ದಿಕ್ಕಾರ… ಧಿಕ್ಕಾರ…
ಹಚ್ಚಬೇಡಿ ಬೆಂಕಿಯ ಮಾನವೀಯತೆಗೆ,
ಜಾತಿ,ಧರ್ಮ, ಭಾಷೆಯ ಹೆಸರಲಿ
ಹಚ್ಚಬೇಡಿ ಬೆಂಕಿಯ
ಸಹೋದರರ ನಡುವೆ,
ಒಂದೇ ದೇಶ, ಒಂದೇ ರಕ್ತ,
ಒಂದೇ ಮಾನವೀಯ ಸದ್ಗುಣ,
ಒಂದೇ ಮಾನವ ಜನ್ಮ ಇರುವ ಈ ಮಾನವ ಜನ್ಮಕೆ,
ಜಾತಿ,ಧರ್ಮ, ಭಾಷೆ,ಪ್ರಾದೇಶಿಕತೆ ಹೆಸರಲಿ
ಕೊಳ್ಳಿ ಇಡುತ್ತಿರುವ ನಿಮಗೆ
ಸಾವಿರ,ಸಾವಿರ ಧಿಕ್ಕಾರ..
ಇಟ್ಟು ಬಿಡಿ ಕೊಳ್ಳಿಯ
ನಿಮ್ಮ ಸಣ್ಣ ತನಕೆ,
ನಿಮ್ಮ ಮೃಗೀಯ ವರ್ತನೆಗೆ,
ಮಾನವ-ಮಾನವರ ನಡುವೆ
ಭಾಷೆಯ ಹೆಸರಲಿ ಬಿರುಕು ಮೂಡಿಸುವ
ನಿಮ್ಮ ರಾಕ್ಷಸ ತನಕೆ,ಮೃಗೀಯ ವರ್ತನೆಗೆ…
ನೂರು ಜಾತಿಗಳಿದ್ದರೂ,
ಹತ್ತಾರು ಧರ್ಮಗಳಿದ್ದರೂ,
ಅಸಂಖ್ಯಾತ ಭಾಷೆಗಳಿದ್ದರೂ
ನಮ್ಮ ತಾಯಿ ಭಾರತಮಾತೆ ಒಬ್ಬಳೇ..
ಭಾರತಮಾತೆ ಎಲ್ಲರಿಗೂ ಭಾಗ್ಯವಿಧಾತೆ ,
ಅವಳಿಗಿಲ್ಲ ಜಾತಿ,ಧರ್ಮ, ಭಾಷೆಗಳ ಬೇಧ !!
ಅಧಿಕಾರ ಹಿಡಿಯಲು ಕುತಂತ್ರ ನಡೆಸುವ ನಿಮಗೆ ಬೇಕು ,
ಜಾತಿ ,ಧರ್ಮ,ಭಾಷೆಗಳ ಕುತಂತ್ರ ???
ಕುವೆಂಪು ಅವರ ವಿಶ್ವಮಾನವ ತತ್ವವ
ಜಗಕೆ ಸಾರಿದ ಹೆಮ್ಮೆ ನಮ್ಮದು
ನಿಮ್ಮ ಸಣ್ಣತನಕೆ ಧಿಕ್ಕಾರ..
ಭಾಷೆ ಹೆಸರಲಿ ಶಾಂತಿ ಕದಡುವ,
ನಿಮ್ಮ ರಾಕ್ಷಸ ತನಕೆ ನಮ್ಮ ಧಿಕ್ಕಾರ..
ಡಾ.ಭೇರ್ಯ ರಾಮಕುಮಾರ್
ಹಿರಿಯ ಸಾಹಿತಿಗಳು, ಪತ್ರಕರ್ತರು
ಮೈಸೂರು