ಬಿಡಿಸಿಸಿ ಚುನಾವಣೆ : ಮೂಡಲಗಿ-ಗೋಕಾಕ ತಾಲೂಕಾ ಪಿಕೆಪಿಎಸ್ ಮಂಡಳಿಗಳ ಸಭೆ

Must Read

ಸೆಪ್ಟೆಂಬರ್ ಅಂತ್ಯದೊಳಗೆ ಮೂಡಲಗಿ- ಗೋಕಾಕ ತಾಲ್ಲೂಕಿನ ಅಭ್ಯರ್ಥಿಗಳ ಆಯ್ಕೆ ಅಂತಿಮ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

 

ಗೋಕಾಕ- ನಾನು ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರು ಸೇರಿಕೊಂಡು ಇದೇ ತಿಂಗಳ ಅಂತ್ಯದೊಳಗೆ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

ಬುಧವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಭವನದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಸಂಘಗಳಿಗೆ ಇಷ್ಟವಾಗುವ ರೀತಿಯಲ್ಲಿ ಸಮರ್ಥ ವ್ಯಕ್ತಿಗಳನ್ನು ಬ್ಯಾಂಕಿನ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವುದಾಗಿ ತಿಳಿಸಿದರು.

ಬಿಡಿಸಿಸಿ ಬ್ಯಾಂಕಿಗೆ ನಡೆಯುವ ಚುನಾವಣೆಯಲ್ಲಿ ಎಲ್ಲ ಸ್ಥಾನಕ್ಕೂ ಚುನಾವಣೆಯನ್ನು ನಡೆಸದೇ ಹೊಂದಾಣಿಕೆಯಿರುವ ಕಡೆಗಳಲ್ಲಿ ಅವಿರೋಧವಾಗಿ ಆಯ್ಕೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಅವಶ್ಯವಿದ್ದಲ್ಲಿ ಮಾತ್ರ ಕೆಲವು ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲಾಗುತ್ತದೆ. ಒಟ್ಟು 16 ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಈಗಾಗಲೇ ನಮ್ಮ ಟೀಂ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂಬುದನ್ನು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದರು.

ಅಕ್ಟೋಬರ್ ತಿಂಗಳಲ್ಲಿ ಜರುಗುತ್ತಿರುವ ಈ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಚುನಾವಣೆಗೂ ಮುನ್ನವೇ ಮೂರು ತಿಂಗಳಿನಿಂದ ಜಿಲ್ಲೆಯ ಎಲ್ಲ ತಾಲ್ಲೂಕು ಕ್ಷೇತ್ರಗಳಿಗೆ ಭೇಟಿ ನೀಡಿ ಸಹಕಾರ ಸಂಘಗಳ ಸದಸ್ಯರುಗಳ ಅಹವಾಲುಗಳನ್ನು ಸ್ವೀಕರಿಸಿದ್ದೇನೆ. ಬಿಡಿಸಿಸಿ ಬ್ಯಾಂಕಿನಿಂದ ರೈತರಿಗೆ ಮತ್ತು ಸಹಕಾರ ಸಂಘಗಳಿಗೆ ಹೆಚ್ಚಿನ ನೆರವು ಸಿಗಬೇಕೆಂಬುದು ನಮ್ಮ ಆಶಯವಾಗಿದೆ. ಈ ದಿಸೆಯಲ್ಲಿ ಜಿಲ್ಲೆಯಾದ್ಯಂತ ಸಹಕಾರ ಸಂಘಗಳ ಬಗ್ಗೆ ತಿಳುವಳಿಕೆ ಹೊಂದಿರುವ, ರೈತರ ಕಷ್ಟಗಳಿಗೆ ಸಮರ್ಪಕ ರೀತಿಯಲ್ಲಿ ಸ್ಪಂದಿಸುವ ಕ್ರಿಯಾಶೀಲ ವ್ಯಕ್ತಿಗಳನ್ನು ಗುರುತಿಸುತ್ತಿದ್ದೇವೆ. ಬಹುತೇಕ ಕಡೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯು ಮುಗಿದಂತಾಗಿದೆ. ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಜಿಲ್ಲೆಯ ಎಲ್ಲ ವಿವಿಧ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು
ಅಭ್ಯರ್ಥಿಗಳನ್ನು ಅಂತಿಮ ಮಾಡುವುದಾಗಿ ಅವರು ಹೇಳಿದರು.

ನಮ್ಮ ಟೀಂ ನಿಂದ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿಗಳು ಆಯ್ಕೆಗೊಂಡರೆ ನಮಗೆ ಲಾಭವಾಗುತ್ತದೆ. ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ- ಉಪಾಧ್ಯಕ್ಷರು ನಮ್ಮವರಾದರೆ ನಮ್ಮ ಸಂಘ- ಸಂಸ್ಥೆಗಳು ಉಳಿಯುತ್ತವೆ. ಇದನ್ನು ಮನಗಂಡು ಜಿಲ್ಲೆಯಾದ್ಯಂತ ಸಂಚರಿಸಿ ಸಹಕಾರಿಗಳ ಬಳಿಗೆ ಹೋಗಿ ಮತ ಯಾಚಿಸುತ್ತಿದ್ದೇನೆ. ಇದರಲ್ಲಿ ನಮ್ಮದು ಯಾವ ಸ್ವಾರ್ಥವೂ ಇಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ಬಿಡಿಸಿಸಿ ಬ್ಯಾಂಕು ರೈತರ ಮನೆ ಬಾಗಿಲಿಗೆ ಹೋಗಬೇಕು. ರೈತರ ಕಷ್ಟಗಳನ್ನು ಅರಿಯಬೇಕು. ರೈತರ ಆರ್ಥಿಕ ಅಭಿವೃದ್ಧಿಗೆ ಸೌಲಭ್ಯಗಳು ದೊರಕಬೇಕು. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸಿಗಬೇಕೆಂಬ ಸಂಕಲ್ಪದಿಂದ ರೈತರ ಸುಖ, ನೆಮ್ಮದಿಗಾಗಿ ಬ್ಯಾಂಕಿನ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕೆಎಲ್ಇ ಚೇರಮನ್ ಡಾ. ಪ್ರಭಾಕರ ಕೋರೆ, ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರನ್ನು ಒಟ್ಟಾಗಿ ಸೇರಿಸಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಸಂಪೂರ್ಣ ಬಹುಮತದಿಂದ ಬ್ಯಾಂಕಿನ ಆಡಳಿತವು ನಮ್ಮ ಕೈಗೆ ಸಿಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿಯವರು ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ,ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿ.ಪಂ. ಮಾಜಿ ಸದಸ್ಯರಾದ ತುಕಾರಾಮ ಕಾಗಲ್, ಮಡ್ಡೆಪ್ಪ ತೋಳಿನವರ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ವಿಠ್ಠಲ ಪಾಟೀಲ, ಪ್ರಭಾ ಶುಗರ್ಸ್ ನಿರ್ಧೇಶಕ ಶಿದ್ಲಿಂಗ ಕಂಬಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group