ದಿ. ೧೯ರಂದು ಘೋಷಣೆಯಾದರೆ ಸತ್ಕಾರ ಇಲ್ಲದಿದ್ದರೆ ಮುತ್ತಿಗೆ.
ಮೂಡಲಗಿ: ಇದೇ ದಿ. ೧೯ ರೊಳಗೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡದಿದ್ದರೆ ದಿ. ೨೨ ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ೨೫ ಲಕ್ಷದಷ್ಟು ಜನರಿಂದ ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ಬೆಳಗಾವಿ ಜಿಲ್ಲಾಧ್ಯಕ್ಷ ನಿಂಗಪ್ಪ ಫಿರೋಜಿ ಹೇಳಿದರು.
ಈ ಸಂದರ್ಭದಲ್ಲಿ ಯಾರಿಗೂ ಆಹಾರದ ತೊಂದರೆಯಾಗದಂತೆ ಸಮಾಜದ ಎಲ್ಲಾ ಬಾಂಧವರು ಬುತ್ತಿ ತರಬೇಕು ಇದಲ್ಲದೆ ಪ್ರತಿ ಮನೆಗೆ ೨೧ ರೊಟ್ಟಿ ಮಾಡಿ ತರಬೇಕು. ನಮ್ಮ ಹೋರಾಟಕ್ಕೆ ಉಳಿದ ಸಹೋದರ ಸಮಾಜದವರಾದ ಉಪ್ಪಾರ, ತಳವಾರ, ಹಡಪದ ಸಮಾಜ ಸೇರಿದಂತೆ ಎಲ್ಲಾ ಸಮಾಜದವರು ಬೆಂಬಲ ನೀಡುತ್ತಿದ್ದಾರೆ. ನಾವು ಈ ಹೋರಾಟ ಮೂಲಕ ರಾಜಕೀಯ ಮಾಡುತ್ತಿರುವುದಾಗಿ ಕೆಲವರು ಹೇಳುತ್ತಿದ್ದು ಇದರಲ್ಲಿ ನಾವು ಯಾವುದೇ ರೀತಿಯ ರಾಜಕಾರಣ ಮಾಡುತ್ತಿಲ್ಲ ಎಂದು ಫಿರೋಜಿ ಸ್ಪಷ್ಟಪಡಿಸಿದರು.
ಈ ಬೃಹತ್ ಹೋರಾಟ ಯಶಸ್ವಿಗೊಳಿಸಲು ಪಂಚಮಸಾಲಿ ಸಮಾಜದ ಯುವಕರು ಯೋಧರಂತೆ ಕೆಲಸ ಮಾಡಬೇಕು. ಪ್ರತಿ ಮನೆಗೆ ಭೇಟಿ ಕೊಟ್ಟು ಅವರಿಗೆ ಹೇಳಿ, ೨೧ ರೊಟ್ಟಿ ತೆಗೆದುಕೊಂಡು, ಹೋರಾಟಕ್ಕೆ ಬರುವವರು ತಂತಮ್ಮ ಜೊತೆ ಹಾಸಿಗೆ, ಹೊದಿಕೆ ಅಲ್ಲದೆ ಬುತ್ತಿ ತೆಗೆದುಕೊಂಡು ಬರಲು ತಿಳಿಸಬೇಕು ಎಂದರು.
ಡಾ. ನಾಗರಾಳ ಮಾತನಾಡಿ, ಎರಡು ವರ್ಷಗಳಿಂದ ನಾವು ಪಂಚಮಸಾಲಿಗಳು ಹೋರಾಟ ಮಾಡುತ್ತಿದ್ದೇವೆ. ಈಗ ಶ್ರೀ ಮೃತ್ಯುಂಜಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮಾಡು ಇಲ್ಲವೆ ಮಡಿ, ಮಡಿಯುವುದರೊಳಗೆ ಮೀಸಲಾತಿ ಪಡಿ ಎಂಬ ಘೋಷಣೆಯೊಂದಿಗೆ ಹೋರಾಟಕ್ಕೆ ಇಳಿದಿದ್ದೇವೆ. ಆಶ್ವಾಸನೆ ನೀಡಿದಂತೆ ಡಿ.೧೯ ರೊಳಗೆ ಮೀಸಲಾತಿ ನೀಡಿದರೆ ಇಡೀ ಸಂಪುಟವನ್ನು ಸತ್ಕರಿಸುತ್ತೇವೆ ಇಲ್ಲವಾದರೆ ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.
ಈ ಹೋರಾಟದ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಬಂದ ಪಂಚಮಸಾಲಿ ಬಂಧುಗಳಿಗೂ ಪ್ರಸಾದದ ವ್ಯವಸ್ಥೆ ಮಾಡಿ ಎಲ್ಲ ಸಿದ್ಧತೆಗಳೊಂದಿಗೆ ಹೋರಾಟ ಮಾಡಲಿದ್ದೇವೆ.
ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಫೈರ್ ಬ್ರಾಂಡ್ ಬಸವರಾಜ ಪಾಟೀಲ ಯತ್ನಾಳ ಶಿವಶಂಕರ, ಈರಣ್ಣ ಕಡಾಡಿ, ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಅನೇಕ ನಾಯಕರು ನಮ್ಮ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾವಸಾಬ ಬೆಳಕೂಡ, ಬಾಳೇಶ ಶಿವಾಪೂರ, ಶ್ರೀಮಂತಗೌಡಾ ಪಾಟೀಲ ಉಪಸ್ಥಿತರಿದ್ದರು.