ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಡಿ.ಎಂ.ಜಿ.ಹಳ್ಳಿಯಲ್ಲಿ ದಿ. ೭ ರಂದು ಪ್ರಜ್ನ ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈಸೂರು ರೇಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಜ್ನ ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಗೌರವ ಅಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ಪ್ರಸಾದ್ ಜಿ.ವಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೇತ್ರದಾನ ಮಹಾದಾನ, ದೃಷ್ಟಿಯಿಲ್ಲದವರಿಗೆ ದೃಷ್ಟಿ ನೀಡಿ ಜಗತ್ತನ್ನು ಕಾಣುವಂತೆ ಮಾಡುವುದೆ ಸರ್ವ ಶ್ರೇಷ್ಠವಾದ ಕೆಲಸ. ಇದನ್ನು ನಾವೆಲ್ಲರೂ ಅರಿತು ನಡೆಯಬೇಕು. ಆಕಸ್ಮಿಕವಾಗಿ ಅಪಘಾತದಲ್ಲೋ, ಹೃದಯಘಾತದಲ್ಲೋ ಸಾವಿಗೀಡಾದಾಗ ಸಂಬಂಧಿಕರು ಸತ್ತ ವ್ಯಕ್ತಿಯ ನೇತ್ರವನ್ನು ದಾನ ಮಾಡಿದರೆ ಮತ್ತೊಬ್ಬರ ಬದುಕಿಗೆ ಬೆಳಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಟ್ರಸ್ಟ್ ನ ಉಪಾಧ್ಯಕ್ಷರಾದ ಡಿ.ಬಿ.ಶಂಕರ್ ರವರು ಮಾತನಾಡಿ, ಸಮಾಜದಲ್ಲಿ ಇಂದು ಸ್ವಾರ್ಥ ಪ್ರಪಂಚ ಹೆಚ್ಚಾಗುತ್ತಿದೆ, ಸೇವಾ ಮನೋಭಾವ ಕಡಿಮೆಯಾಗುತ್ತಿದೆ ಕೈಲಾದ ಸಹಾಯ, ಸಹಕಾರವನ್ನು ಸಮಾಜಕ್ಕೆ ನೀಡಬೇಕೆಂದು ಮನವಿ ಮಾಡಿ, ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಮಾದರಿಯಾಗಿ ಬದುಕನ್ನು ನಡೆಸಿದೆವು ಎನ್ನುವುದು ಮುಖ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಮೈಸೂರು ರೇಸ್ ಕ್ಲಬ್‍ನ ಸಂಯೋಜಕರಾದ ರಾಮು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರುಕ್ಮಾಂಗದ, ಗ್ರಾಮ ಲೆಕ್ಕಾಧಿಕಾರಿಗಳಾದ ಸಿದ್ದಪ್ಪಬೆಕ್ಕಣ್ಣನವರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೇತ್ರಾವತಿ, ಮಾಜಿ ಸದಸ್ಯರಾದ ನಾಗರಾಜು, ಜಿ.ಪುಟ್ಟೇಗೌಡ, ಕಾರ್ಯದರ್ಶಿಗಳಾದ ಡಿ.ಸಿ.ಕುಮಾರ್, ಟ್ರಸ್ಟ್ ನ ನಿರ್ದೇಶಕರಾದ ಅನಿಲ್ ವೆರ್ನೆಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 120 ಕ್ಕೂ ಹೆಚ್ಚು ಜನ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗಿಯಾಗಿದ್ದರು. 35 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ಉಚಿತವಾಗಿ ಕನ್ನಡಕವನ್ನು ನೀಡಲಾಯಿತು.