ಹೊಸದಿಲ್ಲಿ: ಪ್ರತಿದಿನ ನೂರಾರು ಕಿಲೋಮೀಟರ್ ಗಟ್ಟಲೆ ವಾಹನ ಚಲಾಯಿಸಿ ಹೈರಾಣಾಗುವ ಟ್ರಕ್ ಹಾಗೂ ಟ್ಯಾಕ್ಸಿ ಚಾಲಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.
ಇತ್ತೀಚೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ ನಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರದ ಹಲವಾರು ಯೋಜನೆಗಳ ಕುರಿತು ವಿವರಣೆ ನೀಡಿದರು.
ಇದೇ ಸಂದರ್ಭದಲ್ಲಿ ಟ್ರಕ್ ಮತ್ತು ಟ್ಯಾಕ್ಸಿ ಚಾಲಕರ ಆರೋಗ್ಯ, ಅನುಕೂಲತೆ ಕುರಿತು ಮಾತನಾಡಿದ ಮೋದಿಯವರು, ಭಾರತದ ಹೈ ವೇ ಗಳಲ್ಲಿ ನೂರಾರು ಕಿಲೋಮೀಟರ್ ವಾಹನ ಚಲಾಯಿಸುವ ಚಾಲಕರು ಶಾರೀರಿಕವಾಗಿ ದಣಿಯುತ್ತಾರೆ. ಇವರ ಪರಿವಾರಕ್ಕೆ ಇವರದೇ ಚಿಂತೆಯಾಗಿರುತ್ತದೆ. ಕೆಲವೊಮ್ಮೆ ದಣಿವಿನಿಂದಾಗಿ ಚಾಲಕರು ರಸ್ತೆ ಅಪಘಾತಗಳಿಗೂ ಬಲಿಯಾಗುತ್ತಾರೆ ಆದ್ದರಿಂದ ಟ್ರಕ್ ಚಾಲಕರಿಗಾಗಿ ಹೆದ್ದಾರಿಗಳಲ್ಲಿ ಚಾಲಕರ ಆರಾಮ ತಾಣ ಗಳ ನಿರ್ಮಾಣ ಮಾಡಲಾಗುವುದು ಎಂದರು.
ಈ ಭವನಗಳಲ್ಲಿ ಚಾಲಕರಿಗಾಗಿ ಭೋಜನ, ಮಲಗುವ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಿಕೊಡಲಾಗುವುದು. ಆರಂಭದಲ್ಲಿ ಇಂಥ ಒಂದು ಸಾವಿರ ಭವನಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಿಸಲಾಗುವುದು ಈ ಭವನಗಳಲ್ಲಿ ಚಾಲಕರು ವಿಶ್ರಾಂತಿ ಪಡೆಯುವುದರಿಂದ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ ಎಂದು ಮೋದಿ ಹೇಳಿದರು.