ಮೂಡಲಗಿ – ಇಲ್ಲಿನ ನಾಗನೂರ ಕೆನಾಲ್ ಪಕ್ಕ ಇರುವ ಸಮರ್ಥ ಪ್ರಾಥಮಿಕ ಶಾಲೆಯ ಹಾಸ್ಟೆಲ್ ನಲ್ಲಿ ಇರುವ ಮಕ್ಕಳು ಶನಿವಾರ ಮೊಹರಂ ಸೂಟಿಯ ದಿನ ಮಳೆಗೆ ಹಾಳಾಗಿರುವ ಕೆನಾಲ್ ರಸ್ತೆಯ ರಿಪೇರಿಯಲ್ಲಿ ತೊಡಗಿದ್ದದ್ದು ಕಂಡು ಬಂದಿತು.
ಮೊದಲೇ ಕೆನಾಲ್ ಪಕ್ಕದಲ್ಲಿ ಅಪಾಯಕಾರಿ ಜಾಗದಲ್ಲಿ ಇರುವ ಈ ಶಾಲೆಗೆ ಹೋಗುವ ದಾರಿಯು ಮಳೆಗೆ ಕೆಸರುಮಯವಾಗಿ ಶಾಲಾ ವಾಹನಗಳು ಹೊಯ್ದಾಡುತ್ತ ಹೋಗುತ್ತವೆ. ಈ ಬಗ್ಗೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹಾಗೂ ಡಿಡಿಪಿಐ ಮೋಹನ ಹಂಚಾಟೆಯವರು, ಎಲ್ಲರಿಗೂ ಕಳೆದ ಒಂದು ವರ್ಷದಿಂದ ದೂರು ನೀಡುತ್ತಲಿದ್ದರೂ ಈ ಇಬ್ಬರೂ ಅಧಿಕಾರಿಗಳು ಕಣ್ಣಿದ್ದೂ ಕುರುಡರು, ಕಿವಿಯಿದ್ದೂ ಕಿವುಡರಾಗಿದ್ದಾರೆ. ಶಾಲಾ ಮಕ್ಕಳ ಅಮೂಲ್ಯ ಜೀವದ ಬಗ್ಗೆ ಇವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ಕೆಲವು ಗಂಡು ಮಕ್ಕಳು ಬುಟ್ಟಿ ಸಲಿಕೆ ತೆಗೆದುಕೊಂಡು ಶಾಲೆಯ ಬಯಲಿನಲ್ಲಿನ ಗರಸನ್ನು ತಂದು ರಸ್ತೆಗೆ ಹಾಕುತ್ತಿದ್ದರು. ಒಂದು ದೊಡ್ಡ ಕಲ್ಲನ್ನು ಇಬ್ಬರು ಬಾಲಕರು ತಿಣುಕಾಡುತ್ತ ತಂದು ರಸ್ತೆಗೆ ಹಾಕುತ್ತಿದ್ದರೆ ಇಲ್ಲಿ ನಿಂತ ಶಾಲೆಯ ಅಧ್ಯಕ್ಷ ಮಹಾಶಯ ಅದನ್ನು ಸಮತಟ್ಟು ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು. ಈ ಬಗ್ಗೆ ನಮ್ಮ ಪತ್ರಕರ್ತರು ಕೇಳಿದಾಗ ಅವರು ನಮ್ಮ ಮನೆಯಲ್ಲಿನ ಹುಡುಗರೇ ಇದ್ದಾರೆ ನಾವೇಕೆ ಹಾಸ್ಟೆಲ್ ಹುಡುಗರಿಗೆ ಕೆಲಸ ಹಚ್ಚೋಣ ಎಂಬ ಉಡಾಫೆಯ ಮಾತು ಬಂದಿದೆ. ಗರಸು ಹಾಕುವಾಗ ಶಾಲೆಯ ಅಧ್ಯಕ್ಷರ ಮಕ್ಕಳೂ ಅಳಿಯ ಇದ್ದದ್ದು ನಿಜ ಆದರೆ ಹೆಚ್ಚಿನ ಪ್ರಮಾಣದಲ್ಲಿ ಹಾಸ್ಟೆಲ್ ಹುಡುಗರೇ ಇದ್ದದ್ದು ಪತ್ರಿಕೆಯ ಗಮನಕ್ಕೆ ಬಂದಿದೆ.
ಹಾಗೆ ನೋಡಿದರೆ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಭ್ರಷ್ಟಾಚಾರವೆನ್ನುವುದು ತಾಂಡವ ನಾಟ್ಯವಾಡುತ್ತಿದ್ದು ಹೆಜ್ಜೆ ಹೆಜ್ಜೆಗೂ ಕಾಂಚಾಣವಿಲ್ಲದೆ ಕೆಲಸ ಆಗುವುದೇ ಇಲ್ಲವೆಂಬ ಪರಿಸ್ಥಿತಿ ಇದೆ.
ಒಂದು ಶಾಲೆ ಆರಂಭವಾಗಬೇಕಾದರೆ ಹಲವಾರು ನಿಯಮಗಳ ಪಾಲನೆಯಾಗಬೇಕು, ಮಕ್ಕಳ ಸುರಕ್ಷತೆಯ ಬಗ್ಗೆ ನಿಗಾ ವಹಿಸಬೇಕು. ಆದರೆ ಈ ಸಮರ್ಥ ಪ್ರಾಥಮಿಕ ಶಾಲೆಯಲ್ಲಿ ಈ ಕೆಲವೊಂದು ನಿಯಮಗಳ ಪಾಲನೆ ಆಗದ ಬಗ್ಗೆ ಈ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ ಮಹನೀಯರಿಗೆ ಒಂದು ವರ್ಷದಿಂದ ಕಿವಿಯಲ್ಲಿ ಮಾಹಿತಿ ಇಳಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಒಂದು ನೋಟೀಸು ಕಳಿಸಿದಂತೆ ಮಾಡಿ ತಿಪ್ಪೆ ಸಾರಿಸಲಾಗುತ್ತಿದೆ.
ಇದಕ್ಕೆ ಕಾರಣವೇನೆಂದರೆ, ಈ ಸಮರ್ಥ ಶಾಲೆಯು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರ ನೆರಳಿನಲ್ಲಿದೆ. ಅವರು ಇಲ್ಲಿ ರಾಜಕೀಯ ಸಭೆಗಳನ್ನು ನಡೆಸುತ್ತಾರೆ. ತಮ್ಮ ಹೆಸರು ಮತ್ತಷ್ಟು ಶೋಭಾಯಮಾನಗೊಳಿಸಲು ಸಭೆ ಸಮಾರಂಭಗಳನ್ನು ನಡೆಸುತ್ತಾರೆ. ಪ್ರೇಕ್ಷಕರನ್ನಾಗಿ ಶಾಲೆಯ ಮಕ್ಕಳನ್ನೇ ಬಳಸಿಕೊಳ್ಳಲಾಗುತ್ತದೆ. ಇದು ಕಾನೂನುಬಾಹಿರವಾಗಿದ್ದರೂ ಈ ಶಾಲೆಯ ಅಧ್ಯಕ್ಷನನ್ನು, ಗಡಾದ ಅವರನ್ನು ಪ್ರಶ್ನೆ ಮಾಡುವ ಧೈರ್ಯ ಈ ಅಧಿಕಾರಿಗಳಿಗೆ ಇಲ್ಲವೋ ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ. ಯಾಕೆಂದರೆ, ಬೇರೆ ಯಾವುದೇ ಶಾಲೆಯಾದರೆ ಸಣ್ಣ ವಿಷಯಕ್ಕೂ ಪರವಾನಿಗೆ ರದ್ದು ಮಾಡಲು ನಿಲ್ಲುವ ಈ ಅಧಿಕಾರಿಗಳು ೨೦೧೮ ರಲ್ಲಿಯೇ ಈ ಶಾಲೆಯ ಸುತ್ತ ಬೇಲಿ ಇದೆಯೆಂದು ‘ಪ್ರತ್ಯಕ್ಷ’ ಭೇಟಿಯಾಗಿ ವರದಿ ಕೊಟ್ಟಿದ್ದರು ! ಇದೊಂದೇ ಉದಾಹರಣೆ ಸಾಕು ಈ ಶಾಲೆಯ ಕರ್ಮಕಾಂಡದಲ್ಲಿ ಅಧಿಕಾರಿಗಳು ಎಷ್ಟೊಂದು ಪ್ರಮಾಣದಲ್ಲಿ ಸಿಲುಕಿದ್ದಾರೆಂದು ತಿಳಿಯಲು !
ಪಾಲಕರು ತಮ್ಮ ಮನೆಯಲ್ಲಿನ ಕೆಲಸ ಬಿಡಿಸಿ ಮಕ್ಕಳನ್ನು ಶಾಲೆಗೆ ಕಳಿಸಿ ಹಾಸ್ಟೆಲ್ ನಲ್ಲಿ ಇಡುತ್ತಾರೆ ಈ ಮಕ್ಕಳನ್ನು ಶಾಲಾ ಮಂಡಳಿಯವರು ಈ ರೀತಿಯಾಗಿ ಕೆಲಸಕ್ಕೆ ಹಚ್ಚುತ್ತಾರೆ! ಅಧಿಕಾರಿಗಳು ಮಾತನಾಡದೇ ಮೂಕರಾಗುತ್ತಾರೆ. ಅಷ್ಟಕ್ಕೂ ಈ ಶಾಲೆಗೆ ಹಾಸ್ಟೆಲ್ ನಡೆಸಲು ಪರವಾನಿಗೆ ಇದೆಯೇ ಎಂಬ ಪ್ರಶ್ನೆಗೂ ಇಂದಿಗೂ ಉತ್ತರ ಸಿಕ್ಕಿಲ್ಲ. ಅಲ್ಲಿಯೂ ಕಾಂಚಾಣ ಕೆಲಸ ಮಾಡಿರಬೇಕೆಂಬ ಗುಮಾನಿಯಿದೆ.
ಹೀಗಾದರೆ ಮೂಡಲಗಿ ಶಿಕ್ಷಣ ವಲಯದ ಭವಿಷ್ಯವೇನು? ಎಂಬ ಬಗ್ಗೆ ಪಾಲಕರು, ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ವಿಚಾರ ಮಾಡಬೇಕಿದೆ. ಶಿಕ್ಷಕ ಭ್ರಷ್ಟನಾದರೆ ಮಕ್ಕಳ ಭವಿಷ್ಯಕ್ಕೆ ಮೂಲ, ಶಿಕ್ಷಣಾಧಿಕಾರಿಗಳು ಭ್ರಷ್ಟರಾದರೆ ಮಕ್ಕಳ ಭವಿಷ್ಯ ಹಾಗೂ ಜೀವಕ್ಕೂ ಮೂಲ ಎಂಬುದು ಈ ಅಧಿಕಾರಿಗಳಿಗೆ ಹೇಗೆ ತಿಳಿಯಬೇಕು? ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರದಿಂದ ತುಂಬಿ ಹೋಗಿರುವ ಮೂಡಲಗಿ ಶಿಕ್ಷಣ ವಲಯವನ್ನು ಹೇಗೆ ಸ್ವಚ್ಛಗೊಳಿಸುವುದು? ಈ ಅಭಿಯಾನವಂತೂ ಶುರುವಾಗಿದೆ. ಎಲ್ಲರೂ ಕೈ ಜೋಡಿಸಬೇಕು ಅಷ್ಟೆ!
ಉಮೇಶ ಬೆಳಕೂಡ, ಮೂಡಲಗಿ