ಬೆಳಗಾವಿ: ನಗರ ಪ್ರದೇಶದ ಆಸ್ತಿಗಳ ನಿಖರತೆ ತಿಳಿಯಲು ಮತ್ತು ನೋಂದಣಿಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವುದು, ಆ ಮೂಲಕ ವಂಚನೆ, ಬೇನಾಮಿ ವಹಿವಾಟುಗಳನ್ನು ಪರಿಶೀಲಿಸುವುದು ಮತ್ತು ಭೂ ವಿವಾದಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ನಕ್ಷಾ ಸರ್ವೆ ಯೋಜನೆಯನ್ನು ಪ್ರಾರಂಭಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಮಂಗಳವಾರ ಫೆ-18 ರಂದು ಭೂ ದಾಖಲೆಗಳ ಇಲಾಖೆ, ಕಂದಾಯ ಇಲಾಖೆ ಹಾಗೂ ನಗರಾಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಕ್ಷಾ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಬೋರಗಾಂವ ನಗರಗಳು ಈ ಯೋಜನೆಗೆ ಆಯ್ಕೆಯಾಗಿವೆ. ರಾಜ್ಯದಲ್ಲಿ 10 ನಗರಗಳು ಮತ್ತು ದೇಶದಲ್ಲಿ 150 ನಗರಗಳು ಪ್ರಾಯೋಗಿಕ ಕಾರ್ಯಕ್ರಮಕ್ಕೆ ಆಯ್ಕೆಯಾಗಿವೆ. ಈ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾವು 193.81 ಕೋಟಿ ರೂ.ಗಳ ಆರ್ಥಿಕ ವೆಚ್ಚವನ್ನು ನಿಗದಿಪಡಿಸಲಾಗಿದೆ ಎಂದರು.
ಡ್ರೋನ್ ಮುಖಾಂತರ ನಗರ ಪ್ರದೇಶದ 3ಡಿ ಚಿತ್ರಣದೊಂದಿಗೆ ವೈಮಾನಿಕ ಛಾಯಾಗ್ರಹಣದಿಂದ ಆಸ್ತಿಗಳ ಸರ್ವೆ ಮಾಡಿ ನಕ್ಷೆಗಳನ್ನು ತಯಾರು ಮಾಡುತ್ತಾರೆ ಇದರಿಂದ ನಿಖರವಾದ ಆಸ್ತಿ ಗೊತ್ತಾಗುತ್ತದೆ. ಒಳಚರಂಡಿ ಮತ್ತು ಪ್ರವಾಹ ನಿರ್ವಹಣೆಯ ಯೋಜನೆ ಮತ್ತು ನಮ್ಮ ನಗರ ಪ್ರದೇಶಗಳಿಗೆ ಮಾಸ್ಟರ್ ಪ್ಲಾನ್‌ಗಳನ್ನು ಸಿದ್ಧಪಡಿಸುವಲ್ಲಿ ಈ ಸರ್ವೆ ಕಾರ್ಯ ಉಪಯುಕ್ತವಾಗಿರುತ್ತದೆ ಎಂದರು.
ಗೋಕಾಕ ನಗರ ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತದೆ. ಆ ಪ್ರವಾಹದ ನೀರು ಬಂದಾಗ ಈ ನಗರವನ್ನು ಸುರಕ್ಷಿತವಾಗಿಡಲು ಇದರಿಂದ ಅಧ್ಯಯನ ಮಾಡಬಹುದಾದ ಸಾಧ್ಯತೆ ಇದೆ ಮತ್ತು ವಿಶೇಷವಾಗಿ ಗೋಕಾಕ ನಗರದಲ್ಲಿ ಸುಮಾರು 26 ಸಾವಿರ ಆಸ್ತಿಗಳಿದ್ದರೂ ಕೂಡಾ ಕೇವಲ 5 ಸಾವಿರ ಆಸ್ತಿಗಳು ಮಾತ್ರ ನಗರ ಸಭೆ ವ್ಯಾಪ್ತಿಯಲ್ಲಿ ದಾಖಲೀಕರಣಗೊಂಡಿವೆ ಎಂದರು.
ಇವುಗಳನೆಲ್ಲ ಅಧಿಕೃತ ಮಾಡುವುದರಿಂದ ಹೂಡಿಕೆದಾರರಿಗೆ ಭೂಮಿಯ ಮಾಲೀಕತ್ವದ ಹಕ್ಕು ಸಿಗುತ್ತದೆ. ಸ್ಥಳೀಯ ಪ್ರಾಧಿಕಾರಗಳು ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಮತ್ತು ವಲಯ ನಿಯಮಾವಳಿಗಳನ್ನು ಜಾರಿಗೆ ತರಲು ಅನುವು ಮಾಡಿಕೊಡುತ್ತದೆ. ಸಾರ್ವಜನಿಕರು ಈ ಯೋಜನೆಯ ಜಾರಿಗೆ ಸಹಕರಿಸಬೇಕೆಂದು ಕರೆ ನೀಡಿದರು.
ಶಾಸಕರಾದ ರಮೇಶ ಜಾರಕಿಹೊಳಿ, ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕಿ ಶ್ರೀಮತಿ ನಜ್ಮಾ ಎಂ. ಪೀರಜಾದೆ, ತಹಶೀಲ್ದಾರ ಡಾ. ಮೋಹನ ಭಸ್ಮೆ, ಡಿ.ವಾಯ್.ಎಸ್.ಪಿ ಡಿ.ಎಚ್. ಮುಲ್ಲಾ, ನಗರಸಭೆ ಪೌರಾಯುಕ್ತ ಆರ್. ಪಿ. ಜಾಧವ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಆರ್. ಆರ್. ಪಾಟೀಲ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ನಗರಸಭೆ ಉಪಾಧ್ಯಕ್ಷೆ ಬೀಬಿಬತೂಲ ಜಮಾದಾರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.