ಬಟ್ಟೆಯಲಿ ಬೆಟ್ಟವನು ಕಟ್ಟಿಡಲು ಸಾಧ್ಯವೇ ?
ಕಡಲ ತುಂಬಿಡಬಹುದೆ ಗಡಿಗೆಯಲ್ಲಿ ?
ಆಕಾಶವನು ಹಿಡಿದು ಬಂಧಿಸಿಡಲಾದೀತೆ ?
ದೇವನಿಗೆ ದೇಗುಲವೆ ? – ಎಮ್ಮೆತಮ್ಮ
ಶಬ್ಧಾರ್ಥ
ದೇಗುಲ = ದೇವಾಲಯ
ತಾತ್ಪರ್ಯ
ಕಲ್ಲುಗುಂಡುಗಳಿಂದ ಕೂಡಿದ ಬೆಟ್ಟಗುಡ್ಡಗಳನ್ನು ಒಂದು
ಬಟ್ಟೆಯಲ್ಲಿ ಕಟ್ಟಿಡಲಿಕ್ಕೆ ಸಾಧ್ಯವಾಗುವುದಿಲ್ಲ. ಅಷ್ಟು ದೊಡ್ಡದಾದ ಬಟ್ಟೆ ಸಿಕ್ಕುವುದಿಲ್ಲ. ಒಂದು ವೇಳೆ ಸಿಕ್ಕರು
ಬೆಟ್ಟವನ್ನು ಕಿತ್ತಿಟ್ಟು ಸುತ್ತಿಡಲಾಗುವುದಿಲ್ಲ. ಹಾಗೆ ಸದಾ
ಕಾಲ ತುಂಬಿ ತುಳುಕಾಡುವ ಸಮುದ್ರದ ಸಮಗ್ರ ನೀರನ್ನು
ಒಂದು ಮಣ್ಣಿನ ಕುಂಭದಲ್ಲಿ ತುಂಬಿಸಿಡಲು ಕೂಡ ಯಾರಿಗು
ಸಾಧ್ಯವೇ ಇಲ್ಲ. ಇಡೀ ಬ್ರಹ್ಮಾಂಡವನ್ನೆ ಆವರಿಸಿದ ಆಕಾಶವನ್ನು ಹಿಡಿಯಲು ಆಗುವುದಿಲ್ಲ. ಏಕೆಂದರೆ ಆಕಾಶ ಕೈಗಳಿಗೆ ದೊರಕವುದಿಲ್ಲ. ಇಂಥ ನೆಲ, ಜಲ, ಗಗನ ಹಿಡಿದಿಡಲು ಸಾಧ್ಯವಿಲ್ಲವೆಂದ ಮೇಲೆ ಅವುಗಳಲ್ಲಿ ತುಂಬಿಕೊಂಡಿರುವ ಪರಮಾತ್ಮನನ್ನು ಹಿಡಿದು ಮಂದಿರ ಕಟ್ಟಿ ಕೂಡಿಸಲಾದೀತೆ?
ಅಂತ್ಯವೇ ಇಲ್ಲದ ಬ್ರಹ್ಮಾಂಡವನ್ನು ಸೃಷ್ಟಿಸಿ ಅದರಲ್ಲಿ
ಓತೋಪ್ರೋತವಾಗಿ ತುಂಬಿರುವ ನಿರಾಕಾರ ದೇವನನ್ನು
ಆಕಾರ ಮಾಡಿ ಗುಡಿಯಲ್ಲಿ ಕೂಡಿಸುವುದು ಸಮಂಜಸವಲ್ಲ.
ಅದಕ್ಕೆ ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ| ತಾಗಿಲ್ಲ ತಪ್ಪು
ತಡಿಯಿಲ್ಲ| ಲಿಂಗಕ್ಕೆ| ದೇಗುಲವೆ ಇಲ್ಲ ಸರ್ವಜ್ಞ ಎಂಬ ತ್ರಿಪದಿ
ವಚನ ಇದನ್ನೆ ಹೇಳುತ್ತದೆ. ಹುಟ್ಟು ಆಗಿಲ್ಲ ಸತ್ತು ಹೋಗಿಲ್ಲ
ಮೇಗೆ ಕೆಳಗಿರದೆ ಸರ್ವಾಂತರ್ಯಾಮಿ, ಎಲ್ಲು ತಾಗಿಕೊಂಡಿಲ್ಲ,
ಕಳಂಗರಹಿತವಾದ ಪರಿಶುದ್ಧ ದೇವನಿಗೆ ದೇವಾಲಯವಿಲ್ಲ.
ನಮ್ಮ ದೇಹವನ್ನು ದೇಗುಲ ಮಾಡಿಕೊಳ್ಳಬೇಕಷ್ಟೆ
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990