ನೂತನ ಅನುಭವ ಮಂಟಪ ; ಮಾರುಕಟ್ಟೆ ದರ ನೀಡಿ ಭೂ ಖರೀದಿಗೆ ಖಂಡ್ರೆ ಸಲಹೆ

Must Read

ಬೀದರ – ಬಸವಕಲ್ಯಾಣದ ನೂತನ ಆಧುನಿಕ ಅನುಭವ ಮಂಟಪ ತ್ವರಿತವಾಗಿ ಸಾಕಾರವಾಗಬೇಕಾದರೆ ಅದಕ್ಕೆ ಅಗತ್ಯವಾದ 69 ಎಕರೆ ಭೂಮಿಯನ್ನು ಮಾರುಕಟ್ಟೆ ದರ ನೀಡಿ ಖರೀದಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಸಲಹೆ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿಂದು ಹಲವು ವರ್ಷಗಳ ಬಳಿಕ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಭಾಗಿಯಾದ ಅವರು, ಪ್ರಸ್ತುತ ಸರ್ಕಾರದ ಬಳಿ 20 ಎಕರೆ ಮತ್ತು ದಾನವಾಗಿ ಬಂದಿರುವ 11 ಎಕರೆ ಸೇರಿ 31 ಎಕರೆ ಭೂಮಿ ಮಾತ್ರ ಇದ್ದು, ಉಳಿದ 69 ಎಕರೆ ಭೂ ಸ್ವಾಧೀನ ತುರ್ತಾಗಿ ಆಗಬೇಕಾಗಿರುತ್ತದೆ. ಪ್ರಸಕ್ತ ನಿಯಮಾವಳಿ ರೀತ್ಯ ಭೂಸ್ವಾಧೀನ ಪ್ರಕ್ರಿಯೆ ನಡೆದರೆ, ಅದು ಮುಗಿಯಲು ಕನಿಷ್ಠ 8-10 ತಿಂಗಳಾದರೂ ಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಮತ್ತು ಸರ್ಕಾರದ ನೂತನ ಕಾಯಿದೆಯ ರೀತ್ಯ “ಕನ್ಸೆಂಟ್ ಅವಾರ್ಡ್’ನಂತೆ ಭೂಮಿ ಪಡೆಯಬೇಕಾಗುತ್ತದೆ. ಹೀಗಾಗಿ ಭೂ ಮಾಲೀಕರ ಮನವೊಲಿಸಿ ಮಾರುಕಟ್ಟೆ ದರ ನೀಡಿ ಖರೀದಿಸುವುದು ಸೂಕ್ತ ಎಂದು ಸಲಹೆ ಮಾಡಿದರು.

ಆಧುನಿಕ ಅನುಭವ ಮಂಟಪ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ಟೆಂಡರ್ ಕರೆದಿರುವ ಕುರಿತಂತೆ ಮಾತನಾಡಿದ ಅವರು, ಭೂಸ್ವಾಧೀನ ಆಗದೆ ವಿಸ್ತೃತ ಯೋಜನಾ ವರದಿ-ಡಿಪಿಆರ್ ಅನುಮೋದನೆ ಅಪೂರ್ಣವಾಗುತ್ತದೆ. ಹೀಗಾಗಿ ಯಾವುದೇ ಅಡೆತಡೆ, ವಿಳಂಬ ಇಲ್ಲದೆ ಆಧುನಿಕ ಅನುಭವ ಮಂಟಪ ಸಾಕಾರವಾಗಲು ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ತಕ್ಷಣವೇ ಡಿಪಿಆರ್ ಅನುಮೋದನೆಗೆ ತಜ್ಞರ/ಪರಿಣತರ ಸಮಿತಿಯನ್ನು ರಚಿಸಬೇಕು ಎಂದು ಸಲಹೆ ಮಾಡಿದರು
ಬಸವಕಲ್ಯಾಣವಷ್ಟೇ ಅಲ್ಲದೆ ಬೀದರ್ ಜಿಲ್ಲೆಯ ಅನೇಕ ಕಡೆಗಳಲ್ಲಿ ಅಣ್ಣ ಬಸವಣ್ಣನರು ಮತ್ತು ಹಲವು ಶಿವಶರಣರ ಪವಿತ್ರ ತಾಣಗಳಿದ್ದು, ಇವುಗಳ ಅಭಿವೃದ್ಧಿಯೂ ಆಗಬೇಕಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರನ್ನೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸದಸ್ಯರನ್ನಾಗಿ ನಾಮಾಂಕನ ಮಾಡಿ ಎಲ್ಲ ಸಭೆಗೂ ಆಹ್ವಾನಿಸುವಂತೆ ಮನವಿ ಮಾಡಿದರು.

ಬಸವಕಲ್ಯಾಣ ಜಗತ್ತಿಗೇ ಸಂಸತ್ತಿನ ಪರಿಕಲ್ಪನೆ ಕಟ್ಟಿಕೊಟ್ಟ ಪವಿತ್ರ ತಾಣವಾಗಿದ್ದು, ಬಸವಕಲ್ಯಾಣವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಪ್ರವಾಸಿತಾಣದಂತೆ ಅಭಿವೃದ್ಧಿಪಡಿಸುವ ಅಗತ್ಯವನ್ನೂ ಪ್ರತಿಪಾದಿಸಿ, ಜಿಲ್ಲೆಯ ಪವಿತ್ರ ಶರಣ ತಾಣಗಳ ಅಭಿವೃದ್ಧಿಗೂ ಸಲಹೆ ಮಾಡಿದರು.

ಇದರ ಜೊತೆಗೆ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಶರಣ ಹಿರೇಮಠ್ ಮತ್ತು ಶ್ರೀ ಶಿವಕುಮಾರ್ ಇವರಿಬ್ಬರೂ ಕೋವಿಡ್ ನಿಂದ ಮೃತಪಟ್ಟಿದ್ದು, ಇವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ನಾನು ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ತಮ್ಮ ಎಲ್ಲ ಸಲಹೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹಾರ ನೀಡಲೂ ತಾತ್ವಿಕ ಸಮ್ಮತಿ ನೀಡಿದರು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group