ಸಿಂದಗಿ: ಸಂದೀಪ ಚೌರ ಅವರು ಪುರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಿದಂತಾಗಿದೆ ಆದರೆ ಜೆಡಿಎಸ್ ಬಿ-ಪಾರಂ ಮೇಲೆ ಚುನಾಯಿತರಾದವರನ್ನು ಪುರಸಭೆ ಅಧ್ಯಕ್ಷರನ್ನಾಗಿ ಮಾಡಿ ಸಹೋದರನ ಮೇಲಿರುವ ವ್ಯಾಮೋಹವನ್ನು ಶಾಸಕರು ಸಾಬೀತು ಪಡಿಸಿದ್ದಾರೆ ತಾಲೂಕಿನಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಶಾಸಕ ಅಶೋಕ ಮನಗೂಳಿ ಕಡೆಗಣಿಸಿ ವಲಸಿಗರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಾಂತವೀರ ಬಿರಾದಾರ ಕಿರಿಕಾಡಿದರು.
ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬರೀ ೬ ತಿಂಗಳಲ್ಲಿ ನಗರ ಜನತೆಗೆ ನ್ಯಾಯ ಒದಗಿಸಿದ್ದೇನೆ ಎನ್ನುವ ಖುಷಿ ನನಗಿದೆ. ಸಿಂದಗಿ ನಗರವನ್ನು ಸೌಂದರ್ಯಿಕರಣ ಮಾಡಬೇಕು ಎನ್ನುವ ಮಹದಾಸೆಯನ್ನು ಇಟ್ಟುಕೊಂಡ ನನಗೆ ಇದರಿಂದ ಅಸಮಾಧಾನವಾಗಿದೆ. ನನ್ನ ಅವಧಿಯಲ್ಲಿ ಪುರಸಭೆಗೆ ರೂ.೨ಕೋಟಿ ವಿಶೇಷ ಅನುದಾನ ಬಂದಿತ್ತು. ಈ ಅನುದಾನವನ್ನು ಪುರಸಭೆ ಮುಂಭಾಗದಲ್ಲಿರುವ ಬ್ರಿಡ್ಜ್ ಮತ್ತು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪೇವರ್ಸ್ ಹಾಕುವುದಾಗಿ ಶಾಸಕರ ಜೊತೆಗೆ ಚರ್ಚೆ ಮಾಡಿದ್ದೇ ಆದರೆ ಈ ಅನುದಾನದಲ್ಲಿ ರೂ.೧ ಕೋಟಿ ನೂತನ ತಹಶೀಲ್ದಾರ್ ಕಛೇರಿಯ ಉಪಯೋಗಕ್ಕೆ ಶಾಸಕರು ಬಳಸಿಕೊಂಡರು. ಇದರಿಂದ ಅಭಿವೃದ್ಧಿ ಕುಂಠಿತವಾಯಿತು. ಒಟ್ಟಾರೆ ಶಾಸಕರಿಂದ ನಗರವನ್ನು ಅಭಿವೃದ್ಧಿ ಮಾಡುವಲ್ಲಿ ಯಾವುದೇ ರೀತಿಯ ಸಹಕಾರ ದೊರಕಿಲ್ಲ. ಪುರಸಭೆಯ ಆಡಳಿತ ಯಂತ್ರದ ಹಲವು ಉಪಕರಣಗಳು ಹಾಗೂ ಲಾಗಿನ್‌ಗಳು ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿರುವುದನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಯೋಜನಾಧಿಕಾರಿ ಹಾಗೂ ಪೊಲೀಸ್ ಇಲಾಖೆಯವರ ಗಮನಕ್ಕೆ ತಂದಾಗ್ಯೂ ಯಾವುದೇ ಕ್ರಮಕೈಗೊಳ್ಳದಿರುವುದರ ಅಧಿಕಾರಿಗಳನ್ನು ಕೈಗೊಂಬೆಯಂತೆ ಆಟವಾಡುವ ಹಿಂದೆ ಶಾಸಕರ ಹಾಗೂ ಅವರ ಸಹೋದರರ ನೇರ ಹಸ್ತಕ್ಷೇಪವಿದೆ ಎಂದು ದೂರಿದರು.
ಕೇವಲ ಒಂದು ಉತಾರಿ ತೆಗೆದುಕೊಂಡಿದ್ದೇನೆ ಎನ್ನುವ ನೆಪ ಮಾಡಿ ಅದರ ತನಿಖೆಗೆ ನಾಲ್ಕು ಜನ ಅಧಿಕಾರಿಗಳ ಸಮಿತಿ ರಚಿಸುತ್ತಾರೆ. ಆದರೆ ಪುರಸಭೆಯಲ್ಲಿ ಆಗುತ್ತಿರುವ ಅವ್ಯವಹಾರದ ಬಗ್ಗೆ ಜಾಣ ಕುರುಡುತನ ವಹಿಸುತ್ತಿರುವುದರ ಹಿಂದಿನ ಮರ್ಮ ಸಾರ್ವಜನಿಕರಿಗೆ ತಿಳಿದಿದೆ. ಶಾಸಕರ ಎರಡು ಅವಧಿಯ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಗೆಲುವಿಗಾಗಿ ಶ್ರಮಿಸಿದ್ದೇನೆ. ಆದರೆ ನನ್ನ ಮೇಲೆ ಅವರೆಲ್ಲರಿಗೂ ಇಷ್ಟೊಂದು ದ್ವೇಷ, ಅಸಹಕಾರ ಭಾವನೆ ಏಕಿದೆಯೋ ದೇವರೇ ಬಲ್ಲ. ಅವಶ್ಯಕತೆ ಇದ್ದಾಗ ಬಳಸಿಕೊಂಡು ಕೆಲಸ ಮುಗಿದ ಮೇಲೆ ತಿಂದ ಬಾಳೆಯ ಎಲೆ ಎಸೆಯುವುದು ಅವರಲ್ಲಿ ಮನೆಮಾಡಿದೆ. ಪುರಸಭೆ ಅಧ್ಯಕ್ಷರ ಅವಧಿ ಮುಗಿದ ಮೇಲೆ ರಾಜಕೀಯದಿಂದ ದೂರವಿರಬೇಕೆಂದಿದ್ದೆ. ಆದರೆ ಈ ಎಲ್ಲ ವಿಧ್ಯಮಾನಗಳಿಂದ ಮುಂದೆ ಬರುವ ಚುನಾವಣೆಗಳಲ್ಲಿ ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿಕೊಂಡು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲಿದ್ದೇನೆ. ಯಶಸ್ಸು-ಅಪಯಶಸ್ಸು ಮುಂದೆ ನೋಡಿದರಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಯೋಗಪ್ಪಗೌಡ ಪಾಟೀಲ ಮಾತನಾಡಿ, ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಜನತಾ ಪರಿವಾರದಿಂದ ಬಂದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡುತ್ತಿರುವುದನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ವಿರೋಧಿಸಬೇಕಾಗಿತ್ತು. ಪುರಸಭೆಯಲ್ಲಿ ಇಷ್ಟೊಂದು ಅನ್ಯಾಯ ನಡೆಯುತ್ತಿದ್ದರೂ ಶಾಸಕರ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಬೇಕಾಗಿತ್ತು. ಇಲ್ಲಿ ಸಾಧ್ಯವಾಗದಿದ್ದರೇ ಜಿಲ್ಲಾ ನಾಯಕರ ಗಮನಕ್ಕೆ ತಂದು ಇಲ್ಲಿನ ವಿಧ್ಯಮಾನವನ್ನು ಹತೋಟಿಗೆ ತರಲು ಪ್ರಯತ್ನಿಸಬೇಕಿತ್ತು. ಆದರೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶಾಸಕರ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದರು.
ಉಪಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಶೋಕ ಮನಗೂಳಿ ಅವರಿಗೆ ಟಿಕೆಟ್ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಇದೇ ಶಾಂತವೀರ ಬಿರಾದಾರ. ಟಿಕೆಟ್ ಪಡೆದು ಅಧಿಕಾರ ಹಿಡಿದ ಮೇಲೆ ಕನಿಷ್ಠ ಪಕ್ಷ ಸೌಜನ್ಯಕ್ಕಾರದೂ ಶಾಂತವೀರ ಬಿರಾದಾರ ಅವರ ಬೆಂಬಲಕ್ಕೆ ಶಾಸಕರು ನಿಲ್ಲದೇ ಇರುವುದು ವಿಪರ್ಯಾಸ.
ಕಾಂಗ್ರೆಸ್ ಮುಖಂಡ: ಯೋಗಪ್ಪಗೌಡ ಪಾಟೀಲ