ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ……ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್ ರಂಗಕಲಾವಿದರಲ್ಲಿ ಸಮರ್ಪಣೆಯ ರಂಗ ಕಲಾವಿದ ಮೈಸೂರು ರಮಾನಂದ ಕೂಡ ಒಬ್ಬರು.
ಸುಮಾರು 70 ವರ್ಷ ವಯಸ್ಸಿನ ಮೈಸೂರು ರಮಾನಂದ ಅವರು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜನಿಸಿದವರು. ನಾಡಿನ ಸಾಂಸ್ಕೃತಿಕ ಸೊಗಡನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು. ನಿರಂತರ 50 ವರ್ಷಗಳಿಂದ ನಾಡಿನಾದ್ಯಂತ ಸಂಚರಿಸಿ ರಂಗಭೂಮಿಯಲ್ಲಿ ಬಹುಮುಖಿ ವೇಷಗಳಿಂದ, ಬಹುಮುಖ ಪ್ರತಿಭೆಯಿಂದ ಮೆರೆದವರು. ಬಹುವಿಭಾಗ ಸಿನಿಮಾ, ರಂಗ ನಿರ್ವಹಣೆಯಿಂದ ಕರ್ನಾಟಕ ರಮಾರಮಣರೆನಿಸಿದವರು.
ಕನ್ನಡದ ಹೆಮ್ಮೆಯ ವರನಟ ಡಾ.ರಾಜಕುಮಾರ,
ಡಾ.ಹಾ.ಮಾ.ನಾಯಕ, ಡಾ.ಬಿ.ವಿ.ಕಾರಂತ್ ಮೊದಲಾದ ದಿಗ್ಗಜರು ರಮಾನಂದರ ರಂಗಕಲೆಯ ಕಾಯಕವನ್ನು ಮೆಚ್ಚಿಕೊಂಡವರಾಗಿದ್ದಾರೆ. ನಾಡಿನ ಹಲವು ಪತ್ರಿಕೆಗಳು ಮೈಸೂರು ರಮಾನಂದರ 50 ವರ್ಷಗಳ ರಂಗ ಸೇವೆಯ ಬರಹ ಪ್ರಕಟಿಸಿವೆ. ನಾಡಿನ ರಂಗ ದಿಗ್ಗಜರು ಸಾಹಿತಿ ಕಲಾವಿದರು ರಮಾನಂದ ಅವರ ಪ್ರತಿಭಾ ಸಂಪನ್ನ ಸಾಧನೆಯನ್ನು ರಂಗ ಬೆನ್ನು ತಟ್ಟಿ ಉತ್ತೇಜಿಸಿದ್ದಾರೆ. ನಟ,ನಿರ್ದೇಶಕ, ರಚನಕಾರ, ಪ್ರಕಾಶಕ, ಗೆಜ್ಜೆ ಹೆಜ್ಜೆ ರಂಗ ತಂಡ ಸಂಸ್ಥಾಪಕ, ಪತ್ರಕರ್ತ, ಪ್ರಯೋಗ ಶೀಲ ನಾಟಕಕಾರ, ರಂಗ ಸಂಚಾರಿ… ಹೀಗೆ ವಿವಿಧ ಆಯಾಮಗಳ ಬಹುಮುಖಿ ಸಾಧಕ ಮೈಸೂರು ರಮಾನಂದರು. ಇವರು ಗೆಳೆಯರೊಂದಿಗೆ ಆರಂಭಿಸಿದ ವಾಸ್ತವ ಜೀವನದ ಸಮಸ್ಯೆಗಳು ಮತ್ತದರ ಪರಿಹಾರಗಳನ್ನು ತಿಳಿಸುವ ಬೀದಿ ನಾಟಕಗಳು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿದೆ. ರಂಗಭೂಮಿಯ ವಿಶ್ವ ಪ್ರಜ್ಞೆಯನ್ನು ಯಶಸ್ವಿಯಾಗಿ ಸಾರುತ್ತಿರುವ ಮೈಸೂರು ರಮಾನಂದ ಅವರು ಕ್ರಿಯಾಶೀಲತೆಯಲ್ಲಿ, ಸಾಮಾಜಿಕ ಕಳಕಳಿಯ ಬದ್ಧತೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿ. ಅವರು ರಂಗಭೂಮಿಯನ್ನು ವಾಸ್ತವ ಬದುಕಿನ ಸಮಸ್ಯೆಗಳ ಪರಿಹಾರದ ಕನ್ನಡಿಯಾಗಿ ದೂರದೃಷ್ಟಿ ಅವಲೋಕನ ಮೆಚ್ಚುವಂತದ್ದು,
ಮೈಸೂರು ರಮಾನಂದರನ್ನು ಕಲಾವಿದರಾಗಿ ಸಂತೋಷದಿಂದ ಒಪ್ಪಿಕೊಳ್ಳುವ ಜೊತೆಗೆ ನಮ್ಮ ರಾಜ್ಯದ ಮಹಾನಂದ ಎಂದು ಬಾಚಿ ಅಪ್ಪಿಕೊಳ್ಳಬಹುದಾಗಿದೆ.
ಇವರ ಕುರಿತಂತೆ ಕೆಲ ವರ್ಷಗಳ ಹಿಂದೆ ಅಭಿನಂದನಾ ಗ್ರಂಥ ಪ್ರಕಟವಾಗಿದೆ. ಅದರಲ್ಲಿ ನಾನು ಕೂಡ ಬರೆದಿರುವೆ. ಸರ್ಕಾರಿ ಕಚೇರಿಗಳ ಸಹಯೋಗದಲ್ಲಿ ಅವರು ಸರ್ಕಾರದ ಪ್ರಚಾರಾತ್ಮಕ ನೀತಿಗಳನ್ನು ಜನಸಾಮಾನ್ಯರಿಗೆ ತಮ್ಮದೇ ರಚನೆಯ ಬೀದಿ ನಾಟಕಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ.
ವೈಯುಕ್ತಿಕವಾಗಿ ಸುಮಾರು 2 ದಶಕಗಳಿಂದ ಅವರು ನನಗೆ ಪರಿಚಿತರು. ಪ್ರೀತಿಯ ಒಡನಾಡಿ. ಮೈಸೂರು ರಮಾನಂದರ ಕಲಾ ಪರಿಚಯವನ್ನು ನಾನು ನಾಡಿನ ಕೆಲವು ಪತ್ರಿಕೆಗಳಲ್ಲಿ ಬರೆದಿರುವುದುಂಟು. ರಮಾನಂದ ರಂಗಭೂಮಿಯಲ್ಲಿ ತಾನು ಕಲಾವಿದನಾಗಿ ಬೆಳೆಯುವ ಜೊತೆಗೆ ತನ್ನ ಸಹ ಕಲಾವಿದರನ್ನು ಬೆಳೆಸಿದ್ದಾರೆ. ಕಲಾವಿದರ ಸಂಕಷ್ಟಗಳಿಗೆ ಮಿಡಿದು ಅವರನ್ನು ಸಹ ತನ್ನೊಂದಿಗೆ ಬೆಳೆಸಿದ ಹೃದಯ ಸಂಪನ್ನರು. ಇವರಿಗೆ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ ನಿಜಕ್ಕೂ ಸಲ್ಲಬೇಕಿದೆ. ಅದಕ್ಕೆ ಇವರು ನಿಜವಾಗಿಯೂ ಅರ್ಹರಿದ್ದಾರೆ.
ಮೊನ್ನೆ ಅವರು ಬೆಂಗಳೂರಿನ ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿರುವ ಮಗನ ಮನೆಗೆ ಬಂದಿದ್ದರು. .ಅವರ ರಂಗ ಸಾಧನೆಯ ಬೃಹತ್ ಫೈಲ್ ನ್ನು ತೋರಿಸಿದರು. ಇದನ್ನು ಆಯ್ಕೆ ಸಮಿತಿ ನೋಡಿ ಪ್ರಶಸ್ತಿಗೆ ಪರಿಗಣಿಸಬೇಕಿದೆ ಅಷ್ಟೇ.
ರಂಗಭೂಮಿಯ ಅನುಭವದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಲ್ಲಿಯೂ ಗುರುತರ ಪಾತ್ರಗಳಲ್ಲಿ ಗಮನಾರ್ಹ ಅಭಿನಯದಿಂದ ಮಿಂಚಿದವರು ಮೈಸೂರು ರಮಾನಂದರು. ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೋ ತಿಳಿಯದು. ಇತ್ತೀಚಿಗೆ ಇವರೇ ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ಮಗ್ಗಿ ಪುಸ್ತಕ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಮತ್ತೊಂದು ರಮಾನಂದರ
ವಿಶೇಷವೆಂದರೆ ಇವರ ಮಗ ಮತ್ತು ಪತ್ನಿ ಸಹ ಕಲಾ ಬದುಕಿನಲ್ಲಿ ಇವರ ಜೊತೆಯಲ್ಲಿಯೇ ಸಾಗಿದ್ದಾರೆ.
ನಗು ಎಲ್ಲಿದೆಯೋ ಅಲ್ಲಿದೆ ಅರೋಗ್ಯ ಎನ್ನುವ ರಮಾನಂದರ ಸ್ಲೋಗನ್ ನಂತೆ ಇವರು ತಮ್ಮ ಬದುಕಿನ ಉದ್ದಕ್ಕೂ ಕಲಾ ರಸಿಕರನ್ನು ನಗಿಸುತ್ತಲೇ ಬಂದಿದ್ದಾರೆ.
—-
ಗೊರೂರು ಅನಂತರಾಜು, ಹಾಸನ
9449462879.
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾಡ್೯
3 ನೇ ಕ್ರಾಸ್, ಹಾಸನ – 573201.