ಮನೆಯಲ್ಲಿ ಸೈಕಲ್ ಇದ್ದವರು ಅನುಕೂಲಸ್ಥರು. ಸ್ಕೂಟರ್ ಇದ್ದವರು ಶ್ರೀಮಂತರು.
ಘಂಟೆಗೆ ಇಷ್ಟು ಆಣೆ ಎನ್ನುವ ಲೆಕ್ಕಾಚಾರದಲ್ಲಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ ತಂದು ಅದರಲ್ಲೇ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟರೆ ದೊಡ್ಡ ಸಾಹಸ ಮಾಡಿದಂತೆ.
ಆಮೇಲೆ ಅಪ್ಪ ಅಮ್ಮನನ್ನು ಪೀಡಿಸಿ ನಾಲ್ಕಾಣೆ, ಎಂಟಾಣೆ ಪಡೆದು ಸೈಕಲ್ ಶಾಪ್ ಸೈಕಲ್ ಓಡಿಸುತ್ತಿದ್ದರೆ BMW, Benz ಕಾರ್ ಓಡಿಸಿದಷ್ಟು ಖುಷಿ.
ಬೀದಿಯಲ್ಲಿ ಒಬ್ಬರ ಮನೆಗೆ ಟಿವಿ ತಂದರೆ ಊರಿಗೆಲ್ಲಾ ಅದೇ ಸುದ್ದಿ. ಅದರಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತ ನೋಡಲು ಬೀದಿಯ ಪರಿಚಿತರು, ಹುಡುಗರೆಲ್ಲಾ ಬಂದು ಕೂರುವುದು, ಸಿಗ್ನಲ್ ಹೋದಾಗ ಮೇಲೊಬ್ಬರು ಟಿವಿ ಆಂಟೆನಾ ತಿರುಗಿಸುತ್ತಿದ್ದರೆ, ಒಳಗಿನಿಂದ
“ಸಾಕು ಸಾಕು ಬಂತು” ಅನ್ನೋ ಸಡಗರ!
ಇರುವ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ.
ವರ್ಷಕ್ಕೊಮ್ಮೆ ಶಾಲೆಯಲ್ಲೇ ಕೊಡುತ್ತಿದ್ದ ಯುನಿಫಾರಂ. ಪಾಸ್ ಆದವರ ಪುಸ್ತಕ ನಮಗೆ. ನಮ್ಮ ಪುಸ್ತಕ ನಮ್ಮ ಜ್ಯೂನಿಯರ್ಸ್ ಗಳಿಗೆ !
ಶಾಲೆ ಬಿಟ್ಟರೆ ರಸ್ತೆಯಲ್ಲೇ ಗೋಲಿ, ಬುಗುರಿ, ಕಣ್ಣಾಮುಚ್ಚಾಲೆ ಗಿಲ್ಲಿ-ದಾಂಡು ಮುಂತಾದ ಆಟ. ಬೇಸಿಗೆ ರಜೆ ಬಂತೆಂದರೆ ಅಜ್ಜಿಯ ಮನೆ.
ಮನೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಸೇವಿಸುವ ಆಹಾರ. ಹಬ್ಬಕ್ಕೆ ತಾಯಿ ಹಾಕುತ್ತಿದ್ದ ಎಣ್ಣೆ ನೀರು, ತಂದೆ ಕೊಡಿಸುತ್ತಿದ್ದ ಹೊಸ ಬಟ್ಟೆ, ಪಟಾಕಿಯ ಖುಷಿ.
ಪಟಾಕಿಯನ್ನು ಬಿಸಿಲಿಗಿಟ್ಟು ಒಣಗಿಸಿಯೇ ಹೊಡೆಯಬೇಕು. ಹೋಳಿಗೆ ತಿನ್ನಲು ಹಬ್ಬವೇ ಬರಬೇಕು! ಪಾಯಸ ತಿನ್ನಲು ಮನೆಗೆ ಯಾರಾದರೂ ಬಂಧು-ಮಿತ್ರರು ಬರಬೇಕು!.
ಗಣಪತಿ ತಂದರೆ ಅದನ್ನು ಬಿಡೋಕ್ಕೆ ಮನಸಿರಲಿಲ್ಲ. ಅಪರೂಪಕ್ಕೆ ಅಪ್ಪ ಅಮ್ಮ ಕರೆದುಕೊಂಡು ಹೋಗುತ್ತಿದ್ದದ್ದು ಡಾ:ರಾಜ್ ಚಿತ್ರಗಳು.
ದೊಡ್ಡ ಪೆಟ್ಟಿಗೆ ಟಿವಿಯಲ್ಲಿ ಬರುವ ಸಾಪ್ತಾಹಿಕ ಕಾರ್ಯಕ್ರಮಕ್ಕೆ ವಾರವಿಡೀ ಕಾಯುವಿಕೆ! ಭಾನುವಾರ ಬಂತೆಂದರೆ ಸಂಜೆ ಟಿವಿ ಇದ್ದವರ ಮನೆ ಮುಂದೆ ಊರ ಜನರ ಕ್ಯಾಂಪ್, ಲ್ಯಾಂಡ್ ಫೋನ್ ಇದ್ದವರು ಅಕ್ಕ ಪಕ್ಕದವರಿಗೆ ಕರೆ ಬಂದರೆ ಊರಿಗೆಲ್ಲಾ ಕೇಳೋ ಹಂಗೆ ಕೂಗಿ ಕರೆಯುವುದು.
ಅಪರೂಪಕ್ಕೆ ಯಾರಿಗಾದರೂ ಕರೆ ಮಾಡಬೇಕಾದರೆ ಟೆಲಿಫೋನ್ ಎಕ್ಸ್ ಚೇಂಜ್ ಗೆ ಕರೆ ಮಾಡಿ ಬುಕ್ ಮಾಡಬೇಕು.
ಬಡವ-ಶ್ರೀಮಂತ ಎನ್ನುವುದಿಲ್ಲದೇ ಎಲ್ಲರೂ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಕೆಎಸ್ಆರ್ ಟಿಸಿ ಕೆಂಪು ಬಸ್ಸಲ್ಲೇ ಖುಷಿಯಾಗಿ ಪ್ರಯಾಣ.
ವರ್ಷಕ್ಕೊಮ್ಮೆ ಊರು ಜಾತ್ರೆಯ ಸಂಭ್ರಮ.
ಜೋರು ಮಳೆಯಲ್ಲೂ ಆಲಿಕಲ್ಲು ಆರಿಸುವ ತವಕ, ಮಳೆ ನೀರನ್ನು ಬಕೇಟಿನಲ್ಲಿ ಹಿಡಿದು ತೊಟ್ಟಿ ತುಂಬಿಸುವ ಆಟ !
ಬಂಧು-ಮಿತ್ರರ ಮನೆಯ ಸುಖ-ದುಃಖದ ಸಂದರ್ಭದಲ್ಲಿ, ಹಬ್ಬ – ಹರಿದಿನಗಳಲ್ಲಿ ಮನೆಯ ಎಲ್ಲರೂ ಹೋಗಿ ಭಾಗಿಯಾಗುವುದು, ವಾರಗಟ್ಟಲೆ ಅಲ್ಲೇ ಕ್ಯಾ0ಪ್.
ಇಂದು ನಮ್ಮೊಂದಿಗೆ ಇರುವ ಸಾಧನಗಳು ಅಂದಿನ ದಿನದಲ್ಲಿ ಇಲ್ಲದಿದ್ದರೂ ಅದೇ ಸ್ವರ್ಗ.
ಇಂದು ಅಂಗೈಯ್ಯಲ್ಲೇ ಜಗತ್ತು ಇದೆ. ದುಡ್ಡು ಇದೆ. ಮನೆಗೊಂದು ಕಾರ್ ಇದೆ. ನಲ್ಲಿ ತಿರುಗಿಸಿದರೆ ಬಿಸಿ-ಅಥವಾ ತಣ್ಣೀರು ಬರುತ್ತದೆ.
ಕ್ಷಣ ಮಾತ್ರದಲ್ಲಿ ಎಲ್ಲಿಗೆ ಬೇಕಾದರೂ ತಲುಪುವಷ್ಟು ಸುಖವಾದ ಸಾಧನಗಳಿವೆ.
ಭೂತ-ವರ್ತಮಾನ-ಭವಿಷ್ಯವನ್ನು ಭಗವಂತನಿಗಿಂತ ಚೆನ್ನಾಗಿ ಬಲ್ಲ ಮತ್ತು ಅದನ್ನು ಇನ್ನೂ ಬಣ್ಣ ಬಣ್ಣವಾಗಿ ವಿವರಿಸುವ ನ್ಯೂಸ್ ಚಾನೆಲ್ ಗಳಿವೆ!.
ಸೆಖೆ ಆದರೆ ಎಸಿ ಇದೆ.
ಚಳಿ ಆದರೆ ಹೀಟರ್ ಇದೆ.
ರಸ್ತೆಗೊಂದು ಕಾನ್ವೆಂಟ್ ಇದೆ,
ಹೆಜ್ಜೆ ಹೆಜ್ಜೆಗೂ ಹೋಟೆಲ್…. ಆಸ್ಪತ್ರೆ ಎಲ್ಲವೂ ಇದೆ.
ಮನೆಯಲ್ಲೇ ಕುಳಿತು ಆರ್ಡರ್ ಮಾಡಿದರೆ ಮೊಬೈಲ್ ಕೆಳಗೆ ಇಡುವಷ್ಟರಲ್ಲಿ ಪಾರ್ಸೆಲ್ ಮನೆ ಬಾಗಿಲಿಗೆ ಬರುತ್ತದೆ.
ಆದರೂ ಒಂದು ಮಾತ್ರ ONLINE ಸೇರಿದಂತೆ ಎಲ್ಲೇ ಹುಡುಕಿದರೂ ಸಿಗ್ತಾ ಇಲ್ಲ!..
ಆಗಿನ ಕಾಲದಲ್ಲಿ ಸಿಗುತ್ತಿದ್ದ ಸಂಬಂಧ, ಸ್ನೇಹ, ಪ್ರೀತಿ-ವಿಶ್ವಾಸ, ಸುಖ-ಸಂತೋಷ, ನೆಮ್ಮದಿ.!
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ