ಕರ್ನಾಟಕ ರತ್ನನ ಸ್ಮರಣೆ ; ಪುನೀತ್ ಅಮರ

Must Read

ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ಡಾ. ರಾಜಕುಮಾರ್ ಹಾಗೂ ಸಂಗಡಿಗರ ಆಗಮನವಾಗಿತ್ತು. ವಿಜಯಪುರ ಹೋಗುವುದು ಅವರ ಮುಂದಿನ ಕಾರ್ಯಕ್ರಮ. ಅವರೊಂದಿಗೆ ಪಾರ್ವತಮ್ಮ ಪುನೀತ್ ಇದ್ದರು. ನವಿಲುತೀರ್ಥದ ವಸತಿಗೃಹದ ಉಸ್ತುವಾರಿ ನನ್ನ ತಂದೆಗೆ ಇದ್ದ ಕಾರಣ ಪುನೀತ ನೋಡುವ, ಅಣ್ಣಾವ್ರ ಕಾಣುವ ಸದವಕಾಶ ನನ್ನ ತಂದೆ ನನಗೆ ಅನುಕೂಲ ಮಾಡಿದರು.

ಆ ದಿನ ಫುನೀತ ಜೊತೆ ಮಾತಾಡಿದೆ. ನಂತರ ವಸಂತ ಗೀತಾ ಚಲನಚಿತ್ರ ನೋಡಿದ್ರೆ ಪುನೀತ್ ನಟನೆ ಬಹಳ ಇಷ್ಟ ವಾಯಿತು. ತಂದೆಗೆ ತಕ್ಕ ಮಗ. ಡಾ. ಪುನೀತ ರಾಜ್‍ಕುಮಾರ (೧೭ ಮಾರ್ಚ್ ೧೯೭೫ – ೨೯ ಅಕ್ಟೋಬರ್ ೨೦೨೧)ರವರು ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ. ಇವರು ೨೯ ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ವಸಂತ ಗೀತ (೧೯೮೦), ಭಾಗ್ಯವಂತ (೧೯೮೧), ಚಲಿಸುವ ಮೋಡಗಳು (೧೯೮೨), ಎರಡು ನಕ್ಷತ್ರಗಳು (೧೯೮೩), ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು (೧೯೮೫) ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದರು.

ಅವರ ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಅವರ ಅಭಿನಯದ ಎಲ್ಲಾ ಚಲನಚಿತ್ರಗಳನ್ನು ನೋಡಿರುವೆ.

ಪುನೀತ್ ಅವರು ೨೦೦೨ರಲ್ಲಿ ಅಪ್ಪು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಪಯಣ ಶುರುಮಾಡಿದರು. ಅವರು ನಟಿಸಿದ ಅಪ್ಪು(೨೦೦೨), ಅಭಿ(೨೦೦೩), ವೀರಕನ್ನಡಿಗ(೨೦೦೪), ಮೌರ್ಯ(೨೦೦೪), ಆಕಾಶ್ (೨೦೦೫), ಅಜಯ್ (೨೦೦೬), ಅರಸು (೨೦೦೭), ಮಿಲನ (೨೦೦೭), ವಂಶಿ(೨೦೦೮), ರಾಮ್ (೨೦೦೯), ಪೃಥ್ವಿ(೨೦೧೦), ಜಾಕಿ(೨೦೧೦), ಹುಡುಗರು (೨೦೧೧), ಅಣ್ಣಾ ಬಾಂಡ್ (೨೦೧೨), ಪವರ್ (೨೦೧೪), ರಣವಿಕ್ರಮ (೨೦೧೫), ದೊಡ್ಮನೆ ಹುಡುಗ (೨೦೧೬), ರಾಜಕುಮಾರ (೨೦೧೭), ಯುವರತ್ನ(೨೦೨೧), ಜೇಮ್ಸ್ (೨೦೨೨) ಸೇರಿದಂತೆ ಇತರ ಹಲವು ಚಲನಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ.

ಅವರು ಕನ್ನಡ ಚಿತ್ರರಂಗದ ಪ್ರಮುಖ ಹಾಗೂ ಅತ್ಯಂತ ಯಶಸ್ವಿ ನಾಯಕನಟರಾಗಿ, ಅವರು ಪ್ರಸಿದ್ಧ ಟಿವಿ ಆಟದ ಕಾರ್ಯಕ್ರಮ ಹೂ ವಾಂಟ್ಸ್ ಟು ಬಿ ಮಿಲಿಯನೇರ್ನ ಕನ್ನಡ ಆವೃತ್ತಿ ಕನ್ನಡದ ಕೋಟ್ಯಧಿಪತಿಯ ನಿರೂಪಣೆ ಮೂಲಕ ಹೆಸರುವಾಸಿಯಾದರು.

ಕರ್ನಾಟಕ ರಾಜ್ಯಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪುನೀತ್ ಆರು ವರ್ಷ ವಯಸ್ಸಿನವನಾಗಿದ್ದಾಗ ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಅವರು ಹತ್ತು ವರ್ಷ ವಯಸ್ಸಿನವನಾಗುವವರೆಗೂ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ೧ ಡಿಸೆಂಬರ್ ೧೯೯೯ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರು. ನಿರ್ದೇಶಕ ವಿ. ಸೋಮಶೇಖರ್ ಅವರು ಪುನೀತ್ ಅವರನ್ನು ಆರು ತಿಂಗಳ ಮಗುವಾಗಿದ್ದಾಗ ಪ್ರೇಮದ ಕಾಣಿಕೆ (೧೯೭೬) ಮತ್ತು ಆರತಿ ಚಿತ್ರದಲ್ಲಿ ತೆರೆಯ ಮೇಲೆ ತೋರಿಸಿದರು. ಇದರ ನಂತರ ಪುನೀತ್ ಒಂದು ವರ್ಷದವನಾಗಿದ್ದಾಗ ವಿಜಯ್ ಅವರ ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿಯನ್ನು ಆಧರಿಸಿದ ಅದೇ ಹೆಸರಿನ ಸನಾದಿ ಅಪ್ಪಣ್ಣ (೧೯೭೭) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿಗೆ ತಕ್ಕ ಮಗ (೧೯೭೮) ಮತ್ತೆ ವಿ. ಸೋಮಶೇಖರ್ ನಿರ್ದೇಶಿಸಿದ ಚಿತ್ರ ಮತ್ತು ಅವರ ತಂದೆ ನಟಿಸಿದ ಚಿತ್ರ. ಎರಡು ವರ್ಷಗಳ ನಂತರ ನಿರ್ದೇಶಕ ದೊರೆ-ಭಗವಾನ್ ಪುನೀತ್ ಅವರನ್ನು ವಸಂತ ಗೀತ ( ೧೯೮೦) ನಲ್ಲಿ ಶ್ಯಾಮ್ ಪಾತ್ರದಲ್ಲಿ ಹಾಕಿದರು ನಂತರ ಅವರ ಅಭಿನಯದ ಚಲನಚಿತ್ರ ಗಳ ಯಾತ್ರೆ ಅವಿರತವಾಗಿ ಸಾಗಿತು.
ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ೨೯ ಅಕ್ಟೋಬರ್ ೨೦೨೧ ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ಚನಿಧನರಾದರು.ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಅವರು ಕೂಡ ನೇತ್ರದಾನ ಮಾಡಿ ನಾಲ್ವರಿಗೆ ಬೆಳಕಾಗಿದ್ದಾರೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಟ್ಟು ೩೧ ಅಕ್ಟೋಬರ್ ಚಭಾನುವಾರದಂದು ಕಂಠೀರವ ಸ್ಟುಡಿಯೋದ ಡಾ.ರಾಜ್ ಸ್ಮಾರಕದ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಕುಟುಂಬದವರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕಂಠೀರವ ಸ್ಟುಡಿಯೋ ಹೊರಭಾಗದ ರಸ್ತೆಗಳಲ್ಲಿ 25 ರಿಂದ 30 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕಣ್ಣೀರಿಡುತ್ತಾ ನೆಚ್ಚಿನ ನಟನಿಗೆ ಕಂಬನಿಯ ವಿದಾಯ ಹೇಳಿದರು.
ಸಮಾಜಮುಖಿ ಕಾರ್ಯಗಳ ಬಗ್ಗೆ ಪುನೀತ್‌ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ.ಕೋವಿಡ್‌ ಸಂದರ್ಭದಲ್ಲಿ ಸಿಎಂ ನಿಧಿಗೆ 50 ಲಕ್ಷ ರೂ. ನೀಡಿದ್ದ ಅಪ್ಪು, ಗೌರವಧನ ಪಡೆಯದೇ 2012ರಲ್ಲಿ ಕೆಎಂಎಫ್‌ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದು ವಿಶೇಷ. ಈ ಹಿಂದೆ ಡಾ. ರಾಜಕುಮಾರ್‌ ಸಹ ಗೌರವಧನ ಪಡೆಯದೇ 13 ವರ್ಷ ಕೆಎಂಎಫ್‌ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದನ್ನು ಸ್ಮರಿಸಬಹುದು.
ಜೇಮ್ಸ್‌’ ಚಿತ್ರೀಕರಣ ವೇಳೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಕೊಡುಗೆಯಾಗಿ 1 ಲಕ್ಷ ರೂ. ನೀಡಿದ್ದರು. ಹಳ್ಳಿಯಿಂದ ನಗರಕ್ಕೆ ಬಂದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ಒಂದೇ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶ್ರೀವತ್ಸ ವಾಜಪೇಯಿ ಆರಂಭಿಸಿದ್ದ ‘ಫೀಡ್‌ ಫಾರ್‌ ಫಾರ್ಮರ್‌’ ಯೋಜನೆ ಬೆಂಬಲಿಸಿ ರಾಯಭಾರಿಗಳಾಗಿದ್ದರು. 2019ರಲ್ಲಿಉತ್ತರ ಕರ್ನಾಟಕದ ಪ್ರವಾಹ ಸಂದರ್ಭದಲ್ಲಿ 5 ಲಕ್ಷ ರೂ. ದೇಣಿಗೆ ನೀಡಿದ್ದರು.ಎಂಬುದನ್ನು ಸ್ಮರಿಸಬಹುದು.
ಅವರ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್‌ ಮಾತನಾಡಿದ ಮಾತುಗಳು ನೆನಪಿಸುವೆ.‘ನಮ್ಮ ತಂದೆ ಹೋದಾಗ ಅನಾಥರು ಅನಿಸಿರಲಿಲ್ಲ. ತಾಯಿ ಹೋದಾಗ ತಬ್ಬಲಿ ಅನಿಸಿರಲಿಲ್ಲ. ಆದರೆ, ಪುನೀತ್‌ ರಾಜಕುಮಾರ್‌ನನ್ನು ಕಳೆದುಕೊಂಡ ನಂತರ ಅನಾಥ, ತಬ್ಬಲಿ ಅನಿಸುತ್ತಿದೆ’ ಎಂದರು.
ಇಂತಹ ಅನರ್ಘ್ಯ ರತ್ನ ಕುರಿತು ಬರೆಯಲು ಪದಗಳು ಬರುತ್ತಿಲ್ಲ. ಗೆಳೆಯ ಮಹಾಂತೇಶ ಶಿರಹಟ್ಟಿ ಪೋನ್ ಮಾಡಿ ಪುನೀತ್ ಸ್ಮರಣೆ ಕುರಿತು ಬರೆಯುವಂತೆ ಹೇಳಿದಾಗ ನನ್ನ ನೆನಪಿನ ಬುತ್ತಿ ಸ್ವಲ್ಪ ಬಿಚ್ಚಿ ನಾಲ್ಕು ಸಾಲುಗಳಲ್ಲಿ ಪುನೀತ್ ಗೌರವ ರೂಪದಲ್ಲಿ ಬರೆದಿರುವೆ.
ಪುನೀತ್​ ರಾಜ್​ಕುಮಾರ್ ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಅವರನ್ನು ಕಳೆದುಕೊಂಡಿದ್ದೇವೆ ಅನ್ನುವುದಕ್ಕಿಂತ ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನಾನಾ ರೀತಿಯಲ್ಲಿ ನೆನೆಯಲಾಗುತ್ತಿದೆ.ಎಂಬುದು ಮಹತ್ವದ್ದು.


ಡಾ. ವೈ. ಬಿ. ಕಡಕೋಳ
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ 591117
ಸವದತ್ತಿ ತಾಲೂಕು. ಬೆಳಗಾವಿ ಜಿಲ್ಲೆ

LEAVE A REPLY

Please enter your comment!
Please enter your name here

Latest News

ಮನಕ್ಕೆ ಮುದ ನೀಡಿದ ಕಾಮನಬಿಲ್ಲು

ಮೂಡಲಗಿ : ಕಾಮನಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ !ಬಣ್ಣಗಳೇಳನು ತೋರಣ ಮಾಡಿದೆ ಕಂದನ ಕಣ್ಣಿಗೆ ಚೆಂದವನೂಡಿದೆ !ಎಂಬ ಕುವೆಂಪುರವರ ಕವಿತೆಯನ್ನು ನೆನಪಿಸುವಂತೆ ಮೂಡಲಗಿಯಲ್ಲಿ ಮೂಡಣದ ಆಗಸದಲ್ಲಿ ಸುಂದರವಾದ...

More Articles Like This

error: Content is protected !!
Join WhatsApp Group