ವಕ್ಫ್ ಬೋರ್ಡ್ ನಿಂದ ಸರ್ಕಾರಕ್ಕೆ, ಮುಸ್ಲಿಮರಿಗೆ ಏನೂ ಪ್ರಯೋಜನವಿಲ್ಲ – ಈರಣ್ಣ ಕಡಾಡಿ

0
17

ಮೂಡಲಗಿ: ದೇಶದಲ್ಲಿ ಅನೇಕ ದೇವಸ್ಥಾನಗಳು ಕೋಟ್ಯಂತರ ರೂಪಾಯಿಗಳ ವರಮಾನ ಹೊಂದಿವೆ. ಅವು ಸರ್ಕಾರಕ್ಕೂ ಕೂಡಾ ಟ್ಯಾಕ್ಸ್ ಮೂಲಕ ಲಾಭವನ್ನು ತಂದು ಕೊಡುತ್ತಿವೆ ಮತ್ತು ಇಂತಹ ದೇವಸ್ಥಾನಗಳು ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸೇವಾ ಕಾರ್ಯಗಳನ್ನು ಮಾಡುತ್ತಿವೆ. ಆದರೆ ದೇಶದ ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆಯ ನಂತರ ಅತಿ ಹೆಚ್ಚು ಜಮೀನು ಹೊಂದಿರುವ ಅಂದರೆ ಸುಮಾರು 9.40 ಲಕ್ಷ ಎಕರೆ ಪ್ರದೇಶ ಜಮೀನು ಹೊಂದಿರುವ ವಕ್ಪ್ ಬೋರ್ಡ ಬಡ ಮುಸ್ಲಿಮರಿಗಾಗಿ ಈ ರೀತಿಯಾದ ಯಾವುದೇ ಸೇವಾ ಯೋಜನೆಗಳನ್ನು ಮಾಡಿಲ್ಲ. ಹೀಗಾಗಿ ಮುಸ್ಲಿಂ ಸಮುದಾಯದಲ್ಲಿರುವ ವಿಧವಾ ಮಹಿಳೆಯರು, ನಿರ್ಗತಿಕರು ಮತ್ತು ಬಡ ಮುಸ್ಲಿಮರಿಗೆ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಪ್ ಮಸೂದೆಗಳನ್ನು ತಿದ್ದುಪಡಿ ಮಾಡಲಾಗಿದೆ ಆದರೆ ವಿರೋಧಿಗಳು ಇಲ್ಲೂ ಕೂಡಾ ರಾಜಕೀಯ ಬೆರೆಸುವ ಕೆಲಸವನ್ನು ಮಾಡುತ್ತಿರುವ ಕಾರಣ ದೇಶದ ಪ್ರಜ್ಞಾವಂತ ಜನ ಇದನ್ನು ಅರ್ಥ ಮಾಡಿಕೊಂಡು ಮುಂದುವರೆಯಬೇಕಾದ ಅಗತ್ಯ ಇದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಬಸಳಿಗುಂದಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ತದನಂತರ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಡಿ 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಕ್ಪ್ ಹೊಂದಿರುವಂತಹ ಜಮೀನನ್ನು ಬೆರಳೆಣಿಕೆಯ ಕೆಲ ರಾಜಕೀಯ ಮುಖಂಡರು ತಮ್ಮದಾಗಿ ಮಾಡಿಕೊಂಡು ಅದರಿಂದ ಬಡ ಮುಸ್ಲಿಂಗೆ ಯಾವುದೇ ಸಹಾಯ, ಸೌಲತ್ತನ್ನು ನೀಡುತ್ತಿಲ್ಲ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಅಂತಹ ಬಡ ಮುಸ್ಲಿಂ ಜನರ ಹಿತಕ್ಕಾಗಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಒಂದು ವೇಳೆ ಇಲ್ಲೂ ಲೋಪದೊಷಗಳು ಉಂಟಾಗಿದ್ದರೆ ಮತ್ತೇ ಈ ಕಾನೂನನ್ನು ತಿದ್ದುಪಡೆ ಮಾಡಲಿಕ್ಕೆ ಸಂಸತ್ತಿನಲ್ಲಿ ಅವಕಾಶವಿರುತ್ತದೆ. ಆದ್ದರಿಂದ ಬಡ ಮುಸ್ಲಿಂ ಸಮಾಜ ತಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ವಿರುದ್ದ ಸಮುದಾಯವನ್ನು ಎತ್ತಿಕಟ್ಟುತ್ತಿರುವ ಜನರ ಬಗ್ಗೆ ಜಾಗೃತರಾಗಿರಬೇಕು ಮತ್ತು ಅವರಿಂದ ದೂರವಿರಬೇಕಾಗಿ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದರು.

ಕರಿಸಿದ್ದೇಶ್ವರ ದೇವಸ್ಥಾನವನ್ನು ಗ್ರಾಮದ ಎಲ್ಲ ಜನರು ಸೇರಿ ಅಭಿವೃದ್ದಿ ಮಾಡಿದ್ದೀರಿ. ಗ್ರಾಮದ ಜನರ ಒಕ್ಕಟನ್ನು ಹಾಗೂ ದೇವರ ಮೇಲಿರುವ ನಂಬಿಕೆಯನ್ನು ಮತ್ತು ಧರ್ಮ ಆಚರಣೆಯನ್ನು ಸಂಸದರು ಮುಕ್ತಕಂಠದಿಂದ ಹೊಗಳಿದರು.

ಬೆಳಗಾವಿ ಜಿಲ್ಲೆಯ ಹಲವಾರು ಗ್ರಾಮಗಳಿಗೆ ಈಗಾಗಲೇ ಸಂಸದರ ನಿಧಿಯಿಂದ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಅದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಸಫಲರಾಗಲು ಎಲ್ಲರೂ ಸಹಕಾರ ನೀಡಬೇಕಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಹೊಸದುರ್ಗ ಶ್ರೀ ಭಗೀರಥ ಪೀಠದ ಜಗದ್ಗುರು ಡಾ. ಪೂಜ್ಯ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಹಾಗೂ ಕೌಲಗುಡ್ಡ ಸಿದ್ದಸಿರಿ ಸಿದ್ದಾಶ್ರಮದ ಪೂಜ್ಯ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಜಿ.ಪಂ ಸದಸ್ಯ ಮಾರುತಿ ತೋಳಮರಡಿ, ಗ್ರಾಮದ ಹಿರಿಯರಾದ ಸಿದ್ದಪ್ಪ ವಾಲಿಕಾರ, ವಿಠ್ಠಲ ಮಡ್ಡೆಪ್ಪನ್ನವರ, ಮನೋಹರ ಗಡಾದ, ಗ್ರಾ.ಪಂ ಉಪಾಧ್ಯಕ್ಷ ಸಿದ್ರಾಮ ಆನೆಗೌಡರ, ಸದಸ್ಯರಾದ ರತ್ನವ್ವಾ ಕುರಬನ್ನವರ, ಲಕ್ಕಪ್ಪ ಪಾಟೀಲ, ರಾಯಪ್ಪ ವಾಲಿಕಾರ, ಪ್ರಮುಖರಾದ ಕರೆಪ್ಪ ಮಡ್ಡೆಪ್ಪನ್ನವರ, ಸಿದ್ದಪ್ಪ ಕುರಬನ್ನವರ, ಹಾಲಪ್ಪ ವಾಲಿಕಾರ, ನಾಗಪ್ಪ ಕುರಬನ್ನವರ, ಗಂಗಪ್ಪ ನಡುವಿನಮನಿ, ತುಕಾರಾಮ ಪಾಟೀಲ, ಮುರಸಿದ್ದ ಮಡ್ಡಪ್ಪನವರ, ಶ್ರೀಶೈಲ ಪೂಜೇರಿ, ಬಸವರಾಜ ಗಾಡವಿ, ದಶರಥ ಪಾಟೀಲ, ಯಮನಪ್ಪ ಬಿಲಕುಂದಿ, ಲಗಮಣ್ಣ ಕುಳ್ಳೂರ, ಯಮನಪ್ಪ ಬಾಗಾಯಿ ಸೇರಿದಂತೆ ಸ್ಥಳೀಯ ಮುಖಂಡರು, ಸುತ್ತಮುಲಿನ ಗ್ರಾಮಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here