spot_img
spot_img

ಟಿವಿಯ ಠೀವಿ -ಅಂದು ಇಂದು

Must Read

- Advertisement -

ನಾನು ಆಗಿನ್ನೂ ಭೂಮಿ ಬಿಟ್ಟು ಛೋಟು ಗೇಣು ಎದ್ದಿದ್ದಿಲ್ಲ ಆಗಿನ ಮಾತಿದು ಅಲ್ಲಲ್ಲ ಕತೆಯಿದು. ರೇಡಿಯೋನ ಕಿವಿಗಂಟಿಸಿಕೊಂಡು ಅದರಾಗ ಬರೋ ನಾಟಕ ಹಾಡು ಬಯಲಾಟ ದೊಡ್ಡಾಟ ಸುದ್ದಿ ಕೇಳಕೋತ ಕೆಲಸ ಮಾಡೋ ಕಾಲ ಅದು. ರೇಡಿಯೋ ಕೇಳಿ ನನ್ನಜ್ಜ; ‘ಅಲ್ಲ ಏನು ಕಾಲ ಬಂತು ಆಂತೇನಿ ಅಲ್ಲಿ ಎಲ್ಲೋ ಆ ಅಂತ ಬಾಯಿ ತೆಗೆದರ ಇಲ್ಲಿ ಆ ಅಂತ ಕೇಳುತ್ತ.

ತಂತಿ ಇಲ್ಲ ತಗಡಿಲ್ಲ ಎಂಥ ವಿಚಿತ್ರ ಅಂತೇನಿ ‘ ಅಂತಿದ್ದ. ಅಂಥದ್ರೊಳಗ ಕಣ್ಣು ಕಿವಿಗಳೆರಡಕ್ಕೂ ಕೆಲಸ ಕೊಟ್ಟು ಅದರ ಮುಂದ ಕೂತುಕೊಳ್ಳಾಕಂತ ನಮ್ಮ ಎಲ್ಲಾ ಕೆಲಸ ಬಿಟ್ಟು ಆ ಅಂತ ಬಾಯಿ ತೆಗೆದು ಕುಂದ್ರುವಂತಾ ಟಿವಿ ಬಂದಾಗಂತೂ ಅಜ್ಜಗ ದುನಿಯಾದ ಎಂಟನೇ ಅದ್ಭುತ ಕಂಡಂಗಾಗಿತ್ತು.

ಅಜ್ಜನ ಒತ್ತಾಯಕ್ಕ ನನ್ನಪ್ಪ ತಲೆ ಬಾಗಿ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸೋ ಟಿವಿ ಡಬ್ಬಿನ ತಂದು ನಮ್ಮ ಮನೆಯ ದೊಡ್ಡ ಪಡಸಾಲಿ ಮೂಲ್ಯಾಗ ಹಳೆ ಕಬ್ಬಿಣದ  ಟೇಬಲ್ ಮ್ಯಾಲೆ ನಮ್ಮವ್ವ ಕಲರ್ ಕಲರ್ ದಾರದಿಂದ ಹಾಕಿದ ಕಸೂತಿ ಬಟ್ಟಿ ಹಾಕಿ ದೀಪಾವಳಿ ಲಕ್ಷ್ಮೀ ಕುಂದ್ರಿಸಿದಂಗ ಕುಂದ್ರಿಸಿ ವಿಭೂತಿ ಕುಂಕುಮ ಹಚ್ಚಿದ್ದು ಗೊತ್ತಾಗಿ ಊರಾಗಿನ ಸಣ್ಣ ಸಣ್ಣ ಪಿಳ್ಳೆಗಳಿಂದ ಹಿಡಕೊಂಡು ಇವತ್ತೋ ನಾಳೆಯೋ ಟಕೆಟ್ ತೆಗೆಸೋ ಮುಪ್ಪಾನ ಮುದುಕ/ಕಿಯರು ಹಣೆಗೆ ಮೂರು ಬೆರಳು ವಿಭೂತಿ ಹಚ್ಚಿಕೊಂಡು ಕೈಯಾಗ ಕೋಲು ಹಿಡಕೊಂಡು ಕಣ್ಣಿಗೆ ಚಶ್ಮಾ ಹಾಕ್ಕೊಂಡು ಅತಿ ಶ್ರದ್ದೆಯಿಂದ ದೇವಸ್ಥಾನಕ್ಕೆ ಬರೋರ ಹಂಗ ಬಂದು ನಮ್ಮ ಪಡಸಾಲಿ ದಂದಕ್ಕಿ ಅಡುಗೆ ಮನೆಯವರೆಗೂ ಗಿಜಿ ಗಿಜಿ ಅನ್ನುವಂಗ ತುಂಬಿದರು. 

- Advertisement -

ಊರಾಗ ನಾ ನೀ ಅನ್ನೋ ದೊಡ್ಡ ಕುಳಗಳು ಟಿವಿ ಅನ್ನೋ  ಹುಳವನ್ನು ಮನೆ ತುಂಬಿಸಿಕೊಳ್ಳುವದರೊಳಗ  ದೂರ ಇದ್ದರೂ ರವಿವಾರಕೊಮ್ಮೆ ಬರೋ ರಾಮಾಯಣ, ಮಹಾಭಾರತ ನೋಡಾಕ ಜಳಕ ಮಾಡಿ ಗರಿ ಗರಿಯಾಗಿ ಇಸ್ತ್ರಿ ಮಾಡಿದ ಅಂಗಿ ಹಾಕ್ಕೊಂಡು ನಮ್ಮ ಮನಿಯೊಳಗ ಠೀವಿಯಿಂದ ಟಿವಿ ನೋಡಾಕ ಮುಂದಿನ ಸಾಲಿನ್ಯಾಗ ಕುರ್ಚಿ ಮ್ಯಾಲೆ ನಮಗಿಂತ ಮೊದಲ ಸೀಟು ರಿಜರ್ವ ಮಾಡಿ ಕಾಲ ಮ್ಯಾಲೆ ಕಾಲು ಹಾಕ್ಕೊಂಡು ಟಿವಿಯೊಳಗ ಕಣ್ಣು ನೆಟ್ಟಿರುತ್ತಿದ್ದರು. 

ಶುಕ್ರವಾರ ರಾತ್ರಿ ಚಿತ್ರಮಂಜರಿಯೊಳಗ ಸಿನಿಮಾ ಹಾಡು ಬರ್ತಾವಂತ ಸುದ್ದಿ ಗೊತ್ತಾದ ಕೂಡಲೇ ಓಣಿಯೊಳಗಿನ ಹೆಣ್ಮಕ್ಕಳು ಅವತ್ತ ಆರು ಗಂಟೆಯೊಳಗ ರೊಟ್ಟಿ ಬಡದು ಗಂಡಗ ಮಕ್ಕಳಿಗೆ ಊಟಕ್ಕ ಕೊಟ್ಟು ತಾವೂ ಊಟದ ಶಾಸ್ತ್ರ ಮುಗಿಸಿ ಸಿನಿಮಾ ಹಾಡು ಹತ್ತುವದಕ್ಕಿಂತ ಒಂದ ತಾಸು ಮೊದಲ ನಮ್ಮ ಪಡಸಾಲ್ಯಾಗ ಹಾಜರಾಗಿ ಗಲ ಗಲ ಹಚ್ಚಿಬಿಡುತ್ತಿದ್ದರು.

- Advertisement -

ಆ ಸೌಂಡಿಗೆ ನಮ್ಮ ಮನ್ಯಾಗಿನ ಮಂದಿಗೆ ಸಣ್ಣಗ ತಲೆನೋವು ಸುರುವಾಗಿ ಬಿಡ್ತಿತ್ತು. ನಮ್ಮವ್ವ ಅನಾಸಿನ್ ಗುಳಿಗೆ ತರಾಕ ಓಡ ಅಂತ ಕಣ್ಸನ್ನೆ ಮಾಡ್ತಿದ್ದಳು. ಅವಳ ಕಣ್ಸನ್ನೆಗೆ ನಾನು ಲೆಫ್ಟ್ ರೈಟ್ ಮಾಡುವವರ ಹಂಗ ಕುಂತ ಮಂದಿ ನಡುವ ಇರುವೆ ಹೋಗಾಕ ಜಾಗ ಇಲ್ಲದ ಜಾಗದಾಗ ನನ್ನ ಕಾಲಿಗೆ ಜಾಗ ಮಾಡಿಸಿಕೊಂಡು ಹೊರಗ ಹೋಗುದ್ರೊಳಗ ನನ್ನ ಅಂಗಿ ಎಲ್ಲಾ ತೊಯ್ದ ತಪ್ಪಡಿ ಆಗಿರುತ್ತಿತ್ತು. ಮರಳಿ ಸರ್ಕಸ್ ಮಾಡಕೋತ ಅವ್ವನ ಹತ್ರ ಹೋಗಿ ಅನಾಸಿನ್ ಕೊಡೋದ್ರೊಳಗ ನನಗೂ ಅನಾಸಿನ್ ಬೇಕು ಅಂತ ನನ್ನ ತಲಿ ಚೀರಿ ಚೀರಿ ಹೇಳತಿತ್ತು.

ಸಿನಿಮಾ ಹಾಡು ನೋಡಿ ಕೂಲಿಗೆ ಹೋಗೋರ ಮಕ್ಕಳು ಹಾಡಾಕ ಹತ್ತಿದ್ದು ನೋಡಿ ಅವರ ತಾಯಂದಿರು ನನ್ನ ಮಗ ಥೇಟ್ ರಾಜಕುಮಾರನಂಗ ಕುಣಕೋತ ಹಾಡತಾನ ಅಂತ ತಮ್ಮ ಬೆರಳು ಹಣಿಗೆ ಹಚಿಕೊಂಡು ಯಾರದೂ ದೃಷ್ಟಿ ಬೀಳದಿರಲಿ ತಮ್ ಮಕ್ಕಳ ಮ್ಯಾಲೆ ಅಂತ ಲಟಕಿ ಮುರಿತಿದ್ದರು. ಅಪ್ಪಂದಿರು ನೋಡಿದ್ರ ಕೂಲಿ ಮಾಡುದ ಬಿಟ್ಟು ಕುಣಿತಿ ಮಗನ ಅಂತ ಕುಂತು ಟಿವಿ ನೋಡೂ ಸೀಟಿಗೆ ಕೋಲು ತಗೊಂಡು ಬಾರಸ್ತಿದ್ರು. ಕೋಲಿನ ರುಚಿ ನೋಡಿದ ನಾಯಿ ಮರಿಹಂಗ ಕುಂಯ್ ಕುಂಯ್ ಅಂತ ಓಡಾಡುತ್ತಿದ್ದ ಮಕ್ಕಳ ನೋಡಿ ನನ್ನ ಕರಳು ಚುರುಕ್ ಅಂತಿತ್ತು. 

ಇಡೀ ಊರಾಗ ನನ್ನಪ್ಪ ತಂದ ಕಲರ್ ಟಿವಿ ದೊಡ್ಡ ಹವಾ ಮಾಡಿತ್ತು. ಮನೆ ಮಂದಿಗೆಲ್ಲ ಸೌಂಡ್ ಮಾಡುತ್ತಿದ್ದ ಟಿವಿ ಕಂಡು ಸಾಕ ಸಾಕಾಗಿತ್ತು. 

ರವಿವಾರ ಬೆಳಿಗ್ಗೆ ಏಳಗೊಡದ ಏಳ ಗಂಟೆಕ ರಂಗೋಲಿ ಹಾಕೂದು ಬಿಟ್ಟು ರಂಗೊಲಿ (ಹಿಂದಿ ಸಿನಿಮಾ ಹಾಡುಗಳ ಕಾರ್ಯಕ್ರಮ) ನೋಡಾಕ ಹರೆಯದ ವಯಸ್ಸಿನ ಹುಡುಗ ಹುಡುಗಿಯರು ರಾತ್ರಿಯೆಲ್ಲಾ ನಿದ್ದಿಗೆಟ್ಟು ನಾವು ಕದ ತೆಗೆಯೋದನ್ನ ಕಾಯುತ್ತ ನಮ್ ಮನಿ ಬಾಗಲ ಮುಂದ ಸೀಮೆ ಎಣ್ಣೆ ಕೊಡೋ ನ್ಯಾಯ ಬೆಲೆ ಅಂಗಡಿ ಮುಂದ ನಿಂತಂಗ ಗುಜು ಗುಜು ಮಾತು ಹಚ್ಕೊಂಡು ನಿಂತಿರುತ್ತಿದ್ದರು.

ಮುಂಜಾನೆದ್ದು ನಿತ್ಯ ಕರ್ಮಗಳನ್ನ ಮುಗಿಸಲು ಅವರನೆಲ್ಲ ದಾಟಿ ಹೋಗೋದರೊಳಗ ಹುಟ್ಟಿದ್ದು ಬೆಳದಿದ್ದು ಕೂಡೆ ನೆನಪಾಗುತ್ತಿತ್ತು. ಈ ಫಜೀತಿಗೆಲ್ಲ ಕಾರಣವಾದ ಟಿವಿ ನನ್ನ ನೋಡಿ ನಕ್ಕಂಗ ಅನಿಸುತ್ತಿತ್ತು. ಅದನ್ ನೋಡಿ ಟಿವಿನ ಎಷ್ಟು ಬಾರಿ ಶಪಿಸಿದಿನೋ ಅದೆಷ್ಟು ಬಾರಿ ತಲೆ ಕೆರೆದರೂ ಲೆಕ್ಕಕ್ಕೆ ಸಿಗುತ್ತಿಲ್ಲ.

ಮುಂಜಾನಿಂದ ದುಡಿದು ರಾತ್ರಿ ಖಾಲಿ ಇದ್ದ ಜನ ಊರು ಚಾವಡಿ ಬಿಟ್ಟು ಊರಾಗಿನ ಸುದ್ದಿ ಮಾತಾಡಾಕ ಅಲ್ಲ ದೇಶದ ಸುದ್ದಿ ನೋಡಾಕ ನಮ್ ಮನಿಗೆ ಯಾವುದೇ ಮುಜುಗುರವಿಲ್ಲದೇ ಬರುತ್ತಿದ್ದರು. ಕಲಿತವರು ಕಡಿಮೆ ಕಲಿತವರು ಸಾಲಿ ಹಿಂದ ಮುಂದ ಹೋಗದವರು ಹಿಂಗ ಮಿಸಳ ಬಾಜಿಯಂಗ ಕೂತು ಕ್ಷಮಿಸಿ ಕ್ಷಮಿಸಿ ಎಂದು ಕಣ್ಣು ಮುಚ್ಚಿ ಓದುತ್ತಿದ್ದ ವಾರ್ತಾ ವಾಚಕಿಯನ್ನು ಕಣ್ಣು ರೆಪ್ಪೆ ಮಿಟುಕಿಸದೇ ಬಾಯಿ ತೆಗೆದು ನೋಡುತ್ತಿದ್ದರು. 

ಸಣ್ಣ ಸಣ್ಣ ಪಿಳ್ಳೆಗಳಿಗೂ ಮೈಯಲ್ಲಿ ಕ್ರಿಕೆಟ್‍ನ ಜ್ವರ ಸಣ್ಣಗೆ ಶುರುವಾಗಿದ್ದ ಕಾಲವದು. ಬೇಸಿಗೆ ರಜೆಯಲ್ಲಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಂದ್ರ ನಮಗೆ ಪಂಚ ಪ್ರಾಣ ಕಣಕ್ಕೋ ಎಂದು ಕಪಿಲ್ ರವಿ ಶಾಸ್ತ್ರೀ ಆಟವನ್ನು ಕಣ್ತುಂಬಿಸಿಕೊಳ್ಳಲು ಪಡಸಾಲಿ ತುಂಬಿಸಿ ಸ್ಟೇಡಿಯಮ್ ನಲ್ಲಿರದಷ್ಟು ಕೇಕೆ ಸಿಳ್ಳೆಗಳನ್ನು ನಮ್ಮನೆಯಲ್ಲಿ  ಹಾಕಿ ಸಂಭ್ರಮಿಸುತ್ತಿದ್ದರು. 

ಪ್ರತಿ ವರ್ಷದಂತೆ ನಮ್ಮೂರ ಪಕ್ಕದ  ನರೇಗಲ್ಲಿನಲ್ಲಿ ಹುಚ್ಚೀರೇಶ್ವರ ಜಾತ್ರೆ ಇತ್ತು.

ಅವತ್ತು ನಮ್ಮೂರಾಗಿನ ಮಂದಿ ಜೊತೆಗೆ ಅವರ ಮನಿಗೆ ಬಂದ ಬೀಗರು ಬಿಜ್ಜರು ಜಾತ್ರೆಯಲ್ಲಿ ಖರೀದಿಸಿದ ಕಪ್ಪು ಬಣ್ಣದ ಕನ್ನಡಕ ಕಣ್ಣಿಗೆ ಹಾಕ್ಕೊಂಡು ತಲೆಗೊಂದೊಂದು ಬಣ್ಣ ಬಣ್ಣದ ಹ್ಯಾಟ್ ಹಾಕ್ಕೊಂಡು ಪೀಪಿ ಊದುತ್ತ ತಿರುಗಾಡುತ್ತಿದ್ದ ಮಕ್ಕಳನ್ನ ಕಂಕುಳದಾಗ ಹೊತ್ಕೊಂಡು ಕುಂಕಿ ಮ್ಯಾಲೆ ಕುಂದ್ರಿಸಿಕೊಂಡು ಸಿನಿಮಾ ಥೇಟರ್‍ಗೆ ಬರೋ ಹಂಗ ಬರಾಕ ಹತ್ತಿದ್ರು. ಹೌಸ್ ಫುಲ್ ಅಂತ ಹೇಳಿದ್ರೂ ಕಿವಿಯಾಗ ಹಾಕ್ಕೊಳದ ಕ್ಯಾರೆ ಅನ್ನದ ಒಂದು ವಯಸ್ಸಿನ ಗೂಳಿ ನುಗ್ಗಿದಂಗ ನುಗ್ಗಿದ್ರು.

ಕುರ್ಚಿ ಟೇಬಲ್ ಸೋಫಾ ನೆಲ ಹಿಂಗ ಎಲ್ಲಿ ನೋಡಿದರೂ ಮನೆ ತುಂಬ ತಲೆಗಳು ಕಾಣುತ್ತಿದ್ದವು. ಅದರಲ್ಲಿ ನಮ್ಮ ಮನೆ ಮಂದಿ ಒಂಟಿಗಾಲಲ್ಲಿ ನಿಂತು ಲೊಚ್ ಲೊಚ್ ಎನ್ನುತ್ತ ಮಂದಿ ಜೊತೆಗೆ  ಮಹಾ ಭಾರತದ ದೃಶ್ಯವನ್ನು ಕಣ್ಣು ಕೀಲಿಸಿಕೊಂಡು ನೋಡುತ್ತಿದ್ದರು. ಅಂದು ಜಾತ್ರೆಯ ಅರ್ಧದಷ್ಟು ಜನ ನಮ್ಮ ಮನೆಯಲ್ಲಿ ಕಿಕ್ಕಿರಿದು ಸೇರಿದ್ದರಿಂದ ನಮ್ಮ ಕಂಟ್ರೋಲ್ ತಪ್ಪಿತ್ತು. ಮನೆಯ ಎಲ್ಲ ಸಾಮಾನುಗಳು ಆಸನಗಳಾಗಿ ಮಾರ್ಪಾಟಾಗಿದ್ದವು.

ನನ್ನಜ್ಜ ಮಲಗುವ ಕಬ್ಬಿಣದ ಮಂಚವೂ ಇದಕ್ಕೆ ಹೊರತಾಗಿರಲಿಲ್ಲ. ಇಬ್ಬರು ಮಲಗುವ ಕ್ಯಾಪ್ಯಾಸಿಟಿ ಇರುವ ಮಂಚದ ಮೇಲೆ ಕನಿಷ್ಟ ಇಪ್ಪತ್ತು ಜನ ಭರ್ತಿಯಾಗಿ ಕೂತಿದ್ದರು. ಇವರೆಲ್ಲರ ಭಾರಕ್ಕೆ ಅದು ಕಲ್ಲು ಒಗಿಸಿಕೊಂಡ ನಾಯಿ ಮರಿಯಂತೆ ಕುಂಯ್ ಕುಂಯ್ ಅಂತ ಸದ್ದು ಮಾಡಿದರೂ ಲೆಕ್ಕಸದೇ ಕೂತಿದ್ದ ಜನರ ಭಾರ ತಾಳದೇ ಅಜ್ಜನ ಮಂಚ ಸಂಪೂರ್ಣವಾಗಿ ನೆಲಕ್ಕೆ ಕುಸಿದಿತ್ತು. ಆದರೂ ಅದರ ಮೇಲೆ ಆಸೀನರಾಗಿ ಟಿವಿ ವೀಕ್ಷಿಸುತ್ತಿದ್ದ ಜನರಿಗೆ ಖಬರೇ ಇರಲಿಲ್ಲ. ಮಹಾ ಭಾರತ ಮುಗಿದ ಮೇಲೆ ಅವರ ಬಗಲಲ್ಲಿ ಕೈ ಹಾಕಿ ಎಬ್ಬಿಸಿ ಕಳುಹಿಸಬೇಕಾಯಿತು.  

ಮೊದಲೆಲ್ಲ ಮನೆಯ ಮೂಲೆಯಲ್ಲಿ ಕೂತಿದ್ದ ಟಿವಿ ಈಗ ಪ್ರತಿ ಮನೆಯ ಪ್ರತಿ ಕೋಣೆಯ ಗೋಡೆಯ ಮೇಲೂ (ಶೌಚಾಲಯ ಬಚ್ಚಲು ಮನೆ ಹೊರತು ಪಡಿಸಿ)  ನಿಂತಿದೆ. ಮೊನ್ನೆ ಮಹಾಭಾರತದ ದೃಶ್ಯವನ್ನು ಒಬ್ಬಳೇ ನೋಡುತ್ತಿದ್ದಾಗ ಇದೆಲ್ಲಾ ನೆನಪಾಯಿತು ಊರಿನ ಜನರನ್ನೆಲ್ಲ ಒಂದೆಡೆ ಸೇರಿಸಿ ಖುಷಿ ನೀಡಿದ್ದ ಟಿವಿ  ನಮ್ಮೆಲ್ಲರ ಮನದ ಖುಷಿಯನ್ನು ಈ ಮಟ್ಟಿಗೆ ದೂರ ಮಾಡುತ್ತದೆ ಮಧುರ ಬಾಂಧವ್ಯಗಳನ್ನು ಹಾಳು ಮಾಡುತ್ತದೆ ಎಂಬ ಸಣ್ಣ ಊಹೆಯೂ ಇರಲಿಲ್ಲ. ಇಂದಿನ ಟಿವಿಯೂ ಅಂದಿನಂತೆ ಖುಷಿ ಉತ್ಸಾಹ ಉಲ್ಲಾಸ ಉಕ್ಕಿಸುವಂತಾದರೆ ನಮ್ಮನ್ನೆಲ್ಲ ಒಂದುಗೂಡಿಸುವ ಮಂತ್ರದಂಡವಾದರೆ ನಾವೆಲ್ಲ ಒಂದಾಗಿ ಅದೇ ಖುಷಿಯಲ್ಲಿ ತೇಲಬಹುದಲ್ಲವೇ?


ಜಯಶ್ರೀ.ಜೆ. ಅಬ್ಬಿಗೇರಿ

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group