ಚುಳಕಿಯಲ್ಲೊಂದು ಸ್ಮಾರ್ಟ ಕ್ಲಾಸ್ ಕೊಠಡಿ

0
551

ಪುರಾತನ ಕಾಲದಲ್ಲಿ ಋಷಿಮುನಿಗಳು ತಮ್ಮ ತಪಸ್ಸನ್ನಾಚರಿಸಲು ಬೆಟ್ಟಗುಡ್ಡಗಳಲ್ಲಿನ ಗುಹೆಗಳನ್ನು ಹಾಗೂ ನದಿ ತಟವನ್ನು ಇಲ್ಲವೇ ಕಾಡುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಅಂಥ ಸ್ಥಳ ಅವರ ಹೆಸರಿಂದಲೇ ಪ್ರಸಿದ್ದವಾಗುತ್ತಿತ್ತು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಇತಿಹಾಸ ಕಾಲದ ಅನೇಕ ಗುಹೆಗಳಿವೆ.ಸಿದ್ದಿ ಪುರುಷರ ನೆಲೆಗಳಿವೆ;ಅಂಥವುಗಳಲ್ಲಿ ಚುಳಕಿ ಗ್ರಾಮವೂ ಒಂದು.

ಸವದತ್ತಿಯಿಂದ 17 ಕಿ.ಮೀ ಅಂತರದಲ್ಲಿರುವ ಚುಳಕಿ ಗ್ರಾಮ ಶಿಲಾಯುಗದ ಪಳಿಯುಳಿಕೆಗಳನ್ನು ಹೊಂದಿದೆ. ಇಲ್ಲಿ ಅವಧೂತರು ತಮ್ಮ ತಪಸ್ಸನ್ನಾಚರಿಸಿದ ಕುರುಹುಗಳಿವೆ. ಇಲ್ಲಿನ ಬಸ್ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಬಂದರೆ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಿದೆ. ಇಲ್ಲಿ ಗುರುವಾರ 23 ರಂದು ಸ್ಮಾರ್ಟ ಕ್ಲಾಸ್ ಕೊಠಡಿಯ ಉದ್ಘಾಟನೆ ವಿಶಿಷ್ಟ ರೀತಿಯಲ್ಲಿ ಜರುಗಿತು.

ನಾವು ಸರಕಾರದ ಅನುದಾನದಲ್ಲಿ ಸ್ಮಾರ್ಟ ಕ್ಲಾಸ್ ಮಾಡಿರುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಚುಳಕಿಯಲ್ಲಿ ಸಾರ್ವಜನಿಕರ ಸಹಕಾರದಿಂದ ಈ ಸ್ಮಾರ್ಟ ಕ್ಲಾಸ್ ಕೊಠಡಿ ರೂಪಿತವಾಗಿದೆ. ಇದಕ್ಕೆ ತಗುಲಿದ ವೆಚ್ಚ ಒಂದು ಲಕ್ಷ ಐವತ್ತು ಸಾವಿರ ರೂಪಾಯಿಗಳು. ಸಮಾಜಸೇವಾ ಕಾರ್ಯಕರ್ತ ಸುರೇಶಗೌಡ ಬಡಗಿಗೌಡರ ಒಂದು ಲಕ್ಷ ಮೂವತ್ತೈದು ಸಾವಿರ ಹಣ ಒದಗಿಸಿರುವರು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಚಿನಾಳದ ಮುಖ್ಯೋಪಾಧ್ಯಾಯರಾದ ಎಲ್.ಬಿ.ಹರ್ಲಾಪುರ ಹತ್ತು ಸಾವಿರ ರೂಪಾಯಿಗಳನ್ನು ಎಂ.ಎಂ.ಫೀರಜಾದೆಯವರು ಐದು ಸಾವಿರ ರೂಪಾಯಿಗಳನ್ನು ಒದಗಿಸುವ ಮೂಲಕ ಈ ಸ್ಮಾರ್ಟ ಕ್ಲಾಸ್‍ಗೆ ಕಾರಣರಾಗಿರುವರು.ಇದರ ಜೊತೆಗೆ ಸರಕಾರದಿಂದ ಪ್ರೊಜೆಕ್ಟರ್ ಕೂಡ ಈ ಶಾಲೆಗೆ ಇಲಾಖೆಯ ಮೂಲಕ ಸರಬರಾಜಾಗಿದೆ. ಅಷ್ಟೇ ಅಲ್ಲ ಶಾಲೆಯ ಎಲ್ಲ ಶಿಕ್ಷಕರು ತಮ್ಮ ಸ್ವಂತ ಖರ್ಚಿನಿಂದ ಪ್ರೊಜೆಕ್ಟರ ಒಂದನ್ನು ಕೂಡ ಖರೀದಿಸಿರುವರು.

ಇದು ಸರಕಾರಿ ಶಾಲೆ.ಇಲ್ಲಿ ಕಲಿತವರು ಇಂದು ನಾಡಿನೆಲ್ಲಡೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವರು. ಈ ಶಾಲೆಯಲ್ಲಿ ಇದೇ ಗ್ರಾಮದ ಮೈಲಾರಪ್ಪ ಭೀಮಪ್ಪ ಚುಂಚನೂರ ಎಂಬ ದೈಹಿಕ ಶಿಕ್ಷಕರು ಕಳೆದ ವರ್ಷ 2020 ಅಗಸ್ಟ 1 ರಿಂದ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವರು.ದೈಹಿಕ ಶಿಕ್ಷಕರಾಗಿ ಉತ್ತಮ ಕ್ರೀಡೆಗಳನ್ನು ಮಕ್ಕಳಲ್ಲಿ ಕಲಿಸುವ ಜೊತೆಗೆ ತಮ್ಮ ಊರಿನ ಶಾಲೆಗೆ ಹಿರಿಯರಿಂದ ದೇಣಿಗೆ ರೂಪದಲ್ಲಿ ಏನನ್ನಾದರೂ ಪಡೆಯಬೇಕೆಂಬ ಉತ್ಕಟ ಇಚ್ಚೆಯಿಂದ ಸಂಪರ್ಕಿಸುವ ಮೂಲಕ ಈಗ ಸ್ಮಾರ್ಟ ಕ್ಲಾಸ್ ಪೂರೈಸಿಕೊಂಡಿರುವರು.

ಗುರುವಾರ ಇದರ ಉದ್ಘಾಟನೆಯನ್ನು ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಊರಿನ ಹಿರಿಯರೊಂದಿಗೆ ಈ ಕೊಠಡಿಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿತ್ತು. ಈ ಶಾಲೆಯ ಎಸ್.ಡಿ.ಎಂ.ಸಿಯವರು. ಗ್ರಾಮ ಪಂಚಾಯತಿಯವರು, ಅಂಗನವಾಡಿಯವರು, ಅಕ್ಕ ಪಕ್ಕದ ಶಾಲೆಗಳ ಗುರುವೃಂದ ಎಲ್ಲರೂ ಭಾಗಿಯಾಗುವ ಮೂಲಕ ವಿಶಿಷ್ಟ ಕಾರ್ಯಕ್ರಮ ಜರುಗಿತು.

ಡಾಕ್ಟರೇಟ್ ಪದವಿ ಪುರಸ್ಕೃತ ಎಂ.ಎಂ.ಫೀರಜಾದೆ.ಧಾರವಾಡದಲ್ಲಿ ಪೋಲಿಸ್ ಇಲಾಖೆಯ ಎಸ್.ಪಿ ಆಫೀಸನಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸುತ್ತಿರುವ ಸುಭಾಸಗೌಡ ಪಾಟೀಲ,ಕಗದಾಳ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಕರೀಂಸಾಬ ನದಾಫ, ಹಂಚಿನಾಳದ ಮುಖ್ಯೋಪಾಧ್ಯಾಯರಾದ ಎಲ್.ಬಿ.ಹರ್ಲಾಪುರ,ಧಾರವಾಡ ಕೆ.ಎಸ್.ಆರ್.ಟಿ.ಸಿ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಉಮೇಶ ಪತ್ತಾರ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ್, ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ,ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಅಮೃತ ಸಾಣಿಕೊಪ್ಪ, ಸಾಮಾಜಿಕ ಕಾರ್ಯಕರ್ತ ಸುರೇಶಗೌಡ ಬಡಗಿಗೌಡರ ಇವರನ್ನು ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಯಿತು.

ಇವರಲ್ಲಿ ಬಹುತೇಕರು ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು. ಅವರು ಇಂದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಪುರಸ್ಕರಿಸಿ ಶಾಲೆಯ ವತಿಯಿಂದ ಸನ್ಮಾನಿಸುವ ಜೊತೆಗೆ ಪ್ರೊಜೆಕ್ಟರ ಉದ್ಘಾಟನೆ, ಸ್ಮಾರ್ಟ ಕ್ಲಾಸ್ ಉದ್ಘಾಟನೆ ವೈಶಿಷ್ಟ್ಯಪೂರ್ಣವಾಗಿ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹುಚ್ಚಪ್ಪ ಶಿವಪ್ಪ ಹರಳಕಟ್ಟಿ ವಹಿಸಿದ್ದರು.ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಎನ್. ಹರ್ಲಾಪುರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಶಾಲೆಯ ಶಿಕ್ಷಕಿ ಶ್ರೀಮತಿ ಆರ್.ಎಂ.ಶ್ಯಾಗೋಟಿ,ಮಂಜುಳಾ ಬದಾಮಿ(ಅತಿಥಿ ಶಿಕ್ಷಕಿ), ಆರ್.ಎಸ್.ಹರ್ಲಾಪುರ, ಎಚ್.ಎಸ್.ತೊಪ್ಪಲದ, ಡಿ.ಜಿ.ಗಂಗಪ್ಪನವರ ಸೇರಿದಂತೆ ಜನತಾ ಕಾಲನಿ ಚುಳಕಿಯ ಗುರು ವೃಂದ ಪ್ರೌಢಶಾಲೆಯ ಗುರುವೃಂದ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ಡಿ.ಎ.ಮೇಟಿ. ಹಿರೇಕುಂಬಿ ಶಾಲೆಯ ಎಂ.ಬಿ.ಸನದಿ. ಹಂಚಿನಾಳದ ಉರ್ದು ಶಾಲೆಯ ವಸಂತ ತೊರಗಲ್,ಗುಡದಪ್ಪನವರ ಸರಕಾರಿ ಪ್ರೌಢಶಾಲೆ ಚುಳಕಿ ಪಿ.ಡಿ.ಓ ತೋಟಗಿಯವರು ಸೇರಿದಂತೆ ಬಿ.ಐ.ಇ.ಆರ್.ಟಿ ವೈ.ಬಿ.ಕಡಕೋಳ, ಸಿ.ವ್ಹಿ.ಬಾರ್ಕಿ, ಸಿ.ಆರ್.ಪಿ ಎನ್.ಜಿ.ತೊಪ್ಪಲದ ಸೇರಿದಂತೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮನಿಕಟ್ಟಿಯ ಶಿಕ್ಷಕ ಎಂ.ಪಿ.ಪಾಟೀಲ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ಅವರು, “ ಈ ಹಿಂದೆ ಮಕ್ಕಳಿಗೆ ಮೊಬೈಲ್ ಕೊಡುವ ಹಾಗಿರಲಿಲ್ಲ.ಕಾರಣ ಏನಾದರೂ ಅಚಾತುರ್ಯ ಘಟನೆ ನಡೆದೀತು ಎಂಬ ಭಯ ಪಾಲಕರಲ್ಲಿತ್ತು. ಈಗ ಕೋರೋನಾ ಬಂದಿದೆ.ಅದು ಪಾಲಕರಲ್ಲಿ ಕೂಡ ಜಾಗೃತಿ ಮೂಡಿಸಿದೆ.ಅದರ ಪರಿಣಾಮ ಮಕ್ಕಳಿಗೆ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಪಾಠ ವೀಕ್ಷಿಸುವ ಕಾರ್ಯ ಜರುಗಿದ್ದು ತಮಗೆಲ್ಲರಿಗೂ ತಿಳಿಸಿದ ಸಂಗತಿ. ಈಗ ಹೊಸ ಕೊಠಡಿ ಸ್ಮಾರ್ಟ ಕ್ಲಾಸ್ ಆಗಿ ರೂಪುಗೊಂಡಿದ್ದು.

ಇದು ಶಿಕ್ಷಕರು ಮತ್ತು ಮಕ್ಕಳ ಹೊರೆಯನ್ನು ಕಡಿಮೆ ಮಾಡುವುದಲ್ಲದೇ ಮಕ್ಕಳು ಇಲ್ಲಿನ ತಂತ್ರಜ್ಞಾನವನ್ನು ಬೇಗನೇ ಕಲಿಯುತ್ತಾರೆ.ಅಷ್ಟೇ ಅಲ್ಲ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಕಲಿಯುವರು.ನಾವು ಕಲಿಯುವಾಗ ಇಂತಹ ವ್ಯವಸ್ಥೆ ಇರಲಿಲ್ಲ.ಈ ಶಾಲೆಯನ್ನು ಕಂಡಾಗ ತುಂಬ ಸಂತೋಷವಾಗುತ್ತದೆ.ಅದಕ್ಕೆ ಕಾರಣ ಈ ಶಾಲೆಯ ಗುರುವೃಂದ ಊರಿನ ಹಿರಿಯರು.ಎಸ್.ಡಿ.ಎಂ.ಸಿ.ಯವರು ತಮಗೆಲ್ಲ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ”ಎಂದು ನುಡಿದರು.

ನಂತರ ಮಾತನಾಡಿದ ಉಮೇಶ ಪತ್ತಾರ, “ ಈ ಶಾಲೆಯಲ್ಲಿ ಇಂದು ನನ್ನ ಸನ್ಮಾನವನ್ನು ಮಾಡಿರುವಿರಿ.ಮೊಟ್ಟ ಮೊದಲಿಗೆ ತಮಗೆಲ್ಲರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುವೆನು. ನಾನಿಂದು ಕೆ.ಎಸ್.ಆರ್.ಟಿ.ಸಿಯಲ್ಲಿ ಸೇವೆಯಲ್ಲಿರುವೆ.ನನ್ನ ಈ ಶಾಲೆಯ ಬಗ್ಗೆ ನನಗೆ ಹೆಮ್ಮೆ ಇದೆ.ಇಂದು ತಾವು ಕೈಗೊಂಡ ಕ್ರಮಗಳು ಇಂದು ಸ್ಮಾರ್ಟ ಕ್ಲಾಸ್ ರೂಪದಲ್ಲಿ ಹೊರಬಂದಿದೆ.ತಮಗೆಲ್ಲ ಧನ್ಯವಾದಗಳು.” ಎಂದು ಕೃತಜ್ಞತೆ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಫ್.ಜಿ.ನವಲಗುಂದ ಮಾತನಾಡಿ “ ಪರಿಸರಕ್ಕೆ ಹೊಂದಿಕೊಳ್ಳದ ಜೀವಿ ನಾಶವಾಗುತ್ತಾನೆ.ಎಂಬ ಡಾರ್ವಿನ ಸಿದ್ದಾಂತ ಉದಾಹರಿಸಿ ಪ್ರಸ್ತುತ ಕೋರೋನಾ ಕಾಲದಲ್ಲಿ ನಾವೆಲ್ಲ ಇದ್ದೇವೆ.ಇಲ್ಲಿ ಕಳೆದ ವರ್ಷದಿಂದ ಮುಖಾಮುಖಿ ತರಗತಿಗಳು ಜರುಗಿಲ್ಲ.ಸರಕಾರ ಮತ್ತು ಇಲಾಖೆ ಈಗ ಒಂದೊಂದೇ ತರಗತಿಗಳನ್ನು ಹಂತ ಹಂತವಾಗಿ ಮುಖಾಮುಖಿ ಬೋಧನೆಗೆ ತೊಡಗಿಸಿಕೊಳ್ಳುತ್ತಿವೆ. ಈ ದಿಸೆಯಲ್ಲಿ ಬದಲಾದ ಸನ್ನಿವೇಶಕ್ಕೆ ನಾವು ನೀವು ಹೊಂದಿಕೊಂಡು ಬದುಕುವುದು ಮಹತ್ವವನ್ನು ಪಡೆದಿದೆ.”ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಅಧಿಕಾರಿಗಳಾದ ಅಮೃತ ಸಾಣಿಕೊಪ್ಪ ಮಾತನಾಡಿ “ಅಂಗನವಾಡಿ ಮತ್ತು ಶಾಲೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪೋಷಣ ಅಭಿಯಾನವು ಆರಂಭಗೊಂಡಿದ್ದು ಅದರ ಸದುಪಯೋಗ ಪಡೆದುಕೊಳ್ಳಿರಿ” ಎಂದು ಕರೆ ನೀಡಿದರು.

ಕರೀಂ ಸಾಬ ನದಾಫ ಮಾತನಾಡಿ “ ನನ್ನ ಜೀವನದ 20 ವರ್ಷ ಸೇವೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಊರಿನ ಶಾಲೆಯಲ್ಲಿ ನನಗೆ ಸಿಕ್ಕ ಗೌರವಕ್ಕೆ ಪ್ರತಿಯಾಗಿ ನಾನು ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ತಮಗೆ ಕಡಿಮೆ.ಇಂತಹ ಸನ್ಮಾನಕ್ಕೆ ಬೆಲೆ ಕಟ್ಟಲಾಗದು.”ಎಂದು ನುಡಿದರು.

ಎಲ್.ಬಿ.ಹರ್ಲಾಪುರ ಮಾತನಾಡಿ “ನಾವು ಕಲಿಯುವಾಗ ಇಂತಹ ಯಾವ ಸೌಲಭ್ಯಗಳು ಇರಲಿಲ್ಲ. ಸರಕಾರ ಕೂಡ ಶಿಕ್ಷಣಕ್ಕೆ ಈಗ ಮಹತ್ವ ನೀಡುತ್ತಿರುವ ಕಾರಣ ನಾವೆಲ್ಲರೂ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಬೋಧನೆ ಮಾಡೋಣ.ನಾನೂ ಕೂಡ ಈ ಶಾಲೆಗೆ 25.000 ಹಣ ಪಿಕ್ಸ ಡಿಫಾಜಿಟ್ ನೀಡುತ್ತೇನೆ “ಎಂದು ಚೆಕ್ ಪ್ರಧಾನ ಗುರುಗಳಿಗೆ ನೀಡಿದರು.

ಸುಭಾಸಗೌಡ ಪಾಟೀಲ ಮಾತನಾಡಿ “ ನಮ್ಮ ಶಾಲೆ ನಮ್ಮ ಹೆಮ್ಮೆ ಎಂದು ಅಭಿಮಾನದಿಂದ ಹೇಳುವಂತೆ ಇಂದು ಚುಳಕಿ ಶಾಲೆ ಕಂಗೊಳಿಸುತ್ತಿದೆ.ಇಲ್ಲಿನ ಎಲ್ಲ ಗುರುಗಳಿಗೆ ಮೊಟ್ಟ ಮೊದಲು ಧನ್ಯವಾದ ತಿಳಿಸುವೆನು.ನಾವೆಲ್ಲ ಸರಕಾರಿ ಶಾಲೆಯಲ್ಲಿ ಓದಿದವರು.ನಾವು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆದಿದ್ದೇವೆ.ಎಲ್ಲರೂ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರಿ.ನನಗೆ ಇಂದು ನೀಡಿದ ಗೌರವ ಸನ್ಮಾನಕ್ಕೆ ಚಿರಋಣಿ”ಎಂದರು

ಸಮಾಜಸೇವಾ ಕಾರ್ಯಕರ್ತ ಸುರೇಶಗೌಡ ಬಡಗಿಗೌಡರ ಮಾತನಾಡಿ, “ ಚುಳಕಿ ಗ್ರಾಮ ಅಧ್ಯಾತ್ಮದ ನೆಲೆ.ಇದು ಪವಾಡ ಪುರುಷರು ವಾಸಿಸಿದ ಅವಧೂತರ ಗ್ರಾಮ.ನಮ್ಮ ಊರಿನ ಶಾಲೆ ಇಂದು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು ನನಗೆ ಹೆಮ್ಮೆ.ನನ್ನಿಂದ ಮುಂದೆಯೂ ಕೂಡ ಈ ಶಾಲೆಗೆ ಅವಶ್ಯಕ ಸಾಮಗ್ರಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಪೂರೈಸುವೆನು.”ಎಂದು ನುಡಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಮಾತನಾಡುತ್ತ “ಸ್ಮಾರ್ಟಕ್ಲಾಸ್ ರೂಮುಗಳು ಶಿಕ್ಷಕರು ಮತ್ತು ಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೇ.ಮಕ್ಕಳು ಇಲ್ಲಿ ವಿಷಯಗಳನ್ನು ಬಹುಬೇಗ ಗ್ರಹಿಸುತ್ತಾರೆ. ತರಗತಿಯ ಡಿಜಿಟಲ್ ಪರದೆಯತ್ತ ತಮ್ಮ ಮನಸ್ಸನ್ನು ಕೇಂದ್ರೀಕರಿಸುವುದರಿಂದ ಪಠ್ಯ ವಿಷಯಗಳು ದೀರ್ಘವಾಗಿ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತವೆ.ಇಂತಹ ಕಾರ್ಯಕ್ಕೆ ಕೈ ಜೋಡಿಸಿದ ಊರಿನ ದಾನಿಗಳಿಗೆ ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ”ಎಂದು ತಿಳಿಸಿದರು.

ನಂತರ ಬೆಳಗಾವಿಯ ಜ್ಞಾನಸುಧೆ ಮುಖ್ಯಸ್ಥರಿಂದ ಸ್ಮಾರ್ಟ ಕ್ಲಾಸ್ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆಯನ್ನು ವೇದಿಕೆಯ ಮೇಲಿನ ಎಲ್ಲ ಗಣ್ಯರಾದಿಯಾಗಿ ಶಿಕ್ಷಕರಿಗೆ ತೋರಿಸಲಾಯಿತು.ಇದರ ಪ್ರಯೋಜನ ಕಂಡು ಎಲ್ಲರೂ ಸಂತಸಗೊಂಡರು. ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ಜರುಗಿತು. ಮುಖ್ಯೋಪಾಧ್ಯಾಯರಾದ ಮೈಲಾರಪ್ಪ ಚುಂಚನೂರ ಸ್ವಾಗತಿಸಿದರು. ಮನಿಕಟ್ಟಿ ಶಾಲೆಯ ಶಿಕ್ಷಕ ಎಂ.ಪಿ.ಪಾಟೀಲ ನಿರೂಪಿಸಿದರು.ಜನತಾ ಕಾಲನಿ ಚುಳಕಿ ಶಾಲೆಯ ಶಿಕ್ಷಕ ಎಚ್.ಕೆ.ಲಮಾಣಿ ವಂದಿಸಿದರು.