ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ
ಜಾತಿ ಗೋಡೆಯ ಮೇಲೆ ಪ್ರೀತಿ ಹಣತೆಯ ಹಚ್ಚಿ ಎಣ್ಣೆಯಲ್ಲಿ ನೀರು ಬೆರೆಸಿದವರ ಮೇಲೆ ಮಣ್ಣು ತೂರುತ್ತೇವೆ ನಾವು, ಮಣ್ಣು ತೂರುತ್ತೇವೆ.
ಗಡಸು ಧ್ವನಿಯಲ್ಲಿ ಗಂಡಸಾಗಿ ಗುಡಿಸಲಿನ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡವರ ಮೇಲೆ ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ.
ಪಡಿ ಅಕ್ಕಿ, ಅಚ್ಚು ಬೆಲ್ಲದ ಬದಲಾಗಿ ರೂಪಾಲಿಯ ರೂಪಕ್ಕೆ ರೂಪಾಯಿ ಬೇಡಿಕೆ ಇಟ್ಟವರ ಮೇಲೆ ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ..
ಕಚ್ಚೆಯಲ್ಲಿನ ತುರಿಕೆ ನಿವಾರಿಸಿಕೊಂಡು ಲಜ್ಜೆ ಬಿಟ್ಟು ಬಡಪಾಯಿಯ ಮಾನ ಹರಾಜಿಗಿಟ್ಟವರ ಮೇಲೆ ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ.
ಸ್ವಾರ್ಥದ ಅಮಲಿನಲ್ಲಿ ಅಟ್ಟಹಾಸ ಮೆರೆದು ದಮನಿತರನ್ನು ಉಯ್ಯಾಲೆಯ ಸರಪಳಿ ಮಾಡಿಕೊಂಡವರ ಮೇಲೆ ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ..
ರಟ್ಟೆ ಮುರಿದು ಬಟ್ಟೆ ಹರಿದು ಕಾಲ ಸರಿಸಿ ದುಡಿದು ಉಣ್ಣುವವರ ಹೊಟ್ಟೆಯ ಮೇಲೆ ಕಾಲಿಟ್ಟವರ ಮೇಲೆ ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ
ಕನಸುಗಳು ಹಗಲಾಗುವ ಮುನ್ನವೇ ಬಾವಲಿಗಳಾಗಿ ಇರುಳಾದವರ ಮೇಲೆ ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ.
ಅನುಪಮ. ಪಿ
ಶಿಕ್ಷಕಿ, ಸಿಂದಗಿ.
ಸಮಸಮಾಜ ನಿರ್ಮಿಸುವ ಕನಸಿನೊಂದಿಗಿನ ದಮನಿತರ ದ್ವನಿಯಾಗುವಲ್ಲಿ ಕವನ ಯಶಸ್ವಿಯಾಗಿದೆ.ಅಭಿನಂದನೆಗಳು🙏🙏