ಮೂಡಲಗಿ: ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಯೊಂದಿಗೆ ಸರಕಾರವು ಅಂಗನವಾಡಿ ಕೇಂದ್ರಗಳ ಮುಖಾಂತರ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೂಡಲಗಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೊಡ ಹೇಳಿದರು.
ಅವರು ಪಟ್ಟಣದ ವಿದ್ಯಾನಗರದಲ್ಲಿನ 403ರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಪೌಷ್ಠಿಕತೆ ಮಟ್ಟವನ್ನು ಹೆಚ್ಚಿಸುವಲ್ಲಿ ಪೋಷಣ ಅಭಿಯಾನ ಯೋಜನೆಯ ಮುಖ್ಯ ಉದ್ದೇಶವಾದ ಅಪೌಷ್ಠಿಕತೆಯನ್ನು ಹೋಗಲಾಡಿಸಬಹುದು ಎಂದರು.
ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಕೆ.ಸಿ.ಕನಶೆಟ್ಟಿ ಮಾತನಾಡಿ, ಮಕ್ಕಳ ಅಪೌಷ್ಟಿಕ ಮಟ್ಟ ಹಾಗೂ ಗರ್ಭಿಣಿ ಬಾಣಂತಿಯರಲ್ಲಿರುವ ರಕ್ತಹೀನತೆಯನ್ನು ತಡೆಯಲು ಅಂಗನವಾಡಿಯಲ್ಲಿ ನೀಡುವ ಆಹಾರ ಪಧಾರ್ಥಗಳನ್ನು ಉಪಯೋಗಿಸ ಬೇಕೆಂದು ಸಲಹೆ ನೀಡಿ ಫಲಾನುಭವಿಗಳಿಗೆ ಸರಕಾರದ ಯೋಜನೆಯ ಉದ್ಧೇಶ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರ ಸೌಲಭ್ಯಗಳನ್ನು ತಿಳಿಸಿದರು.
ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಸಿ.ಬಿ.ಪಾಟೀಲ ಮಾತನಾಡಿ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಬೇಕು, ಮನುಷ್ಯ ಆರೋಗ್ಯವಂತನಾಗಿದ್ದರೆ ಏನನ್ನಾದರು ಸಾಧನೆ ಮಾಡಬಹುದು ಎಂದ ಅವರು ಪ್ರತಿಯೊಬ್ಬರು ತಪ್ಪದೇ ಕೋವಿಡ್-19 ಲಸಿಕೆ ಪಡೆಯಬೇಕೆಂದರು,
ಅಭಿಯಾನದಲ್ಲಿ ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬಾಲ ವಿಕಾಸ ಸಲಹಾ ಸಮಿತಿಯ ಸದಸ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ತಾಯಂದಿರು, ಗರ್ಭಿಣಿ ಮತ್ತಿತರರು ಉಪಸ್ಥಿತರಿದ್ದರು.
403 ರ ಅಂಗನವಾಡಿ ಕಾರ್ಯಕರ್ತೆ ದೀಪಶ್ರೀ ದೇಸೂಕರ ಸ್ವಾಗತಿಸಿ ನಿರೂಪಿಸಿದರು, ಕಾರ್ಯಕರ್ತೆ ಕಲಾವತಿ ನಂದಗಾoವಮಠ ವಂದಿಸಿದರು.