ಬೆಂಗಳೂರು – ಒಬ್ಬ ವ್ಯಕ್ತಿ ತೀರಿಕೊಂಡಾಗ ವಿಶ್ವಸಂಸ್ಥೆಯು ತನ್ನೆಲ್ಲ ೫೫ ಸದಸ್ಯ ರಾಷ್ಟ್ರಗಳ ಧ್ವಜಗಳನ್ನು ಮತ್ತು ತನ್ನ ಧ್ವಜವನ್ನು ಅರ್ಧಕ್ಕೆ ಇಳಿಸಿ ಸಂತಾಪ ಸೂಚಿಸಿದ್ದು ಮಹಾತ್ಮ ಗಾಂಧೀಜಿಗೆ ಮಾತ್ರ. ಜಗತ್ತಿನ ಯಾವ ವ್ಯಕ್ತಿಗೂ ಈ ರೀತಿಯ ಗೌರವ ಇಲ್ಲಿಯವರೆಗೂ ಸಿಕ್ಕಿಲ್ಲ. ಬಹುಶಃ ಸಿಗುವುದೂ ಇಲ್ಲ. ಏಕೆಂದರೆ ಮಹಾತ್ಮನ ರೀತಿ ಶಾಂತಿ, ಅಹಿಂಸೆ, ಸತ್ಯವನ್ನು ಅನುಷ್ಠಾನಗೈದ ಇನ್ನೊಬ್ಬ ವ್ಯಕ್ತಿ ಜಗತ್ತಿನಲ್ಲಿ ಇಲ್ಲ.
ಗಾಂಧಿ ಎಂದರೆ ಎಲ್ಲರನ್ನೂ ಒಳಗೊಳ್ಳುವುದು. ಗಾಂಧಿ ಎಂದರೆ ಪ್ರತ್ಯೇಕತೆಯನ್ನು ತೊಡೆಯುವುದು ಎಂದು ಸರ್ವೋದಯ ಮಂಡಲದ ಕಾರ್ಯದರ್ಶಿ – ಹಿರಿಯ ಚಿಂತಕ ಡಾ.ಹೆಚ್.ಎಸ್.ಸುರೇಶ್ ಹೇಳಿದರು.
ನಗರದ ಗಾಂಧಿ ಭವನ ಸನಿಹದ ವಲ್ಲಭ ನಿಕೇತನದ ಆವರಣದಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಅಂಗವಾಗಿ ಕರ್ನಾಟಕ ಸರ್ವೋದಯ ಮಂಡಲ ವತಿಯಿಂದ ನಡೆದ ಗಾಂಧಿ ಕುರಿತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಗಾಂಧಿ ಎಂದರೆ ಒಂದು ಸಾಗರ. ಸರ್ವೋದಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಕನಸು ಕಂಡವರು ಮಹಾತ್ಮಾ ಗಾಂಧೀಜಿ. ಗಾಂಧೀ ಅವರು ಪ್ರತಿಪಾದಿಸಿದ ಪ್ರಾಮಾಣಿಕತೆಯಿಂದ ಕೂಡಿದ End and Means ಗುರಿ ಮತ್ತು ದಾರಿ ( ಮಾರ್ಗ ) ಅನುಸರಣೆಯ ಮೂಲಕ ಸರ್ವೋದಯವನ್ನು ( ಸರ್ವರ ಕಲ್ಯಾಣ / welfare of all )ಸಾಧಿಸಲು ಯಾವುದೇ ರಾಜಕೀಯ / ಧಾರ್ಮಿಕ ಸಿದ್ಧಾಂತದ ಅವಶ್ಯಕತೆ ಇಲ್ಲ. ಬದಲಾಗಿ ವೈಯಕ್ತಿಕವಾಗಿ ತಾನು ಒಳ್ಳೆಯವನಾಗಬೇಕೆಂಬ ಮತ್ತು ಎಲ್ಲರಿಗೂ ಒಳ್ಳೆಯದಾಗಬೇಕೆಂಬ ಸದಿಚ್ಚೆಯನ್ನು ಹೊಂದಿದ್ದರೆ ಸಾಕು ಎಂದರು.
ಅಮರ ಬಾಪು ಚಿಂತನ ಪತ್ರಿಕೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ಯುವ ಸ್ಪರ್ಧಿಗಳು ಭಾಗವಹಿಸಿ ಗಾಂಧಿ ಕುರಿತು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗಹಿಸಿದ್ದು ವಿಶೇಷವಾಗಿತ್ತು.
ಪತ್ರಿಕೆಯ ಸಂಪಾದಕೀಯ ವಿಭಾಗದ ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಸರ್ವೋದಯ ಮಂಡಲಿ ಕೋಶಾಧಿಕಾರಿ ಡಾ.ಯ.ಚಿ.ದೊಡ್ಡಯ್ಯ, ಖಾದಿ ಗ್ರಾಮೋದ್ಯೋಗ ಮಂಡಲಿಯ ವಿ.ಟಿ.ಹುಡೇದ್, ವಲ್ಲಭ ನಿಕೇತನದ ಟ್ರಸ್ಟೀ ಸಿದ್ದಾರ್ಥ ,ಡಾ.ಸಂಗಮೇಶ್ ಮೊದಲಾದವರು ಭಾಗವಹಿಸಿದ್ದರು.