spot_img
spot_img

ಮೂಡಲಗಿ ಪುರಸಭೆ ಸ್ತಬ್ಧವಾಗಿದೆ

Must Read

- Advertisement -

ನಿಜವಾದ ನಾಯಕರು ಮೂಡಲಗಿಗೆ ಬೇಕಾಗಿದ್ದಾರೆ

ಮೂಡಲಗಿ – ಮೂಡಲಗಿ ಪುರಸಭೆಯು ಅಕ್ಷರಶಃ ಸ್ತಬ್ಧವಾಗಿದೆ ಎಂದೆನಿಸುತ್ತಿದೆ. ಯಾಕೆಂದರೆ ನಗರದಲ್ಲಿ ಆರಂಭಗೊಂಡ ಕೆಲಸಗಳು ಕೆಲವು ದಿನಗಳಿಂದ ನಿಂತುಹೋಗಿದ್ದು ನಗರವೆಂಬ ನಗರವು ಹದಗೆಟ್ಟು ಹೈದರಾಬಾದ್ ಆಗಿದೆ ಎಂದರೆ ತಪ್ಪಲ್ಲ. ಇಲ್ಲಿನ ಮುಖ್ಯಾಧಿಕಾರಿಗಳು ವಾರದಲ್ಲಿ ಎರಡು ದಿನ ಕಚೇರಿಗೆ ಬಂದರೆ ಬಂದರು ಇಲ್ಲವಾದರೆ ಇಲ್ಲ‌. ತಮ್ಮ ಅಹವಾಲು ಸಲ್ಲಿಸಲು ಬಂದ ಸಾರ್ವಜನಿಕರನ್ನು ಕೇಳುವವರೇ ಇಲ್ಲ.

ನಗರೋತ್ಥಾನದಡಿ ಮೂಡಲಗಿ ನಗರದಲ್ಲಿ ಆರಂಭವಾದ ರಸ್ತೆ ಕೆಲಸಗಳು ಸ್ಥಗಿತಗೊಂಡಿವೆ. ಶಾಸಕರು ಸ್ವಂತ ಹಣದಲ್ಲಿ ಮಾಡಿಸುತ್ತಿರುವ ಮುಖ್ಯ ರಸ್ತೆಯ ಸಣ್ಣ ಸೇತುವೆ ಅಭಿವೃದ್ಧಿ ಆಗಲಿಲ್ಲ. ದೊಡ್ಡ ಸೇತುವೆ ಹಾಗೂ ರಸ್ತೆಯ ಕಾಮಗಾರಿ ಆಯಿತಾದರೂ ಅದು ಕಳಪೆಯಾಗಿದ್ದು ರಸ್ತೆ ರಿಪೇರಿಯಾಯಿತು ಅಂತ ಅನ್ನಿಸುವುದೇ ಇಲ್ಲ.

- Advertisement -

ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಎಸ್ ಬಿ ಐ ಬ್ಯಾಂಕ್ ಹಿಂದುಗಡೆ ಓಣಿಗೆ ನಳದ ನೀರು ಬಂದಿಲ್ಲ. ಈ ಬಗ್ಗೆ ಇಂಜಿನೀಯರಿಗೆ ಫೋನ್ ಮಾಡಿದರೆ ಅವರು ಫೋನ್ ತೆಗೆಯುವುದಿಲ್ಲ. ಚೆನ್ನಮ್ಮ ವೃತ್ತದಿಂದ ಕರೆಮ್ಮಾ ದೇವಸ್ಥಾನ, ಎಸ್ ಬಿ ಐ ಬ್ಯಾಂಕ್ ಹಿಂದೆ, ಮುಂದೆ, ಅರ್ಬನ್ ಬ್ಯಾಂಕ್ ರಸ್ತೆ…..ಹೀಗೆ ಎಲ್ಲೆಂದರಲ್ಲಿ ರಸ್ತೆ ಅಗೆದು ಈಗಲೇ ಹೊಸ ರಸ್ತೆ ಮಾಡಿಬಿಡುತ್ತಾರೇನೋ ಎಂಬಂತೆ ಗುಡುಗು ಸಿಡಿಲಿನಂತೆ ಬಂದ ಗುತ್ತಿಗೆದಾರರು ಕೆಲವು ದಿನಗಳಿಂದ ಸಕಲ ಸಲಕರಣೆಗಳೊಂದಿಗೆ ಮಾಯವಾಗಿದ್ದಾರೆ. ತಗ್ಗು ತೆಗೆದ ರಸ್ತೆಯಲ್ಲಿ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಅಲೆದಾಡುವಂತಾಗಿದೆ. ಕಾಲಿಗೆ ಹರಳುಗಳು ಚುಚ್ಚುತ್ತಿದ್ದು ನಡೆದಾಡುವುದೇ ಕಷ್ಟವಾಗಿದೆ. ಬೈಕ್ ಗಳು ಸಾರಾಯಿ ಕುಡಿದಂತೆ ಹೊಯ್ದಾಡುತ್ತಿವೆ ! ಜನರ ಕಷ್ಟ ಕೇಳುವವರಿಲ್ಲ. ಈ ರಸ್ತೆಗಳ ವಾರ್ಡ್ ಸದಸ್ಯರೂ ಕೂಡ ಜನರ ಸಮಸ್ಯೆಗಳತ್ತ ನೋಡುತ್ತಿಲ್ಲ.

ಇನ್ನು ಮಾಮೂಲಿಯಂತೆ ಊರಿನಲ್ಲಿ ಹಂದಿಗಳ ಕಾಟ ಹೆಚ್ಚಾಗಿದ್ದು ಪುರಸಭೆಯವರು ಕಣ್ಣು ಬಾಯಿ ಮುಚ್ಚಿಕೊಂಡಿದ್ದಾರೆ. ಇದೇ ಸಮಸ್ಯೆಗಾಗಿ ಸಾರ್ವಜನಿಕರು ಪುರಸಭೆಗೆ ಮುತ್ತಿಗೆ ಹಾಕುವ ಪ್ರಸಂಗ ಎದುರಾಯಿತು. ಆಗ ಪ್ರತ್ಯಕ್ಷವಾದ ಮುಖ್ಯಾಧಿಕಾರಿಗಳು ಒಂದು ವಾರದಲ್ಲಿ ಹಂದಿಗಳ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ, ನೋಡಬೇಕು.

ಬಹಳ ಜಟಾಪಟಿಯಿಂದ ತಾಲೂಕಾಗಿ ಹೊರಹೊಮ್ಮಿದ ಮೂಡಲಗಿ ನಗರದಲ್ಲಿ ಸಮಸ್ಯೆಗಳು ತುಂಬಿ ತುಳುಕುತ್ತಿವೆ. ಪುರಸಭಾ ಅಧ್ಯಕ್ಷರು, ಸದಸ್ಯರುಗಳು ತಮ್ಮದೇ ಆದ ರಾಜಕಾರಣದಲ್ಲಿ ಮುಳುಗಿ ಹೋಗಿದ್ದಾರೇನೋ ಗೊತ್ತಿಲ್ಲ. ಆದರೆ ಸಾರ್ವಜನಿಕರ ಗೋಳನ್ನು ಮಾತ್ರ ಕೇಳುವವರಿಲ್ಲವಾಗಿದೆ.

- Advertisement -

ಇತ್ತೀಚೆಗೆ ಪುರಸಭೆಗೆ ಮುತ್ತಿಗೆ ಹಾಕಿದ ಸಾರ್ವಜನಿಕರು ಅನೇಕ ಗಂಭೀರ ಸವಾಲುಗಳನ್ನು ಹೊರಹಾಕಿದ್ದಾರೆ. ಇದಕ್ಕೆ ಪುರಸಭೆ ಉತ್ತರಕೊಡಬೇಕಾಗಿದೆ.

ಹಂದಿಗಳು, ಬಿಡಾಡಿ ದನಗಳ ಕಾಟದ ಬಗ್ಗೆ ಉತ್ತರ ಕೊಟ್ಟಿದ್ದಾರೆ ನಿಜ ಆದರೆ ಉಳಿದ ಬೇಡಿಕೆಗಳ ಬಗ್ಗೆ ಉತ್ತರವನ್ನು ಪುರಸಭೆಯ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಅಥವಾ ಮುಖ್ಯಾಧಿಕಾರಯಾಗಲಿ ನೀಡಿಲ್ಲ. ಅಂದು ಸಾರ್ವಜನಿಕರು ಇಟ್ಟ ಬೇಡಿಕೆಗಳೆಂದರೆ, ಕಾಲಕಾಲಕ್ಕೆ ಆಡಳಿತ ಮಂಡಳಿ ಸಭೆ ಕರೆಯದೆ ಇರುವುದು, ಇದ್ದೂ ಸತ್ತಂತೆ ಇರುವ ಇಂಜಿನೀಯರ್ ಸಮಸ್ಯೆ, ಸುಮಾರು ವರ್ಷಗಳಿಂದ ಇಲ್ಲೇ ಬೇರು ಬಿಟ್ಟಿರುವ ಅಧಿಕಾರಿಗಳ ಎತ್ತಂಗಡಿ, ದುಡ್ಡು ತಿಂದು ತಮಗೆ ಬೇಕಾದವರ ಹೆಸರಿಗೆ ದಾಖಲು ಮಾಡುತ್ತಿರುವುದು, ಸಾರ್ವಜನಿಕರು ಅರ್ಜಿ ಕೊಡಲು ಬಂದರೆ ಇಲ್ಲದ ಮುಖ್ಯಾಧಿಕಾರಿಯ ಹೆಸರು ಹೇಳಿ ಅರ್ಜಿ ಸ್ವೀಕರಿಸದೇ ಇರುವುದು, ಬಿನ್ ಶೇತ್ಕಿ ಆಗದ ಪ್ರದೇಶದಲ್ಲಿ ಹೆಚ್ಚಿನ ಅನುದಾನ ಬಳಕೆ ಮಾಡುವುದು, ರಸ್ತೆ, ಚರಂಡಿ, ಸ್ಮಶಾನ ಗಳನ್ನು ಅಭಿವೃದ್ಧಿ ಮಾಡದೇ ಇರುವುದು ಇವೇ ಮೊದಲಾದ ಸಮಸ್ಯೆಗಳಿಗೆ ಉತ್ತರ ಕೊಡಬೇಕಾಗಿದೆ.

ಮೂಡಲಗಿ ನಗರವು ವೇಗದಲ್ಲಿ ಬೆಳೆಯುತ್ತಿದೆ. ಅರಭಾವಿ ಕ್ಷೇತ್ರದಲ್ಲಿಯೇ ದೊಡ್ಡ ನಗರ ಮೂಡಲಗಿ. ಇಡೀ ಕ್ಷೇತ್ರವನ್ನೇ ಮಾದರಿ ಕ್ಷೇತ್ರ ಮಾಡುವೆನೆಂಬುದಾಗಿ ಶಾಸಕರು ಹಲವು ವರ್ಷಗಳ ಹಿಂದೆಯೇ ಮಾತುಕೊಟ್ಟಿದ್ದಾರೆ ಅದು ಮೂಡಲಗಿ ನಗರದಿಂದಲೇ ಆರಂಭವಾಗಬೇಕು ಆದರೆ ಎಲ್ಲಾ ಉಲ್ಟಾ ಆಗುತ್ತಿದೆ.

ಇಲ್ಲಿ ಅನೇಕ ಭಾವೀ ರಾಜಕಾರಣಿಗಳ ದಂಡೇ ಇದೆ. ಎಲ್ಲರೂ ಮುಂಬರುವ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ ಹೊರತು ನಗರದ ಸಮಸ್ಯೆಗಳ ಬಗ್ಗೆ ಪುರಸಭೆಯವರ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿಲ್ಲ. ಆ ಪಕ್ಷ ಈ ಪಕ್ಷ ಎಂದು ಚುನಾವಣೆಯ ಟಿಕೆಟ್ ಪಡೆಯಲು ರಾಜ್ಯಮಟ್ಟದ ನಾಯಕರ ಬಾಗಿಲು ಬಡಿಯುತ್ತಿದ್ದಾರೆ ಎಂಬ ವರದಿಗಳಿವೆ. ಅದನ್ನು ಮಾಡಲಿ ಆದರೆ ಕ್ಷೇತ್ರದ ಸಾರ್ವಜನಿಕರು, ಮುಖ್ಯವಾಗಿ ನಿರ್ಲಕ್ಷಿತ ಮೂಡಲಗಿ ನಗರದ ಸಮಸ್ಯೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಇದು ತೀರಾ ವಿಪರ್ಯಾಸ. ಸಾರ್ವಜನಿಕರ ಹಿತವನ್ನು ದೃಷ್ಟಿಯಲ್ಲಿಟ್ಟು ಕೆಲಸ ಮಾಡಬೇಕಾದ ನಿಜವಾದ ನಾಯಕರು ಮೂಡಲಗಿ ನಗರಕ್ಕೆ ಬೇಕಾಗಿದ್ದಾರೆ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಹಿಂದಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುನಗುಂದ : ಈಚೆಗೆ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊಹಮ್ಮದ್ ರಿಹಾನ್ ಇಟಗಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group