spot_img
spot_img

ಬೇವಿನ ಮರ ನುಡಿದ ಸಾಕ್ಷಿ

Must Read

spot_img
- Advertisement -

ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ ಸಿದ್ದಪ್ಪ ಹೊಸಮನಿ ಎಂಬ ಒಬ್ಬ ವಕೀಲರಿದ್ದರು. ಅನ್ಯಾಯದ ವಿರುದ್ದ ಸಿಡಿದೇಳುತ್ತಿದ್ದ ಅವರು ಬಡವರ ಬಗೆಗೆ, ಶೋಷಣೆಗೆ ಒಳಗಾದವರ ಬಗೆಗೆ, ಅನುಕಂಪ ಮೃದು ಭಾವನೆಗಳನ್ನು ಹೊಂದಿದ್ದರು. ತುಳಿತಕ್ಕೆ ಒಳಗಾದವರ ನೆರವಿಗೆ ಅವರು ಧಾವಿಸುತ್ತಿದ್ದರು.

ಒಂದು ಸಲ ಹೀಗಾಯಿತು. ಒಬ್ಬ ಬಡ ರೈತನು ಮಾರವಾಡಿಯೊಬ್ಬನ ಬಳಿ ಸಾಲ ತಂದಿದ್ದನು. ಸ್ವಲ್ಪ ದಿನಗಳ ನಂತರ ತಾನು ಪಡೆದ ಸಾಲವನ್ನು ಅವನು ಆ ಮಾರವಾಡಿಗೆ ಕೊಟ್ಟು ಮುಟ್ಟಿಸಿದ್ದನು. ಆದರೆ ಆ ಮಾರವಾಡಿ ಸಾಲ ಮರುಪಾವತಿ ಆದ ಬಗೆಗೆ, ರೈತನಿಗೆ ದಾಖಲೆ ಏನನ್ನೂ ನೀಡಿರಲಿಲ್ಲ. ತನ್ನ ಲೆಕ್ಕದ ಪುಸ್ತಕದಲ್ಲಿ ಸಾಲದ ಬಾಕಿ ಹಾಗೆಯೇ ಇದೆಯೆಂದು ತೋರಿಸಿ ಸಾಲ ವಸೂಲಿಯ ಬಗೆಗೆ, ಆ ರೈತನ ವಿರುದ್ಧ ದಾವಾ ಹೂಡಿದ್ದನು.

ಆ ಬಡ ರೈತ, ವಕೀಲರ ಸಂಘಕ್ಕೆ ಬಂದು ತನ್ನ ಪರವಾಗಿ ವಕಾಲತ್ತು ವಹಿಸಬೇಕೆಂದು ಅನೇಕರನ್ನು ಅಂಗಲಾಚಿ ಬೇಡಿಕೊಂಡ. “ನೀನು ಸಾಲವನ್ನು ಹಿಂತಿರುಗಿಸಿದ ಬಗೆಗೆ ನಿನ್ನ ಬಳಿ ಸಾಕ್ಷಿ ಪುರಾವೆಗಳು ಏನಾದರೂ ಇವೆಯೇ?” ಎಂದು ಅವರೆಲ್ಲರೂ ಅವನನ್ನು ಕೇಳಿದ್ದರು. “ನಾನು ದೇವರ ಪ್ರಮಾಣ ಮಾಡಿ ಹೇಳುತ್ತೇನೆ. ನಮ್ಮ ಹೊಲದ ಸಮೀಪದಲ್ಲಿ ಇರುವ ಬೇವಿನ ಮರದ ಕೆಳಗೆ, ಎಲ್ಲ ಸಾಲ ಚುಕ್ತಾ ಮಾಡಿದ್ದೇನೆ” ಎಂದು ಹೇಳಿದಾಗ, ಅವರೆಲ್ಲರೂ ನಕ್ಕು, “ಹುಚ್ಚಪ್ಪ, ಕೋರ್ಟು, ನಿನ್ನ ದೇವರನ್ನೂ ಕೇಳುವುದಿಲ್ಲ, ನಿನ್ನ ಬೇವಿನ ಮರವನ್ನೂ ಕೇಳುವುದಿಲ್ಲ, ಅದು ಕಾಗದ ಪತ್ರ, ಸಾಕ್ಷಿ, ಪುರಾವೆಗಳನ್ನು ಮಾತ್ರ ನೋಡುತ್ತದೆ” ಎಂದು ಅವನಿಗೆ ಹೇಳಿದ್ದರು.

- Advertisement -

ಆ ಬಡ ರೈತನಿಗೆ ಅವರ ಮಾತನ್ನು ಕೇಳಿ ಆಕಾಶವೇ ಹರಿದು ತಲೆಯ ಮೇಲೆ ಬಿದ್ದಂತಾಯಿತು. ರಕ್ಷಕರು ಯಾರೂ ಇಲ್ಲವೆನ್ನುವ ಅಸಹಾಯ ಸ್ಥಿತಿಯಲ್ಲಿ ಅವನು ತೊಳಲಾಡುತ್ತಿದ್ದ. ತನ್ನ ವಯಸ್ಸಿಗಿಂತಲೂ ಅವನಿಗೆ ಒಮ್ಮೆಲೇ ಹೆಚ್ಚು ವರ್ಷಗಳು ಆದಂತಾಗಿದ್ದವು.
ಅಷ್ಟರಲ್ಲಿ ಹೊಸಮನಿಯವರು ವಕೀಲರ ಸಂಘಕ್ಕೆ ಬಂದರು. ಅವರನ್ನು ಕೇಳಿದರೆ ತನಗೆ ರಕ್ಷಣೆ ಸಿಕ್ಕಬಹುದೆಂದು ಅವನು ಭಾವಿಸಿದ. ಮುಳುಗುವ ಮನುಷ್ಯನು ಬದುಕಬೇಕೆನ್ನುವ ಆಸೆಯಿಂದ ಒಂದು ಹುಲ್ಲು ಕಡ್ಡಿಗಾದರೂ ತೆಕ್ಕೆ ಬೀಳಬೇಕೆನ್ನುತ್ತಾನೆ. ಅವನು ಹೊಸಮನಿಯವರೆದುರು ತನ್ನ ಅಳಲನ್ನು ತೋಡಿಕೊಂಡು, “ಯಪ್ಪಾ, ನೀವು ನನ್ನನ್ನು ಉಳಿಸಿರಿ” ಎಂದು ಬೇಡಿಕೊಂಡ. ಅವರು ವಕೀಲ ಪತ್ರದ ಮೇಲೆ ಅವನ ಸಹಿ ತೆಗೆದುಕೊಂಡರು.
“ಅಲ್ಲ ಸಾರ್, ಅವನ ಬಾಯಿಮಾತಿನ ವಿನಾ ಅವನ ಬಳಿ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ನೀವು ಅವನ ವಕೀಲಿ ಹೇಗೆ ನಡೆಸುತ್ತೀರಿ?” ಎಂದು ವಕೀಲರೊಬ್ಬರು ಹೊಸಮನಿಯವರನ್ನು ಕೇಳಿದರು. “ಅವನು ಬೇವಿನ ಮರದ ಕೆಳಗೆ ಸಾಲ ಹಿಂತಿರುಗಿ ಕೊಟ್ಟಿರುವುದಾಗಿ ಹೇಳುತ್ತಾನೆ. ಅದನ್ನು ಕಂಡವರು ಯಾರಿದ್ದಾರೆ? ಯಾರು ಸಾಕ್ಷಿ ಹೇಳುತ್ತಾರೆ?” ಎಂದು ಇತರೆ ವಕೀಲರು ಹೊಸಮನಿ ಅವರನ್ನು ಪ್ರಶ್ನಿಸಿದರು.
“ಬೇವಿನ ಮರದಿಂದಲೇ ಸಾಕ್ಷಿ ಹೇಳಿಸಿದರಾಯಿತು” ಎಂದು ಹೊಸಮನಿಯವರು ಅವರಿಗೆ ಹೇಳಿದರು. ಅದನ್ನು ಕೇಳಿದ ವಕೀಲರೆಲ್ಲರೂ, ಅವರು ಇಂಥ ಹಾಸ್ಯಾಸ್ಪದ ಕೇಸನ್ನು ಹಿಡಿದು ತಮ್ಮ ಹೆಸರು ಕೆಡಿಸಿಕೊಳ್ಳುವರೆಂದು, ತಮ್ಮ ಮನಸ್ಸಿನಲ್ಲಿಯೇ ಮಿಡುಕಿದರು.

ನ್ಯಾಯಾಧೀಶರು ಸ್ಥಳ ಪರಿಶೀಲನೆಯ ದಿನವನ್ನು ಗೊತ್ತು ಮಾಡಿದರು. ಎತ್ತಿನ ಗಾಡಿ ಕಟ್ಟಿಸಿಕೊಂಡು ಎಲ್ಲರೂ ಆ ಬೇವಿನ ಮರದ ಕಡೆಗೆ ಹೊರಟರು. ನ್ಯಾಯಾಧೀಶರೊಂದಿಗೆ, ಇಬ್ಬರೂ ಪಕ್ಷಗಾರರೂ, ಅವರ ವಕೀಲರೂ ಇದ್ದರು.
ಅವರು ಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ, ಒಂದು ಬೇವಿನ ಮರವನ್ನು ಸಮೀಪಿಸಿದ್ದರು. “ಆ ರೈತ ಹೇಳಿದ ಬೇವಿನ ಮರ ಇದೇ ಅಲ್ಲವೇನು?” ಎಂದು ಹೊಸಮನಿಯವರು ಆ ಮಾರವಾಡಿಯನ್ನು ಕೇಳಿದರು. ಅವರ ಪ್ರಶ್ನೆಗೆ ಆ ಮಾರವಾಡಿಯು “ಇದಲ್ಲ, ಆ ಮರ ಇನ್ನೂ ಮುಂದೆ ಇದೆ” ಎಂದು ಹೇಳಿದ.ಆಗ ಹೊಸಮನಿಯವರು ನ್ಯಾಯಾಧೀಶರಿಗೆ “ಸ್ವಾಮಿ, ನಿಮ್ಮೆದುರು ನನ್ನ ಪಕ್ಷಕಾರನ ಪರವಾಗಿ ನಿವೇದಿಸುವುದು ಇನ್ನೇನೂ ಇಲ್ಲ” ಎಂದು ಹೇಳಿದರು. ಬೇವಿನ ಮರದಿಂದ ಅವರು ಸಾಕ್ಷಿ ಹೇಳಿಸಿದರೆನ್ನುವ ಮಾತು ಜನರ ಬಾಯಲ್ಲಿ ಇಂದೂ ಉಳಿದುಕೊಂಡಿದೆ.

ಅಸಹಾಯಕರಿಗೆ, ಅನಾಥರಿಗೆ ದೇವರೇ ರಕ್ಷಕನೆಂದು ಹೇಳುತ್ತಾರೆ. ಸಂಕಟದಲ್ಲಿ ಸಿಲುಕಿಕೊಂಡವರನ್ನು ಸಂಕಟದಿಂದ ಪಾರು ಮಾಡಲು ದೇವರಂಥ ಒಬ್ಬರು ಸಮಾಜದಲ್ಲಿ ಯಾರಾದರೂ ಇದ್ದೇ ಇರುತ್ತಾರೆ.

- Advertisement -

ಹೇಮಂತ ಚಿನ್ನು
(ಡಾ. ಪಾಟೀಲ ಪುಟ್ಟಪ್ಪನವರ ‘ಪಾಪು ಪ್ರಪಂಚ’ದಿಂದ)
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group