ತಂದೆತಾಯಿಗಳಿಲ್ಲ ಬಂಧುಬಾಂಧವರಿಲ್ಲ
ಪರದೇಸಿ ತಾನೆಂದು ದುಃಖವಿಲ್ಲ
ಸಂತಸದಿ ಕೂಗುವುದು ಕೋಗಿಲೆ ವಸಂತದಲಿ
ಕಲಿಯಬೇಕದರಿಂದ – ಎಮ್ಮೆತಮ್ಮ
ಶಬ್ಧಾರ್ಥ
ಪರದೇಸಿ = ಅನಾಥ, ದಿಕ್ಕಿಲ್ಲದವನು
ತಾತ್ಪರ್ಯ
ಕೋಗಿಲೆಗಳು ಎಂದೂ ಗೂಡು ಕಟ್ಟುವುದಿಲ್ಲ. ಗಂಡು ಕೋಗಿಲೆ ಗೂಡಿನಲ್ಲಿ ಕೂತ ಕಾಗೆಯನ್ನು ಗೂಡಿನಿಂದ ಬೇರೆಡೆಗೆ ಕರೆದೊಯ್ಯುತ್ತದೆ.ಅದೆ ಸಮಯದಲ್ಲಿ ಹೆಣ್ಣು ಕೋಗಿಲೆ ಬಂದು ಕಾಗೆಯ ಗೂಡಿನಲ್ಲಿ ಮೊಟ್ಟೆ ಇಟ್ಟು ಹೋಗುತ್ತದೆ. ಕಾಗೆ ತನ್ನ ಮೊಟ್ಟೆಗಳ ಜೊತೆಗೆ ಕೋಗಿಲೆ ಮೊಟ್ಟೆ ತನ್ನದೆಂದು ಭಾವಿಸಿ ಕಾವು ಕೊಡುತ್ತದೆ. ತನ್ನ ಮರಿಗಳ ಜೊತೆಗೆ ಕೋಗಿಲೆ ಮರಿಗೆ ಕಾಗೆ ಗುಟುಗು ಕೊಟ್ಟು ಬೆಳೆಸುತ್ತದೆ. ಸ್ವಲ್ಪ ರೆಕ್ಕೆ ಬೆಳೆದಂತೆ ಅದರ ಧ್ವನಿ ಬೇರೆಯಾದ ಕೂಡಲೆ ಕಾಗೆ ಅದನ್ನು ಹೊರಗೆ ತಳ್ಳುತ್ತದೆ. ಆಗ ಆ ಕೋಗಿಲೆ ಮರಿ ಸ್ವತಂತ್ರವಾಗಿ ಹಾರಿ ಹೋಗುತ್ತದೆ. ಅದಕ್ಕೆ ಕೋಗಿಲೆಗೆ ಪರಪುಟ್ಟ ಎಂದು ಕರೆಯುತ್ತಾರೆ. ಇಂಥ ಕೋಗಿಲೆ ಒಬ್ಬೊಂಟಿಯಾಗಿ ಸಂತೋಷದಿಂದ ಕಾಲ ಕಳೆಯುತ್ತದೆ. ತನಗೆ ತಂದೆತಾಯಿ ಬಂಧುಬಳಗವಿಲ್ಲವೆಂದು ಚಿಂತಮಾಡದೆ ಚೈತ್ರಮಾಸ ಬಂದಾಗ ಮಧುರವಾಗಿ ಹಾಡುತ್ತದೆ. ಮಾನವರಾದ ನಾವೆಲ್ಲ ಅಂಥ ಕೋಗಿಲೆಯನ್ನು ನೋಡಿ ಕಲಿಯಬೇಕು. ನನಗಾರು ಇಲ್ಲ, ನಾನು ಅನಾಥ, ದಿಕ್ಕಿಲ್ಲದವನು ಎಂದು ಚಿಂತಿಸಬಾರದು. ಯಾರಿಗೆ ಯಾರಿಲ್ಲ ಎರವಿನ ಸಂಸಾರ ಎಂದು ದಾಸರು ಹಾಡಿದ್ದಾರೆ. ದಿಕ್ಕಿಲ್ಲದವರಿಗೆ ದೇವರೆ ಗತಿ ಎಂಬ ಗಾದೆ ಇದೆ. ಎಲ್ಲ ಚಿಂತೆಗಳನ್ನು ಮರೆತು ಸದಾ ಕಾಲ ಆನಂದದಿಂದ ಬದುಕುವುದನ್ನು ಕಲಿಯಬೇಕು
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990