ವ್ಯಕ್ತಿಯೊಬ್ಬ ಮನಸು ಮಾಡಿದರೆ ಹೋರಾಟಗಾರನಾಗಿ, ಕೃಷಿಕನಾಗಿ, ಸಮಯದಾಯ ಸಂಘಟಕನಾಗಿ, ಮ್ಯಾರಥಾನ್ ಪಟುವಾಗಿ, ಪ್ರಕೃತಿಯೊಂದಿಗೆ ಕ್ಷಣ ಕ್ಷಣವೂ ಸಂಭ್ರಮ ಪಡುತ್ತಾ ಯಶಸ್ವಿ ಉದ್ಯಮಿಯಾಗಿಯೂ ಬೆಳೆದ ಪರಿ ಅಚ್ಚರಿ ಮೂಡಿಸುತ್ತದೆ… |
ಬೆಂಗಳೂರು – ರಾಜ್ಯ ಹಾಗೂ ರಾಷ್ಟ್ರಕ್ಕೆ ಅನೇಕ ಸಾಧಕರು ರಾಮನಗರ ದ ಮಡಿಲಿನಿಂದ ಹೊರಹೊಮ್ಮಿದ್ದು, ಅನೇಕರು ದೇಶದ ಹಲವು ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ಸಾಧಿಸುವ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಸಿ ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ. ಆದರೆ ಎಲ್ಲ ರೀತಿಯ ಅಡೆತಡೆಗಳನ್ನು ಮೆಟ್ಟಿನಿಂತು ಇಂದು ರಾಜ್ಯ ಮಾತ್ರವಲ್ಲ – ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸಿರುವ ಸಾವಯವ ಕೃಷಿ ಹರಿಕಾರ ಹುಣಸನಹಳ್ಳಿ ರಾಮಚಂದ್ರಯ್ಯ ಜಯರಾಮ್ ಮಾದರಿ !!
ಬೆಂಗಳೂರು ನಗರದ ಮಂತ್ರಿ ಮಾಲ್ ಸಮೀಪದಲ್ಲಿ ಇರುವ ಸಂಪಿಗೆ ರಸ್ತೆಯ ಮೆಟ್ರೋ ಸ್ಟೇಷನ್ ಎದುರು ಇರುವ ಗ್ರೀನ್ ಪಾಥ್ ಸಾವಯವ ರೆಸ್ಟೋರೆಂಟ್ ನಲ್ಲಿ ಸತತವಾಗಿ ಸಂತೆ ನಡೆಯುತ್ತಿದ್ದು,ಪೆಬ್ರವರಿ 16ರಂದು 62 ನೇ ವಾರದ ಸಾವಯವ ಸಂತೆ !!
ಈ ಸಾವಯವ ಸಂತೆಯ ಬಗ್ಗೆ ನನ್ನ ಕಾಲೇಜು ದಿನಗಳಲ್ಲಿ ನನ್ನ ಜೊತೆಗೆ ಓದುತ್ತಾ ಇದ್ದ ಹಾಗೂ ಈಗ ಭರತನಾಟ್ಯ ಪ್ರಕಾರ ದಲ್ಲಿ ವಿದುಷಿ ಆಗಿ ಸಾಧನೆ ಮಾಡಿರುವ ಮಲೆನಾಡಿನ ಶ್ರೀಮತಿ ಮಂದಸ್ಮಿತಾ ಅವರು ಸಾವಯವ ಸಂತೆ ಬಗ್ಗೆ ತಿಳಿಸಿದಾಗ ಸಾವಯವ ಸಂತೆ ನೋಡಲು ಹೋದಾಗ ಮಾತಿಗೆ ಸಿಕ್ಕಿದ್ದರು ಸಾವಯವ ಸಂತೆಯ ರೂವಾರಿ, ಸಾವಯವ ಕೃಷಿಯ ಹರಿಕಾರ ಹೆಚ್. ಆರ್. ಜಯರಾಮ್.
ಬೆಂಗಳೂರಿಗೆ ಬಂದು ಲಾಯರ್ ವೃತ್ತಿ ಆರಂಭ ಮಾಡಿದ ಇವರನ್ನು ಅಪ್ಪಿಕೊಂಡಿದ್ದು ಹಸಿರು ಹಾದಿ, ಅಂದರೆ ಸಾವಯವ ಕೃಷಿ !!
ಸಾವಯವ ಕೃಷಿ ಪ್ರಚಲಿತವಿಲ್ಲದ ದಿನಗಳಲ್ಲಿ ಸುಮಾರು 25ವರ್ಷಗಳ ಹಿಂದೆ ಸಾವಯವ ಕೃಷಿಕರಾಗಿ, ಸಾವಯವ ಕೃಷಿಯನ್ನು ಒಂದು ಚಳವಳಿಯಾಗಿ ರೂಪಿಸಿ ದೇಶ – ವಿದೇಶಗಳ ರೈತರನ್ನು ಪ್ರೇರೇಪಿಸುವ ಹಾಗೂ ಸಾವಯವ ಆಹಾರದ ಬಳಕೆದಾರರನ್ನು ಜಾಗೃತಿಗೊಳಿಸುವ ಮೂಲಕ ಸುಸ್ಥಿರ ಬದುಕಿನ ಆಧ್ಯಾತ್ಮಿಕತೆಯನ್ನು ಸಾರುವ ಹೊಸ ತಲೆಮಾರಿನ ಸಂತ ಎಂದರೆ ಅತಿಶಯೋಕ್ತಿ ಅಲ್ಲ !
ಆಹಾರ – ಅರಣ್ಯ Food -Forest ಎಂಬ ಹೊಸ ಮಾದರಿಯ ಸುಕೃಷಿ ಎಂಬ ಸಾವಯವ ತೋಟವನ್ನು ಬೆಂಗಳೂರಿನ ಹತ್ತಿರದಲ್ಲಿಯೇ ಕಟ್ಟಿದ್ದಾರೆ. ಸಿಲಿಕಾನ್ ಸಿಟಿಯ ಕೇಂದ್ರ ಭಾಗವಾದ ಮಂತ್ರಿ ಮಾಲ್ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿ ಮಲ್ಲೇಶ್ವರಂ ನಲ್ಲಿ ದೇಶದ ಅತೀ ದೊಡ್ಡ ಗ್ರೀನ್ ಪಾಥ್ ಆರ್ಗ್ಯಾನಿಕ್ ಸ್ಟೇಟ್ – ಹಸಿರು ತೋಟ ಎಂಬ ದೇಶದ ಅತೀ ದೊಡ್ಡ ಸಾವಯವ ತಾಣವನ್ನು ರೂಪಿಸಿದ ಗ್ರೀನ್ ಪಾಥ್ ಸಂಸ್ಥೆಯ ಸಂಸ್ಥಾಪಕ -ಸಾವಯವ ಕೃಷಿಕ ಎಚ್. ಆರ್. ಜಯರಾಮ್ ಅವರೊಂದಿಗೆ ಪತ್ರಿಕೆ ವಿಶೇಷ ಸಂದರ್ಶನ ನಡೆಸಿದ್ದು ಅದರ ವಿವರಗಳು ಓದುಗರಿಗೆ ಅರ್ಪಣೆ…
ಪತ್ರಿಕೆ: ನಿಮ್ಮ ಪರಿಚಯ ತಿಳಿಸಿ
ಎಚ್. ಆರ್. ಜಯರಾಮ್ : ನಾನು ಕರ್ನಾಟಕ ಮತ್ತು ತಮಿಳುನಾಡು ಬಾರ್ಡರ್ ನ ಹುಣಸನಹಳ್ಳಿಯಲ್ಲಿ 14ನೇ ಜೂನ್ 1956ರಂದು ಜನಿಸಿದೆ., ನನ್ನ ತಂದೆ ಕೆ. ಜೆ. ರಾಮಚಂದ್ರಯ್ಯ ಹಾಗೂ ತಾಯಿ ನಾಗಮ್ಮ. ವಿದ್ಯಾಭ್ಯಾಸ ಬಿ. ಎ., ಎಲ್. ಎಲ್. ಬಿ,
ಪತ್ರಿಕೆ : ಯಾವೆಲ್ಲ ಪ್ರಶಸ್ತಿ ಗಳು ನಿಮಗೆ ಸಂದಿವೆ?
ಎಚ್. ಆರ್ : ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ಅಂದರೆ ನವೆಂಬರ್ 2024 ರಂದು, ಕೃಷಿ ವಿಭಾಗದಲ್ಲಿ ಸುರ್ವಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಪತ್ರಿಕೆ : ನಿಮ್ಮನ್ನು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಯಾವಾಗ?
ಎಚ್. ಆರ್ : 1998 ರ ಆರಂಭದಲ್ಲಿ, ನಾನು ಭೂಮಿಯನ್ನು ಖರೀದಿ ಮಾಡಿದಾಗ ಅದು ಬಂಜರು ಭೂಮಿ. ಅದರಲ್ಲಿ ನಾನು ಒಂದು ವಿಶಿಷ್ಟ ರೀತಿಯ ಸಾವಯವ ಕೃಷಿ ಆರಂಭ ಮಾಡಿದೆ.
ಪತ್ರಿಕೆ : ಏನಿದು ಸಾವಯವ ಸಂತೆ?
ಎಚ್. ಆರ್: ಪ್ರಸುತ್ತ ಮನುಷ್ಯರ ಜೀವನ ರಾಸಾಯನಿಕಯುಕ್ತ ಪದಾರ್ಥಗಳ ಹಾವಳಿಗೆ ಬಂಧಿಯಾಗಿದೆ. ಈ ಹಾನಿಕರ ರಾಸಾಯನಿಕಗಳಿಂದ ಪ್ರಸುತ್ತ ಜನರ ಬದುಕನ್ನು ಬಿಡುಗಡೆಗೊಳಿಸಿ ಹಾಗೂ ಭವಿಷ್ಯದ ಜನರ ಜೀವನವನ್ನು ಹಸನಾಗಿಸಲು ಸಾವಯವ ಆಹಾರ ಪದ್ಧತಿಯ ಮೂಲಕ ಬದಲಾವಣೆ ಬಯಸಿ ಪ್ರಾರಂಭಿಸಿದ ವಿಭಿನ್ನ ಕಾರ್ಯಕ್ರಮವೇ ನಮ್ಮ ಸಾವಯವ ಸಂತೆ !!
ಪತ್ರಿಕೆ : ಎಷ್ಟು ದಿನಗಳಿಂದ ಸಾವಯವ ಸಂತೆ ನಡೆಯುತ್ತಿದೆ?
ಎಚ್. ಆರ್ : 62 ವಾರಗಳಿಂದ ಸಾವಯವ ಸಂತೆ ನಡೆಯುತ್ತಿದೆ.
ಪತ್ರಿಕೆ : ಸಾವಯವ ಸಂತೆ ಯಲ್ಲಿ ಏನೆಲ್ಲ ಇರುತ್ತದೆ ?
ಎಚ್. ಆರ್. : ಮಲೆನಾಡಿನ ಉತ್ಪನ್ನ ಗಳು, ಸಾವಯವ ತರಕಾರಿ, ಸಾವಯವ ಹಸಿರು ಸೊಪ್ಪು ಹಾಗೂ ಇನ್ನೂ ಅನೇಕ ಸಾವಯವ ಕೃಷಿ ಕುರಿತು ಮಾಹಿತಿ ಹಂಚಿಕೊಳ್ಳುವುದು ಮತ್ತು ಸಿರಿಧಾನ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾವಯವ ಕೃಷಿ ಕುರಿತು ವಿಚಾರ ವಿನಿಮಯ !!
ಸಂದರ್ಶನ ಬರಹ :, ತೀರ್ಥಹಳ್ಳಿ ಅನಂತ ಕಲ್ಲಾಪುರ