ಬೀದರ – ಪಂಚಮಸಾಲಿ ಸಮಾಜಕ್ಕೆ ನೀಡಿದ್ದ ಮಾತಿಗೆ ತಪ್ಪಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕಲಬುರಗಿಯಲ್ಲಿ ದಿ. ೧೨ ರಂದು ಕಲ್ಯಾಣ ಕರ್ನಾಟಕ ರಾಜ್ಯದ ಪ್ರಪ್ರಥಮ ಲಿಂಗಾಯತ ದೀಕ್ಷಾ ಪಂಚಮಸಾಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸರ್ಕಾರ ಇದ್ದಾಗ ಬೆಳಗಾವಿಯಲ್ಲಿ ೨೨ ಲಕ್ಷ ಜನ ಸೇರಿ ಸಮಾವೇಶ ಮಾಡಿದರೂ ಅವರು ಮಾತಿಗೆ ತಪ್ಪಿದ್ದರಿಂದ ಈ ಸರ್ಕಾರಕ್ಕೆ ನಮ್ಮ ಜನ ಮತ ಹಾಕಿದರು. ಇವರೂ ಕೂಡ ಮಾತಿಗೆ ತಪ್ಪಿದ್ದಾರೆ. ಅದಕ್ಕಾಗಿ ಈ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಲಬುರಗಿ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿರುತ್ತದೆ. ಲೋಕಸಭಾ ಚುನಾವಣೆ ಒಳಗೆ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದಲ್ಲಿ ಒಬಿಸಿ ಹಾಗೂ ದೀಕ್ಷ, ಪಂಚಮಸಾಲಿ,ಗೌಡ ಲಿಂಗಾಯತರು ಗಳಿಗೆ 2ಏ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಶಿಫಾರಸಾದರೂ ಮಾಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಜಾತಿ ಗಣತಿ ಮಾಡಲು ನಮ್ಮ ವಿರೋಧವಿಲ್ಲ ಆದರೆ ಎಲ್ಲರ ಮನೆಗೆ ಭೇಟಿ ನೀಡಿ ಪ್ರಾಮಾಣಿಕವಾಗಿ ವರದಿ ಮಾಡಲಿ. ನಮ್ಮ ಸಂಖ್ಯೆ ಕಡಿಮೆ ಇದ್ದರೆ ಒಪ್ಪಿಕೊಳ್ಳುತ್ತೆವೆ. ಆದರೆ ಸಮೀಕ್ಷೆ ವರದಿಯನ್ನೆ ಜಾತಿ ಗಣತಿ ವರದಿ ಎನ್ನಲು ಸಾಧ್ಯವಿಲ್ಲ. ಇದನ್ನ ನಾನು ಒಪ್ಪುವುದಿಲ್ಲವೆಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ