅಜ್ಞಾನ) ರು ಅಕ್ಷರ ಬೆಳಕು (ಜ್ಞಾನ)ಎಂದರ್ಥ. ಅದಕ್ಕಾಗಿ ಅಧ್ಯಾತ್ಮ ಸಾಧನೆ ಮಾಡುವವರಿಗೆ ಮಾರ್ಗದರ್ಶನ ಮಾಡುವ ಒಬ್ಬ ಗುರುವಿನ ಅವಶ್ಯಕತೆಯಿದೆ. ಗುರುವಿನ ಗುಲಾಮನಾಗುವತನಕ ದೊರಕದಣ್ಣ ಮುಕುತಿ ಎಂದಿದ್ದಾರೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990