ಹೊಸ ಪುಸ್ತಕ ಓದು: ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಬೆಳಗಾವಿ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ

ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ

ಲೇಖಕರು: ಡಾ. ರಾಜಶೇಖರ ಇಚ್ಚಂಗಿ

ಪ್ರಕಾಶಕರು: ನಿವೇದಿತಾ ಪ್ರಕಾಶನ, ಬೆಂಗಳೂರು, ೨೦೨೧, ಬೆಲೆ : ರೂ. ೨೫೦

- Advertisement -

ಮೊ: ೮೭೬೨೪೬೭೦೯೫


ಬೆಳಗಾವಿ ಜಿಲ್ಲೆಯ ಬಹುಶ್ರುತ ವಿದ್ವಾಂಸರಾದ ಡಾ. ರಾಜಶೇಖರ ಇಚ್ಚಂಗಿ ಅವರು ಅಧ್ಯಯನ-ಅಧ್ಯಾಪನಗಳ ಜೊತೆಗೆ ಸಾಹಿತ್ಯ ಸಂಶೋಧನೆ ವಿಮರ್ಶೆ ಮೊದಲಾದ ಕ್ಷೇತ್ರಗಳಲ್ಲಿ ದುಡಿದವರು. ‘ಪಾರ್ಶ್ವಪಂಡಿತನ ಪಾರ್ಶ್ವನಾಥನ ಪುರಾಣ : ಒಂದು ಅಧ್ಯಯನ’ ಎಂಬ ಪಿಎಚ್.ಡಿ. ಸಂಶೋಧನ ಪ್ರಬಂಧದ ಮೂಲಕ ನಾಡಿನ ತುಂಬ ಮನೆಮಾತಾಗಿದ್ದ ಡಾ. ಇಚ್ಚಂಗಿ ಅವರು ನಿವೃತ್ತಿಯ ನಂತರವೂ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಅಭಿನಂದನೀಯ.

ಹೊಸ ವರ್ಷದ ಹೊಸ್ತಿಲಲ್ಲಿ ಡಾ. ರಾಜಶೇಖರ ಇಚ್ಚಂಗಿ ಅವರು ಪ್ರಕಟಿಸಿದ ‘ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ’ ಎಂಬ ಕೃತಿ ಹಲವು ದೃಷ್ಟಿಗಳಿಂದ ನಮ್ಮ ಗಮನ ಸೆಳೆಯುತ್ತದೆ. ೧೫ ಸಂಶೋಧನಾತ್ಮಕ ಲೇಖನಗಳಿಂದ ಕೂಡಿದ ಈ ಕೃತಿ ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುತ್ತದೆ. ಅನೇಕ ಹೊಸ ವಿಚಾರಗಳನ್ನು ತಿಳಿಸುತ್ತದೆ. ಬೆಳಗಾವಿ ಜಿಲ್ಲೆಯ ಸಾಹಿತ್ಯ ಸಂಸ್ಕೃತಿಗಳನ್ನು ಅಧ್ಯಯನ ಮಾಡುವ ಯಾರೇ ಆಗಲಿ, ಡಾ. ಇಚ್ಚಂಗಿಯವರ ಈ ಕೃತಿಯನ್ನು ನೋಡದೆ ಮುಂದೆ ಹೋಗಲಾರರು. ಅಷ್ಟರ ಮಟ್ಟಿಗೆ ಇದೊಂದು ಅತ್ಯುತ್ತಮ ಮಹತ್ವದ ಆಕರಕೃತಿಯಾಗಿ ಹೊರಹೊಮ್ಮಿದೆ.

‘ಕವಿಳಾಸಪುರ ಮತ್ತು ಬಸವಣ್ಣನವರ ವಂಶಾವಳಿ ಹೊಸ ಶೋಧ’ ಈ ಕೃತಿಯ ಮೊದಲ ಲೇಖನ. ಬಸವಣ್ಣನವರನ್ನು ಪುರಾಣ ಪುರುಷರೆಂದು ಭಾವಿಸಿದ್ದ ಕಾಲದಲ್ಲಿ ಅರ್ಜುನವಾಡದ ಶಾಸನ ಅವರೊಬ್ಬ ಐತಿಹಾಸಿಕ ವ್ಯಕ್ತಿಯೆಂಬುದನ್ನು ಸಿದ್ಧಪಡಿಸಿತು. ಈ ಶಾಸನವನ್ನು ಈ ಪೂರ್ವದಲ್ಲಿ ಡಾ. ಹಳಕಟ್ಟಿ, ಡಾ. ನಂದೀಮಠ, ಮಧುರಚೆನ್ನ, ಡಾ. ರಾಜಪುರೋಹಿತ, ಡಾ. ಕಲಬುರ್ಗಿ, ಡಾ. ಜಿ. ಎಸ್. ದೀಕ್ಷಿತ, ಡಾ. ಪಿ. ಬಿ. ದೇಸಾಯಿ, ಡಾ. ಬಿ. ಆರ್. ಹಿರೇಮಠ ಮೊದಲಾದ ವಿದ್ವಾಂಸರು ಪರಿಶೀಲಿಸಿ, ಹೊಸ ವಿಚಾರಗಳನ್ನು ದಾಖಲಿಸಿದ್ದರು. ಈ ಎಲ್ಲ ಪೂರ್ವಸೂರಿಗಳ ಆಕರಗಳನ್ನು ಪರಿಶೀಲಿಸಿ, ಬಸವಣ್ಣನವರ ವಂಶಸ್ಥರ ಊರು ಕವಿಳಾಸಪುರ ಎಂಬುದನ್ನು ಇನ್ನಷ್ಟು ಗಟ್ಟಿಗೊಳಿಸಿದ ಶ್ರೇಯಸ್ಸು ಡಾ. ಇಚ್ಚಂಗಿ ಅವರಿಗೆ ಸಲ್ಲುತ್ತದೆ. ಶಾಸನಪಠ್ಯವನ್ನು ಕೊಡುವುದರ ಜೊತೆಗೆ ಅದರ ಮಹತ್ವವನ್ನು ಅತ್ಯಂತ ವಸ್ತುನಿಷ್ಠವಾಗಿ ದಾಖಲಿಸಿರುವುದು ಡಾ. ಇಚ್ಚಂಗಿ ಅವರ ತಲಸ್ಪರ್ಶಿಯಾದ ಅಧ್ಯಯನಕ್ಕೆ ಸಾಕ್ಷಿಯಾಗಿದೆ.

‘ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಗಳು’ ಎಂಬ ಲೇಖನದಲ್ಲಿ ಬೆಳಗಾವಿ ಜಿಲ್ಲೆಯ ಅತ್ಯಂತ ಮಹತ್ವದ ಕ್ಷೇತ್ರಗಳ ಇತಿಹಾಸ ಭೂಗೋಲಗಳ ಜೊತೆಗೆ ಅಲ್ಲಿನ ಸಾಂಸ್ಕೃತಿಕ ವೈವಿಧ್ಯತೆ ಏನು ಎಂಬುದನ್ನು ದಾಖಲಿಸಿದ್ದಾರೆ. ‘ಬೆಳಗಾವಿ ಜಿಲ್ಲೆಯ ಅಪ್ರಕಟಿತ ಶಾಸನಗಳು’, ‘ಬೆಳಗಾವಿ ಜಿಲ್ಲೆಯ ಪ್ರಾಚೀನ ಹಸ್ತಪ್ರತಿಗಳ ಶೋಧ’ ಈ ಎರಡು ಲೇಖನಗಳು ಡಾ. ಇಚ್ಚಂಗಿ ಅವರ ಕ್ಷೇತ್ರಕಾರ್ಯ ಅಧ್ಯಯನದ ಫಲಗಳಾಗಿವೆ. ಇಡೀ ಜಿಲ್ಲೆಯನ್ನು ಸುತ್ತಿ ಕ್ಷೇತ್ರಕಾರ್ಯ ಮಾಡಿ, ಶಾಸನಗಳ ಕುರಿತಾಗಿ, ಹಸ್ತಪ್ರತಿಗಳ ಕುರಿತಾಗಿ ನಿರ್ದಿಷ್ಟ ಮಾಹಿತಿಯನ್ನು ಕೊಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಸಂಸ್ಥಾನಗಳು ಆಗಿ ಹೋಗಿವೆ. ಅವುಗಳಲ್ಲಿ ಸ್ಮರಣೀಯವಾಗಿ ಉಳಿದ ಸಂಸ್ಥಾನಗಳೆಂದರೆ ವಂಟಮುರಿ, ಬೆಳವಡಿ ಮತ್ತು ಕಿತ್ತೂರು ಸಂಸ್ಥಾನಗಳು. ಈ ಮೂರೂ ಸಂಸ್ಥಾನಗಳಿಗೆ ಸಂಬಂಧಿಸಿದ ಸಂಶೋಧನಾತ್ಮಕ ಲೇಖನಗಳು ಈ ಕೃತಿಯಲ್ಲಿವೆ. ವಂಟಮುರಿ ಸಂಸ್ಥಾನದ ರಾಜಾಲಖಮಗೌಡರು, ಬೆಳವಡಿ ಮಲ್ಲಮ್ಮರಾಣಿ ಕುರಿತು ಹೊಸ ದೃಷ್ಟಿಯ ಲೇಖನಗಳು ಇಲ್ಲಿವೆ. ಲಾವಣಿ ಸಾಹಿತ್ಯದಲ್ಲಿ ಕಿತ್ತೂರು ಸಂಸ್ಥಾನ ಎಂಬ ಲೇಖನದಲ್ಲಿ ಕಿತ್ತೂರು ಸಂಸ್ಥಾನ ಪತನಾನಂತರ ಜನಪದ ಕವಿಗಳು ಸೃಷ್ಟಿಸಿದ ಲಾವಣಿಗಳಲ್ಲಿ ಮೂಡಿಬಂದ ಕಿತ್ತೂರು ಗತವೈಭವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಡಾ. ಇಚ್ಚಂಗಿಯವರ ಶ್ರಮ ಸಾರ್ಥಕವಾಗಿದೆ.

ಬೆಳಗಾವಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯವಾದ ಸಾಧನೆ ಮಾಡಿದ ಡಾ. ಶಿ. ಚೆ. ನಂದೀಮಠ, ಪ್ರೊ. ಶಿ.ಶಿ.ಬಸವನಾಳ, ಡಾ. ಎಂ. ಅಕಬರ ಅಲಿ ಅವರ ಕುರಿತು ಪರಿಚಯಾತ್ಮಕ ಲೇಖನಗಳು ಗಮನ ಸೆಳೆಯುತ್ತವೆ. ‘ಕನ್ನಡ ಸಾಹಿತ್ಯದಲ್ಲಿ ಹುಕ್ಕೇರಿ ತಾಲೂಕಿನ ಹೆಜ್ಜೆಗಳು’, ‘ವಿದ್ವತ್ ಲೋಕದ ಸಾಧಕ ಪಂ. ಸದಾಶಿವ ಶಾಸ್ತ್ರಿಗಳು’ ಎಂಬ ಲೇಖನಗಳು ಹುಕ್ಕೇರಿ ತಾಲೂಕಿನ ಸಾಹಿತ್ಯ ಸಾಧನೆಯನ್ನು ಸಮಗ್ರವಾಗಿ ದಾಖಲಿಸುತ್ತವೆ.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರ ೭೦ ವರ್ಷಗಳಿಂದ ಬೆಳಗಾವಿ ಕುರಿತು ಮಹಾರಾಷ್ಟ್ರದ ಜನ ಪದೇ ಪದೇ ವಿವಾದವನ್ನುಂಟು ಮಾಡುತ್ತಿರುವುದು ಸರ್ವರಿಗೂ ವೇದ್ಯವಾದ ಸಂಗತಿ. ಅದಕ್ಕಾಗಿ ಡಾ. ಇಚ್ಚಂಗಿ ಅವರು ‘ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ’ ಎಂಬ ಮಹತ್ವದ ಸಂಶೋಧನಾತ್ಮಕ ಲೇಖನವನ್ನು ಈ ಕೃತಿಯಲ್ಲಿ ಬರೆದಿರುವುದು ತುಂಬ ಔಚಿತ್ಯಪೂರ್ಣವಾಗಿದೆ.

ಆಯ್ದುಕೊಂಡಿರುವ ವಿಷಯದ ಬಗ್ಗೆ ಲೇಖಕರಿಗಿರುವ ಖಚಿತವಾದ ಜ್ಞಾನ, ಅಧ್ಯಯನದ ಹರವು, ಸ್ಪಷ್ಟ ಹಾಗು ನೇರವಾದ ನಿರೂಪಣೆಗಳಿಂದ ಇದು ಒಂದು ಉತ್ತಮ ಸಂಶೋಧನ ಕೃತಿಯಾಗಿದೆ. ಅವರ ಅಧ್ಯಯನ ವ್ಯಾಪ್ತಿ ಕ್ರಿಯಾಶೀಲತೆ, ಬರವಣಿಗೆಯ ಸಾಮರ್ಥ್ಯಕ್ಕೆ ಬೆರಗಾಗಬೇಕು. ಅವರ ಆಳವಾದ ಅಧ್ಯಯನ, ವಿಪುಲ ಮಾಹಿತಿ ಸಂಗ್ರಹ ಕಾರಣವಾಗಿ ಈ ಕೃತಿ ಮೈದುಂಬಿ ನಿಂತಿದೆ.

ಪ್ರತಿಭೆ ಮತ್ತು ಪಾಂಡಿತ್ಯಗಳ ಸಂಗಮವಾಗಿರುವ ಡಾ. ಇಚ್ಚಂಗಿಯವರು ಕನ್ನಡ ಸಾರಸ್ವತ ಪ್ರಪಂಚಕ್ಕೆ ಸಲ್ಲಿಸಿದ ವಿಶಿಷ್ಟ ಕಾಣಿಕೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ ಸ್ಮರಣೀಯ. ಅವರು ಪ್ರಾಧ್ಯಾಪಕ ಸಾಹಿತಿ ಎನ್ನುವ ಸಾಂಸ್ಕೃತಿಕ ಧ್ವನಿ ತರಂಗಕ್ಕೆ ಸಂವೇದನಾಶೀಲರಾದವರು. ತಮ್ಮ ಸಾಮರಸ್ಯ, ಸದ್ಭಾವ ಹಾಗು ಸಮದರ್ಶಿ ಗುಣದಿಂದ ಆತ್ಮೀಯ ವಲಯದಲ್ಲಿ ‘ಸಮನ್ವಯಿ’ ‘ಅಜಾತ ಶತ್ರು’ ಎಂದೇ ಹೆಸರಾಗಿದ್ದಾರೆ. ಡಾ. ಇಚ್ಚಂಗಿ ಅವರ ಈ ಕೃತಿಯಿಂದ ಬೆಳಗಾವಿಯ ಸಾಂಸ್ಕೃತಿಕ ಚರಿತ್ರೆಯ ಮತ್ತೊಂದು ಆಯಾಮವನ್ನು ಗುರುತಿಸಬಹುದು. ಇಂಥ ಮಹತ್ವದ ಕೃತಿಯನ್ನು ರಚಿಸಿದ ಡಾ. ರಾಜಶೇಖರ ಇಚ್ಚಂಗಿ ಅವರು ಅಭಿನಂದನೀಯರು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!