ಹುಟ್ಟಿರುವ ಹಸುಳೆಯಲಿ ಕೆಟ್ಟದೊಂದಿನಿತಿಲ್ಲ
ಬೆಳೆದಂತೆ ಕಲಿಯುವುದು ದುರ್ಗುಣಗಳ
ಮೊದಮೊದಲು ಹೊಸಧರ್ಮ ಹುಟ್ಟುವುದು ಹಿತಕಾಗಿ
ಆಮೇಲೆ ಹಳಸುವುದು – ಎಮ್ಮೆತಮ್ಮ
ಶಬ್ಧಾರ್ಥ
ಹಸುಳೆ = ಚಿಕ್ಕಮಗು . ಇನಿತು = ಕೊಂಚ. ಹಳಸು = ಹಾಳಾಗು
ತಾತ್ಪರ್ಯ
ಹುಟ್ಟಿದ ಚಿಕ್ಕಮಗುವಿನಲ್ಲಿ ಕೊಂಚ ಕೆಟ್ಟ ಗುಣಗಳಿರುವುದಿಲ್ಲ.
ಎಲ್ಲರನ್ನು ಪ್ರೀತಿಯಿಂದ ಕಾಣುತ್ತದೆ. ಯಾರನ್ನು ದ್ವೇಷ
ಮಾಡುವುದಿಲ್ಲ. ಮತ್ತು ಯಾರನ್ನು ದೂಷಣೆ ಮಾಡುವುದಿಲ್ಲ.
ಅದು ಬೆಳೆದಂತೆ ನಮ್ಮನ್ನು ನೋಡಿ ಹೊಟ್ಟೆಕಿಚ್ಚು ಗುಣವನ್ನು
ಕಲಿಯುತ್ತದೆ. ಬೇರೆ ಹುಡುಗರನ್ನು ಚೂಟುವುದು ಬಡಿವುದು
ಮಾಡುತ್ತದೆ. ಮತ್ತೆ ಬೈಯ್ಯುವುದನ್ನು ಕಲಿತುಕೊಳ್ಳುತ್ತದೆ.
ಒಂದೊಂದೆ ದುರ್ಗುಣಗಳು ಮಗುವಿನಲ್ಲಿ ಸೇರುತ್ತವೆ. ಹಾಗೆ
ಯಾವುದೇ ಧರ್ಮ ಮೊದಲು ಚೊಕ್ಕಟವಾಗಿರುತ್ತದೆ. ಧರ್ಮ
ಮಾನವನ ಹಿತಕ್ಕಾಗಿ ಮೊದಲು ಉದ್ಭವವಾಗುತ್ತದೆ.
ಹೊಸದಾಗಿ ಹುಟ್ಟಿದ ಧರ್ಮದಲ್ಲಿ ದೋಷಗಳು ಇರುವುದಿಲ್ಲ.
ಧರ್ಮ ಸಂಸ್ಥಾಪಕ ಹೊರಟುಹೋದ ಮೇಲೆ ಆತನ
ಅನುಯಾಯಿಗಳು ಧರ್ಮದಲ್ಲಿ ತಮಗೆ ಬೇಕಾದ ಹಾಗೆ
ಹೊಸತತ್ತ್ವಗಳನ್ನು ಸೇರಿಸಿಬಿಡುತ್ತಾರೆ. ಇದರಿಂದ ಅವರಲ್ಲಿ
ಭಿನ್ನಭಿಪ್ರಾಯಗಳ ತಲೆದೋರಿ ಧರ್ಮ ಎರಡಾಗಿ ಒಡೆದು
ಅನುಯಾಯಿಗಳಲ್ಲಿ ದೂಷಣೆ, ಘರ್ಷಣೆ ಶುರುವಾಗುತ್ತದೆ.
ಆಗ ಧರ್ಮದ ಮೂಲಸ್ವರೂಪ ಬದಲಾಗಿ ಇಲ್ಲದ ತತ್ತ್ವಗಳು
ಸೇರಿ ಗೊಂದಲಮಯ ವಾತಾವರಣ ಉಂಟಾಗುತ್ತದೆ. ಎಲ್ಲ
ಧರ್ಮಗಳು ಎರಡು ಮೂರು ಗುಂಪುಗಳಾಗಿ ಮತ್ತೊಂದು ಧರ್ಮವನ್ನು ದೂಷಿಸಲು ಪ್ರಾರಂಭಿಸುತ್ತವೆ. ಆಗ ಧರ್ಮದ
ಮೂಲ ಆಶಯ ಮರೆಯಾಗಿ ದ್ವೇಷಕ್ಕೆ ತಿರುಗುತ್ತದೆ.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990