ಶರಣರ ಶಿವಯೋಗ ಬಸವ ನಿಜಯೋಗ
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕ ಅರಿವು ಸಂಘಟನೆಗಳಿಂದ ಪ್ರೊ. ಶಾರದಾ ಪಾಟೀಲ್ ಮೇಟಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – ೩೦೧
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಡಾ. ಶಶಿಕಾಂತ ಪಟ್ಟಣ ಅವರ ನೇತೃತ್ವದಲ್ಲಿ ನಮ್ಮ ವೇದಿಕೆ ಯಿಂದ ಮೂರನೆಯ ವರ್ಷದ ಶರಣ ಮಾಸದ ಉಪನ್ಯಾಸಗಳು ಜುಲೈ 24 ರಿಂದ ಆಗಸ್ಟ್ 26 ರವರೆಗೆ ಒಂದು ತಿಂಗಳ ಕಾಲ ಸತತವಾಗಿ ನಡೆಯುತ್ತಿವೆ.
ಇಂದು ಶರಣ ಮಾಸದ ಮೊದಲ ದಿನ ಪರಮಪೂಜ್ಯ ಶ್ರೀ. ಮ. ನಿ. ಪ್ರ. ಶಿವರುದ್ರಸ್ವಾಮಿಗಳು – ಬೇಲಿಮಠ -ಬೆಂಗಳೂರು ಇವರು ” ಶರಣರ ದೃಷ್ಟಿಯಲ್ಲಿ ಶಿವಯೋಗ ” ಈ ವಿಷಯದ ಕುರಿತು ನಮ್ಮ ಜೊತೆಗೆ ಹಂಚಿಕೊಂಡರು.
ಶಿವ ಎಂದರೆ ಅಂತರಂಗದ ಸಾಧನೆ, ಸಂದೇಹವಿಲ್ಲದ ಸ್ಪಷ್ಟವಾದ ಮಾರ್ಗ, ಎಲ್ಲರಿಗೂ ಮಂಗಳವನ್ನು ಮಾಡುವುದು, ತನ್ನೊಳಗಿನ ನೆಲೆಯನ್ನು ಕಂಡುಹಿಡಿದುಕೊಳ್ಳುವುದು, ತನ್ನ ನಿಜ ಸ್ಥಿತಿ ಅರಿಯಬೇಕಾದದ್ದು ಎನ್ನುವುದನ್ನು ಸ್ಪಷ್ಟ ಪಡಿಸಿದರು.
ನಂತರದಲ್ಲಿ ಬಸವ ನಿಜಯೋಗವನ್ನು ತಿಳಿಯಪಡಿಸುತ್ತ, ಹಲವಾರು ಶರಣರ ವಚನಗಳ ಉಲ್ಲೇಖದೊಂದಿಗೆ, ನಡೆ ನುಡಿ ಸಹಜ ರೀತಿಯಲ್ಲಿ ಹೇಗೆ ಅನುಭಾವಿಕ ನೆಲೆಯಲ್ಲಿ ಇರಬೇಕು, ಆಯತ, ಸ್ವಾಯತ ಸನ್ನಿಹಿತದ ವಿವರಣೆಯೊಂದಿಗೆ ಅಂತರ್ಮುಖಿಯಾಗಿ ಹೇಗೆ ಸಾಧನೆ ಮಾಡಬೇಕು, ನಾನು ನೀನು ಎಂಬ ಭೇದವಳಿದು ಲಿಂಗಪ್ರಜ್ಞೆಯಲ್ಲಿ ಹೇಗೆ ಒಂದಾಗಬೇಕು, ಅಂಗವೆಂಬ ಕೀಳರಿಮೆ, ಲಿಂಗವೆಂಬ ಮೇಲರಿಮೆ ಬಿಟ್ಟು ಸಮರಸ ಭಕ್ತಿ ಹೇಗೆ ಒಡಮೂಡಬೇಕು ಎಂದು ಹೇಳುತ್ತಾ, ಗುರು ಲಿಂಗ ಜಂಗಮ ಪ್ರಸಾದಗಳ ಅರಿವನ್ನು ಮೂಡಿಸುತ್ತ, “ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದಲ್ಲಿ ತಾನಿಲ್ಲದಂತಿರಬೇಕು” ” ಎತ್ತೆತ್ತ ನೋಡಿದರತ್ತ ನೀನೇ ದೇವಾ ” “ಲಿಂಗವೆನ್ನೆ , ಲಿಂಗೈಕ್ಯವೆನ್ನೆ, ಸಂಗವೆನ್ನೇ, ಸಮರಸವೆನ್ನೆ”ಎಂದು ಉಲ್ಲೇಖಿಸುತ್ತಾ ಅಂತರಂಗದ ಕಳೆ ಕಳೆದು ಹೇಗೆ ಬೆಳಕು ಕಂಡುಕೊಳ್ಳಬೇಕು ಎಂದು ಹಲವಾರು ವಚನಗಳ ಮೂಲಕ ಶಿವಯೋಗದ ಮಹತ್ವವನ್ನು ತಿಳಿಸಿಕೊಟ್ಟರು.
ಮಾರ್ಗದರ್ಶಕರಾದ ಡಾ. ಶಶಿಕಾಂತ ಪಟ್ಟಣ ಅವರು ” ಲಿಂಗವನರಿಯದೆ ಬೇರೆಯನರಿತು ಉಪಯೋಗವಿಲ್ಲ ” “ನಾ ದೇವನಲ್ಲದೆ, ನೀ ದೇವನೇ ” ” ಶಿಶು ಕಂಡ ಕನಸಿನoತಿರಬೇಕು” “ಕುರುಹನಿಡಿದು ಅರುಹನರಿಯಬೇಕು ” ಎಂದು ಶರಣರ ವಚನಗಳನ್ನು ಉಲ್ಲೇಖಿಸುತ್ತಾ, ಶರಣರ ಉದಾತ್ತೀಕರಣದ ಪರಿಕಲ್ಪನೆಯನ್ನು ತಿಳಿಸಿಕೊಟ್ಟರು.
ಶರಣೆ ಸೋನಾಲಿ ನೀಲಕಂಠ ಅವರ ವಚನ ಪ್ರಾರ್ಥನೆ, ಡಾ. ಶಶಿಕಾಂತ ಪಟ್ಟಣ ಅವರ ಸ್ವಾಗತ, ಡಾ. ಮೀನಾಕ್ಷಿ ಪಾಟೀಲ ಅವರ ಶರಣು ಸಮರ್ಪಣೆ, ಶರಣೆ ಗೌರಮ್ಮ ನಾಶಿ ಅವರ ಕಾರ್ಯಕ್ರಮ ನಿರ್ವಹಣೆ ಮತ್ತು ಸಂವಾದದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಮಾಪ್ತಿಯಾಯಿತು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ