ಸಿಂದಗಿ; ಭಾರತದಲ್ಲಿ ಪ್ರತಿವರ್ಷ ನವೆಂಬರ್ ೧೪ ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಮಕ್ಕಳ ದಿನಾಚರಣೆ ಮಾಡುವ ಮೂಲಕ ಅವರ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ ೧೪ ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ ಎಂದು ಕುಮಾರಿ ಅಶ್ವಿನಿ ಗಡೇದ ಹೇಳಿದರು.
ಪಟ್ಟಣದ ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಮೊದಲಿಗೆ ನವೆಂಬರ್ ೨೦ ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿತ್ತು. ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಣೆ ಮಾಡಿತ್ತು. ಆದರೆ ೧೯೬೪ ರ ನಂತರ ಭಾರತದಲ್ಲಿ ಮಕ್ಕಳ ದಿನಾಚರಣೆ ನವೆಂಬರ್ ೧೪ ರಂದು ಆಚರಣೆ ಆಗುತ್ತಿದೆ.ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದು ಜವಾಹರಲಾಲ್ ನೆಹರು ರವರು, ಅವರು ೧೯೪೭ ರಿಂದ ೧೯೬೪ ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ನೆಹರು ರವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧೈಯವಾಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ಭಾರತದಾದ್ಯಂತ ಮಕ್ಕಳಿಗಾಗಿ ಮತ್ತು ಅನೇಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕು. ಜಿಯಾ ಶೇಖ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಸ್ಮಾ ಮಸಳಿ, ರೆಹಾನ್ ಶಹಾಪುರ, ಸಾಕ್ಷಿ ಹಡಪದ, ನವೀನ ನಾಗೂರ, ಗುರುರಾಜ, ಪ್ರೀಯಾಂಕ ವೇದಿಕೆ ಮೇಲಿದ್ದರು. ಶಿಕ್ಷಕಿ ನಿಷಾ ಕಲಾವಂತ ನಿರೂಪಿಸಿದರು. ಶಿಕ್ಷಕ ಸೋಮಶೇಖರ ಸ್ವಾಗತಿಸಿದರು. ಸಂದೀಪ ಚಾಂದಕವಟೆ ಪರಿಚಯಿಸಿದರು.