ಮೂಡಲಗಿ: ಗೋಕಾಕ ಪಟ್ಟಣದ ಹೊರ ವಲಯದಲ್ಲಿ ಖಾಸಗಿ ಕಟ್ಟಡ ಬಾಡಿಗೆ ರೂಪದಲ್ಲಿ ನಡೆಸುತ್ತಿರುವ ರಸ್ತೆ ಸಾರಿಗೆ ಇಲಾಖೆಯ ಕಚೇರಿಯನ್ನು ಸಂಗನಕೇರಿ ಹತ್ತಿರ ಇರುವ ಸರಕಾರಿ ನೀರಾವರಿ ಇಲಾಖೆಯ ಜಾಗೆಯಲ್ಲಿ ಸ್ಥಳಾಂತರಿಸಿ ಸರಕಾರದ ಖರ್ಚು ಉಳಿಸಬೇಕೆಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಆಗ್ರಹಿಸಿದರು.
ಸೊಮವಾರ ಮೂಡಲಗಿಯ ಪತ್ರಿಕಾ ಕಾರ್ಯಾಲಯದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕದಲ್ಲಿ ರಸ್ತೆ ಸಾರಿಗೆ ಇಲಾಖೆ ಪ್ರತಿ ತಿಂಗಳು ಸುಮಾರು 1.30 ಲಕ್ಷ ರೂಪಾಯಿನ್ನು ಸರಕಾರದಿಂದ ಭರಿಸುತ್ತಿದ್ದು ಇದನ್ನು ಸಂಗನಕೇರಿಗೆ ಸ್ಥಳಾಂತರಿಸುವದರಿಂದ ಸರಕಾರಕ್ಕೆ ಉಳಿತಾಯ ಹಾಗೂ ಬೆಳಗಾವಿ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿ ಅನುಕೂಲವಾಗುತ್ತದೆ. 2004 ರಿಂದ ಅರಭಾವಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ ಎನ್ನುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೇಳಿಕೆಯಲ್ಲಿ ಹುರುಳಿಲ್ಲ. ಕ್ಷೇತ್ರದಲ್ಲಿ ಕಾನೂನು ವ್ಯವಸ್ಥೆ ಬಹಳ ಹದಗೆಟ್ಟಿದೆ ಎಸ್ಪಿಯವರು ಸರಿಪಡಿಸಬೇಕು ಇಲ್ಲದ್ದಿದರೆ ಹೋರಾಟ ಮಾಡಲಾಗುವುದು ಎಂದರು.
ತಾಲೂಕು ರಚನೆಯಾಗಿ ಸುಮಾರು 4 ವರ್ಷಗಳು ಕಳೆದರೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ನಿರೀಕ್ಷಕರ ಕಚೇರಿ, ಜಿಪಂ ಉಪವಿಭಾಗ, ಉಪನೋಂದಣಿ ಕಚೇರಿ ಸೇರಿದಂತೆ ಅನೇಕ ಕಚೇರಿಗಳು ಆರಂಭಗೊಂಡಿಲ್ಲ. ಇದರಿಂದ ಈ ಭಾಗದ ಜನರಲ್ಲಿ ಎಷ್ಟು ಖುಷಿಯಾಗಿತ್ತೋ ಈಗ ತಾಲೂಕಿಗೆ ಬರಬೇಕಾದ ಇಲಾಖೆಗಳು ಆದೇಶ ಪತ್ರದಲ್ಲಿ ತಾಲೂಕಿನ ಹೆಸರು ಮಾಯವಾಗುತ್ತಿರುವುದರಿಂದ ಅಷ್ಟೇ ಬೇಸರವೂ ಆವರಿಸಿದೆ, ಮೂಡಲಗಿ ತಾಲೂಕಿಗೆ ಬರಬೇಕಾದ ಕಚೇರಿಗಳು ತ್ವರಿತವಾಗಿ ಆಗಬೇಕು ಮತ್ತು ಅಲ್ಲಿ ಪ್ರತ್ಯೇಕ ಅಧಿಕಾರಿಗಳ ನೇಮಕವಾಗ ಬೇಕಾಗಿದೆ. ರಾಜ್ಯ ಸರ್ಕಾರವು ಕೂಡಲೇ ಸಂಬಂಧಿಸಿದ ಕಚೇರಿಗಳನ್ನು ಆರಂಭಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಆಗ್ರಹವಾಗಿದೆ ಎಂದರು.
ಇನ್ನು ಮೂಡಲಗಿ ತಾಲೂಕಿನಲ್ಲಿ ನಕಲಿ ಔಷಧ ಮಾರಾಟವಾಗುತ್ತಿರುವುದನ್ನು ಹತ್ತಿಕಲು ಮತ್ತು ಬ್ರೂಣ ಹತ್ಯೆಗಳನ್ನು ತಡೆಯಲ್ಲು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲೂಕಾ ಆರೋಗ್ಯ ಅಧಿಕಾರಿನ್ನು ನೇಮಿಸಬೇಕು, ಶೀಘ್ರವಾಗಿ ಉಪನೋಂದಣಿ ಕಚೇರಿಯನ್ನು ಪ್ರಾರಂಭಿಸಬೇಕು ಎಂದು ಸವಸುದ್ದಿ ಆಗ್ರಹಿಸಿ, ಸಂಬಂಧಪಟ್ಟವರು ಕಾರ್ಯಗಳನ್ನು ಮಾಡದಿದ್ದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮೂಡಲಗಿ ತಾಲೂಕಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲು ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಮಯದಲ್ಲಿ ಗುರು ಗಂಗನ್ನವರ, ಹಾಲಪ್ಪ ಪೂಜೇರಿ, ನಾಗಪ್ಪ ತುಕ್ಕಾನಟ್ಟಿ ಉಪಸ್ಥಿತರಿದ್ದರು.